Siddaramaiah: ಸಿಎಂ ಕುರ್ಚಿ ಕಿತ್ತಾಟದ ನಡುವೆ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್ ಬಿಗ್ ಶಾಕ್
ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕಿತ್ತಾಟ ತುಸು ತಣ್ಣಗಾದಂತಿದೆ. ಮತ್ತೊಂದೆಡೆ ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ ಶುರುವಾಗಿದೆ. ಅಧಿವೇಶನ ಇರುವ ಕಾರಣಕ್ಕೆ ಪಕ್ಷದಲ್ಲಿ ಯಾವುದೇ ಗೊಂದಲ ಇರಬಾರದು ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ಬ್ರೇಕ್ ಹಾಕಿದ್ದರು. ಇನ್ನೇನು ಎಲ್ಲ ಗೊಂದಲಗಳು ಪರಿಹಾರವಾಯ್ತಲ್ಲ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್ ಬಿಗ್‌ಶಾಕ್ ನೀಡಿದೆ.
ಮುಡಾ ಕೇಸ್‌ನಿಂದಾಗಿ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಅಲುಗಾಡುವ ಮಟ್ಟಕ್ಕೆ ತಲುಪಿತ್ತು. ಆದರೆ ಈ ಪ್ರಕರಣದಿಂದ ಅವರಿಗೆ ಇತ್ತೀಚೆಗೆ ರಿಲೀಫ್ ಕೂಡ ಸಿಕ್ಕಿತ್ತು. ಇದೀಗ ಮತ್ತೊಂದು ಹಳೆಯ ಪ್ರಕರಣವು ಸಿದ್ದರಾಮಯ್ಯ ಅವರ ಬೆನ್ನುಹತ್ತಿದೆ. 2023ರಲ್ಲಿ ವರುಣಾ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿ ಸಿದ್ದರಾಮಯ್ಯ ಗೆದ್ದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈಗ ಇದೇ ಪ್ರಕರಣ ಸಂಬಂಧಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಕೆ.ಶಂಕರ್ ಎಂಬುವವರು ಸಿದ್ದರಾಮಯ್ಯ ಅವರ ವಿರುದ್ಧ ಈ ಆರೋಪ ಮಾಡಿದ್ದರು. ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಅವರ ಆಯ್ಕೆಯನ್ನು ಪ್ರಶ್ನಿಸಿದ್ದರು. ಈ ಹಿಂದೆ ಶಂಕರ್ ಅವರ ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್, ಸಿದ್ದರಾಮಯ್ಯ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು. ಈ ಗೆಲುವನ್ನು ಪ್ರಶ್ನಿಸಿ ಶಂಕರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿದೆ. ಇಂದು ಇದರ ವಿಚಾರಣೆಯೂ ನಡೆಸಿ, ಸಿದ್ದರಾಮಯ್ಯ ಮತ್ತು ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದೆ. ಇದರಿಂದ ಸಿಎಂ ಕುರ್ಚಿ ಕಿತ್ತಾಟದ ಟೆನ್ಷನ್‌ನಲ್ಲಿರುವ ಸಿದ್ದರಾಮಯ್ಯ ಅವರಿಗೆ ಮತ್ತೊಂದು ವಿಘ್ನ ಎದುರಾಗಿದೆ.
ಸಿದ್ದರಾಮಯ್ಯ ಮೇಲಿನ ಆರೋಪವೇನು?
ಸಿದ್ದರಾಮಯ್ಯ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರದ ಮತದಾರರಿಗೆ ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿದ್ದರು. ಇದರಿಂದಲೇ ಅವರು ಗೆಲುವು ಸಾಧಿಸಿದ್ದಾರೆ. ಆಮಿಷಗಳನ್ನು ನೀಡಿ ಮತದಾರರನ್ನು ಸೆಳೆಯುವುದು ಚುನಾವಣಾ ನಿಯಮಗಳಿಗೆ ವಿರುದ್ಧ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮೊದಲೇ ಗೊತ್ತಿತ್ತು. ಅಲ್ಲದೇ ಗ್ಯಾರಂಟಿ ಕಾರ್ಡ್ ಮೇಲೂ ಅವರೇ ಸಹಿ ಮಾಡುವ ಮೂಲಕ ಮತದಾರರಿಗೆ ಆಮಿಷ ನೀಡಿ ಮತ ಕೇಳಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರ ಆಯ್ಕೆ ಅಸಿಂಧುಗೊಳಿಸಿ ಎಂದು ಮೈಸೂರಿನ ವರುಣ ಹೋಬಳಿಯ ಶಂಕರ್ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹಳೆಯ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.












Click it and Unblock the Notifications