ಸಿದ್ದರಾಮಯ್ಯ, ಡಿಕೆಶಿ: ಹೈಕಮಾಂಡ್‌ನಲ್ಲೂ ಎರಡು ಬಣ?
ಬೆಂಗಳೂರು, ಜುಲೈ 01: ಕರ್ನಾಟಕ ಕಾಂಗ್ರೆಸ್‌ನಲ್ಲಿ ಚಟುವಟಿಕೆ ಜೋರಾಗಿದೆ. ಡಿ. ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ, ಹೆಚ್ಚುವರಿ ಡಿಸಿಎಂಗಳ ನೇಮಕ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಬಹಿರಂಗವಾಗಿಯೇ ಚರ್ಚೆಗಳು ಆರಂಭವಾಗಿವೆ. ಈ ಚರ್ಚೆಗಳು ಹೈಕಮಾಂಡ್ ತನಕವೂ ತಲುಪಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಹೀಗೆ ಎರಡು ಬಣ ರಾಜಕೀಯವಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಈಗ ಇದೇ ರೀತಿ ಹೈಕಮಾಂಡ್‌ನಲ್ಲಿಯೂ ಎರಡು ಬಣವಾಗಿದೆಯೇ? ಎಂಬ ಪ್ರಶ್ನೆ ಎದ್ದಿದೆ.

ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ದೆಹಲಿ ಪ್ರವಾಸದಲ್ಲಿದ್ದರು. ಉಭಯ ನಾಯಕರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ರಾಜ್ಯ ರಾಜಕೀಯದ ಬೆಳವಣಿಗೆ ಕುರಿತು ಮಾಹಿತಿ ನೀಡಿದ್ದಾರೆ.
ಎರಡು ಬಣವಾದ ಹೈಕಮಾಂಡ್?; ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ವಿಚಾರದಲ್ಲಿ ಹೈಕಮಾಂಡ್ ಸಹ ಎರಡು ಬಣವಾಗಿದೆ ಎಂಬ ಸುದ್ದಿ ಹಬ್ಬಿದೆ. ಶನಿವಾರ ಸಂಜೆ ಸಿದ್ದರಾಮಯ್ಯ ಕೆಲವು ಸಚಿವರ ಜೊತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದರು.
ಜೊತೆಯಿದ್ದ ಸಚಿವರನ್ನು ಹೊರಗೆ ಕಳಿಸಿ ರಾಹುಲ್ ಗಾಂಧಿ ಜೊತೆ 8 ನಿಮಿಷಗಳ ಕಾಲ ಸಿದ್ದರಾಮಯ್ಯ ರಹಸ್ಯ ಮಾತುಕತೆ ನಡೆಸಿದ್ದಾರೆ. ಆದರೆ ಈ ಮಾತುಕತೆಯ ಪ್ರಮುಖ ಅಂಶ ಏನು? ಎಂಬುದು ತಿಳಿದುಬಂದಿಲ್ಲ. ಪಕ್ಷದ ನಾಯಕರ ಮಾಹಿತಿಗಳ ಪ್ರಕಾರ ಕೆಲವು ಹುದ್ದೆಗಳ ಬದಲಾವಣೆ ಕುರಿತು ಚರ್ಚೆಗಳು ನಡೆದಿವೆ.
ಜಿ. ಪರಮೇಶ್ವರ, ಡಾ. ಎಚ್. ಸಿ. ಮಹದೇವಪ್ಪ, ಕೆಜೆ ಜಾರ್ಜ್ ಮುಂತಾದವರು ಸಿದ್ದರಾಮಯ್ಯ ಜೊತೆ ರಾಹುಲ್ ಗಾಂಧಿ ಭೇಟಿ ಮಾಡಿದರು. ಆದರೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಯಾಕೆ ಈ ನಿಯೋಗದಲ್ಲಿ ಇರಲಿಲ್ಲ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಶನಿವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಬಳಿಕ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್ ಆದರು. ಆದರೆ ಡಿ. ಕೆ. ಶಿವಕುಮಾರ್ ಅಲ್ಲೇ ಉಳಿದರು. ಭಾನುವಾರ ಬೆಳಗ್ಗೆ ಡಿ. ಕೆ. ಶಿವಕುಮಾರ್ ಒಬ್ಬರೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಮಾತುಕತೆ ನಡೆಸಿದರು.
ಡಿ. ಕೆ. ಶಿವಕುಮಾರ್ ಬಳಿ ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಸೇರಿ ಎರಡು ಮಹತ್ವದ ಖಾತೆಗಳಿವೆ. ಅವರು ಉಪ ಮುಖ್ಯಮಂತ್ರಿಯೂ ಹೌದು. ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬೇರೆ ನಾಯಕರಿಗೆ ನೀಡಬೇಕು ಎಂಬ ಕೂಗು ಕಾಂಗ್ರೆಸ್‌ನಲ್ಲಿ ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವಾಗ ಲೋಕಸಭೆ ಚುನಾವಣೆ 2024ರ ತನಕ ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರಬೇಕು ಎಂದು ಸೂಚಿಸಲಾಗಿತ್ತು ಎಂಬುದು ಮಾಹಿತಿ. ಈಗ ಚುನಾವಣೆ ಮುಗಿದಿದ್ದು, ಅಧ್ಯಕ್ಷರನ್ನು ಬದಲಾವಣೆ ಮಾಡಿ ಎಂದು ಬೇಡಿಕೆ ಇಡಲಾಗುತ್ತಿದೆ.
ಡಿ. ಕೆ. ಶಿವಕುಮಾರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಮುಗಿಯುವ ತನಕ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿಗೆ ವಾಪಸ್ ಆದ ಡಿ. ಕೆ. ಶಿವಕುಮಾರ್ ಡಾ. ಜಿ. ಪರಮೇಶ್ವರಗೆ ಕರೆ ಮಾಡಿ ಈ ಸೂಚನೆಯನ್ನು ತಿಳಿಸಿದ್ದಾರೆ ಎಂಬ ಮಾಹಿತಿ ಇದೆ.
ರಾಹುಲ್ ಗಾಂಧಿ ಆಪ್ತರಾದ ಕೆ. ಸಿ. ವೇಣುಗೋಪಾಲ್ ಶುಕ್ರವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸುಧೀರ್ಘ ಮಾತುಕತೆ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ, ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿಯನ್ನು ಪಡೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಯಾವ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಇಬ್ಬರು ನಾಯಕರನ್ನು ಕಡೆಗಣಿಸುವಂತಿಲ್ಲ. ಆದ್ದರಿಂದ ಇಬ್ಬರು ನಾಯಕರು ಒಪ್ಪಿಗೆ ನೀಡುವ ನಾಯಕನನ್ನು ಅಧ್ಯಕ್ಷರನ್ನಾಗಿ ಮಾಡುವ ಹೊಸ ಸೂತ್ರವೊಂದನ್ನು ಹೈಕಮಾಂಡ್ ನಾಯಕರು ಜಾರಿಗೊಳಿಸಲಿದ್ದಾರೆ ಎಂಬ ಮಾಹಿತಿ ಇದೆ.












Click it and Unblock the Notifications