ವರುಣಾ ಕ್ಷೇತ್ರಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಬಂದು ದುಡಿದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ ಸಿದ್ದರಾಮಯ್ಯ
ಬೆಂಗಳೂರು, ಮೇ 11: ಮೇ 10 ರಂದು ಮುಕ್ತಾಯವಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ( Karnataka Assembly Elections 2023 ) ಫಲಿತಾಂಶಗಳು ಮೇ 13 ರಂದು ಹೊರಬರಲಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದ್ದರೆ, ಕೆಲವು ಸಮೀಕ್ಷೆಗಳು ಅತಂತ್ರ ಫಲಿತಾಂಶಗಳ ಬಗ್ಗೆ ಸುಳಿವು ನೀಡಿವೆ. ಆದರೂ, ಅಧಿಕಾರಕ್ಕೆ ಬಂದೇ ಬರುವುದಾಗಿ ಕಾಂಗ್ರೆಸ್ ನಾಯಕರು ಇದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕಾಂಗ್ರೆಸ್ ಪಕ್ಷದ ಹೆಮ್ಮೆಯ ಕಾರ್ಯಕರ್ತರು ಮತ್ತು ಅಭಿಮಾನಿ ಬಂಧುಗಳೇ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ರಾತ್ರಿ-ಹಗಲೆನ್ನದೆ, ಊಟ-ತಿಂಡಿ-ವಿಶ್ರಾಂತಿಯನ್ನು ಮರೆತು ನಿರಂತರವಾಗಿ ಕೆಲಸ ಮಾಡಿದ ನಿಮಗೆಲ್ಲರಿಗೂ ಅಭಿನಂದನೆಗಳು ಮತ್ತು ನನ್ನ ಧನ್ಯವಾದಗಳು' ಎಂದು ಹೇಳಿದ್ದಾರೆ.

'ನಾನು ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಮಾತ್ರವಲ್ಲ, ಬೇರೆ ರಾಜ್ಯಗಳಿಂದಲೂ ಬಂದು ನನ್ನ ಮೇಲಿನ ಪ್ರೀತಿ-ಅಭಿಮಾನದಿಂದ ತಮ್ಮ ಪಾಡಿಗೆ ತಾವು ಪ್ರಚಾರ ಮಾಡಿದ್ದಾರೆ. ಅವರಲ್ಲೆರನ್ನು ನನಗೆ ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸಲು ಕೂಡಾ ಸಾಧ್ಯವಾಗಿಲ್ಲ' ಎಂದೂ ಅವರು ತಿಳಿಸಿದ್ದಾರೆ.
'ಈ ಪ್ರೀತಿ ಮತ್ತು ಅಭಿಮಾನವೇ ನನ್ನ ಮತ್ತು ಕಾಂಗ್ರೆಸ್ ಪಕ್ಷದ ಶಕ್ತಿ. ಇವರೆಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು' ಎಂದು ಹೇಳಿದ್ದಾರೆ.

'ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ನನ್ನದೊಂದು ವಿಶೇಷ ಮನವಿ: ಚುನಾವಣೆಗಾಗಿ ಮನೆ ಮತ್ತು ಸಂಸಾರ ತೊರೆದು ಕೆಲಸ ಮಾಡಿದ್ದೀರಿ. ಈಗ ಸ್ವಲ್ಪ ಬಿಡುವು ಮಾಡಿಕೊಂಡು ತಂದೆ-ತಾಯಿ, ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯಿರಿ. ಪ್ರಾಮಾಣಿಕವಾದ ನಮ್ಮ ಹೋರಾಟ ಖಂಡಿತ ಫಲಪ್ರದವಾಗುತ್ತದೆ. ಮತ್ತೊಮ್ಮೆ ನಿಮಗೆಲ್ಲರಿಗೆ ಧನ್ಯವಾದಗಳು ಮತ್ತು ಶುಭಾಶಯಗಳು' ಎಂದು ತಿಳಿಸಿದ್ದಾರೆ.
ಧನ್ಯವಾದ ಹೇಳಿದ ಜಮೀರ್
ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಜೊತೆಗೂಡಿ ಹಗಲಿರುಳು ದುಡಿದ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತ ಬಂಧುಗಳಿಗೂ ಹಾಗೂ ಮುಖಂಡರಿಗೂ ತುಂಬುಹೃದಯದ ಧನ್ಯವಾದಗಳು. ತಮ್ಮ ಶ್ರಮಕ್ಕೆ ಖಂಡಿತಾ ಫಲ ಸಿಗಲಿದೆ . ಚಾಮರಾಜಪೇಟೆ ಕ್ಷೇತ್ರದ ಅಭಿವೃದ್ಧಿಯ ನನ್ನ ಸಂಕಲ್ಪಕ್ಕೆ ಬೆಂಬಲಿಸಿ, ಮತನೀಡಿ ಹರಸಿದ ಎಲ್ಲಾ ಮತದಾರರಿಗೂ ನಾನು ಕೃತಜ್ಞ ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.












Click it and Unblock the Notifications