ಬಿಜೆಪಿ ರಾಜ್ಯಾಧ್ಯಕ್ಷರ ಕಾರು ಚಾಲಕ ಪ್ರವೀಣ್: ಕಟೀಲ್ ವಿಚಾರಣೆ ನಡೆಸಿ- ಸಿದ್ದು
ಬೆಂಗಳೂರು ಜುಲೈ 29: ಒಂದು ಕಾಲದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಅವರ ಕಾರು ಚಾಲಕನಾಗಿದ್ದ ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣದಲ್ಲಿ ನಳಿನ್‌ಕುಮಾರ ಕಟೀಲ್ ಅವರನ್ನು ವಿಚಾರಣೆಗೆ ಒಳಪಡಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಮಂಗಳವಾರ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಆಗಿದೆ. ಮೃತ ಪ್ರವೀಣ್ ಒಂದು ಕಾಲದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಅವರಿಗೆ ಆಪ್ತನಾಗಿದ್ದು, ಅವರ ಕಾರು ಚಾಲಕನಾಗಿದ್ದರು ಎನ್ನಲಾಗಿದೆ. ಚಾಲಕನಾಗಿ ಇಷ್ಟೊಂದು ಆತ್ಮೀಯರಾಗಿದ್ದವರು ಕಟಿಲ್ ರಿಂದ ದೂರವಾಗಿದ್ದು ಏಕೆ?. ದೂರವಾದ ಬಳಿಕ ಇದೀಗ ಪ್ರವೀಣ್ ಅವರ ಕೊಲೆ ಆಗಿದೆ. ಹೀಗಾಗಿ ನಳಿನ್‌ಕುಮಾರ ಕಟೀಲ್ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಆರೋಪಿಗಳ ಪತ್ತೆಗೆ ಸಹಾಯವಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳಿಗೂ, ಸಂಘ ಪರಿವಾರದೊಳಗಿನ ಆಂತರಿಕ ಬಿಕ್ಕಟ್ಟುಗಳಿಗೂ ಸಂಬಂಧ ಇರುವಂತೆ ಕಾಣುತ್ತಿದೆ. ಈ ಬೆಳವಣಿಗೆಗಳನ್ನು ಕೂಡಾ ಗಮನದಲ್ಲಿಟ್ಟುಕೊಂಡು ಪೊಲೀಸರು ತನಿಖೆ ನಡೆಸಿದರೆ ಸತ್ಯ ಬಯಲಾಗಬಹುದು ಎಂದು ಅವರು ಆರ್‌ಎಸ್‌ಎಸ್ ಕಾಲೆಳೆದರು.

ಬಿಜೆಪಿ ವಿರುದ್ಧದ ಜನಾಕ್ರೋಶ ಬಗ್ಗೆ ತನಿಖೆ
ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅಂತಿಮ ದರ್ಶನಕ್ಕೆ ಆಗಮಿಸಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಸ್ಥಳೀಯ ಶಾಸಕರ ವಿರುದ್ಧ ಜನಾಕ್ರೋಶ ಭುಗಿಲೆದ್ದಿತ್ತು. ಈ ಕುರಿತು ಪೊಲೀಸರು ತನಿಖೆ ಕೈಗೊಳ್ಳಬೇಕಾದ ಅಗತ್ಯವಿದೆ ಎಂದರು.
ಸರ್ಕಾರಕ್ಕೆ ಹಿಂದುಗಳು ಸತ್ತರೆ ಮುಸ್ಲಿಮರ ಮೇಲೆ, ಮುಸ್ಲಿಮರು ಸತ್ತರೆ ಹಿಂದುಗಳ ಮೇಲೆ ಸಂಶಯ ಪಡುವುದು ಸಾಮಾನ್ಯವಾಗಿದೆ. ಪೊಲೀಸ್ ತನಿಖೆಯೂ ಇದೇ ಜಾಡಿನಲ್ಲಿ ಸಾಗುತ್ತಿರುವುದರಿಂದ ಸಾವಿನ ಹಿಂದಿನ ಅಸಲಿ ಸತ್ಯ ಹೊರಗೆ ಬರದೆ ಮುಚ್ಚಿಹೋಗುತ್ತಿದೆ ಎಂದು ದೂರಿದರು.

ಸಿಎಂ ಕುರ್ಚಿ ಉಳಿವು ರಾಜ್ಯದ ಅಳಿವು
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಕ್ಷ ಇಲ್ಲವೇ ಸರ್ಕಾರದ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಬೊಮ್ಮಾಯಿಯವರು ಅಸಹಾಯಕರಾಗಿದ್ದಾರೆ. ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ ಆರ್ಎಸ್ಎಸ್ ಹೇಳಿದಂತೆ ಬೊಂಬೆ ರೀತಿ ಕುಣಿಯುತ್ತಿದ್ದಾರೆ. ಅವರ ಕುರ್ಚಿಯ ಉಳಿವು, ರಾಜ್ಯದ ಅಳಿವಾಗಿದೆ ಎಂದು ಲೇವಡಿ ಮಾಡಿದರು.
ಮೃತ ಕಾರ್ಯಕರ್ತರಿಗೆ ರಾಜ್ಯ ಬಿಜೆಪಿ ಪಕ್ಷದಿಂದ ಎಷ್ಟೇ ಮೊತ್ತದ ಪರಿಹಾರ ಹಣ ನೀಡಿದರೂ ಅದು ಅವರ ಸಂಘಟನೆಗೆ ಸಂಬಂಧಿಸಿದ ವಿಚಾರ. ಆದರೆ ವಿಚಾರಣಾ ಹಂತದಲ್ಲಿರುವ ಹತ್ಯೆ ಪ್ರಕರಣಗಳಲ್ಲಿ ಕುಟುಂಬಗಳಿಗೆ ಪರಿಹಾರ ನೀಡುವಾಗ ಭೇದಭಾವ ಆಗದಂತೆ ಎಚ್ಚರಿಕೆ ವಹಿಸಬೇಕು. ಇದು ಬಿಜೆಪಿಯ ಆದ್ಯ ಕರ್ತವ್ಯಾಗಬೇಕು ಎಂದರು.

ಸಿಎಂ ಮಸೂದ್ ಮನೆಗೆ ಹೋಗದಿರಲು ಕಾರಣವೇನು?
ಬಸವರಾಜ ಬೊಮ್ಮಾಯಿ ಅವರು ಕೇವಲ ಬಿಜೆಪಿ ಕಾರ್ಯಕರ್ತರಿಗಷ್ಟೇ ಮುಖ್ಯಮಂತ್ರಿ ಆಗಿದ್ದಾರೆಯೇ? ಇಲ್ಲವೇ ರಾಜ್ಯದ ಸಮಸ್ತ ಆರುವರೆ ಕೋಟಿ ಜನತೆಗೂ ಮುಖ್ಯಮಮತ್ರಿಯೇ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ್ದ ಬಸವರಾಜ ಬೊಮ್ಮಾಯಿ ಅವರು, ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್ ಮನೆಗೆ ಹೋಗದಿರಲು ಕಾರಣ ಏನೆಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಹತ್ಯೆ ನಡೆಸಿರುವ ದುಷ್ಕರ್ಮಿಗಳು ಯಾವುದೇ ಪಕ್ಷ, ಜಾತಿ, ಧರ್ಮ ಇಲ್ಲವೇ ಸಂಘಟನೆಗಳಿಗೆ ಸೇರಿದ್ದರೂ ಮುಲಾಜಿಲ್ಲದೆ ಅವರನ್ನು ಬಂಧಿಸಿ ಜೈಲಿಗಟ್ಟಬೇಕು. ಯಾವುದಾದರೂ ಸಂಘಟನೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದರೆ ಅವುಗಳನ್ನು ನಿಷೇಧಿಸುವ ದಿಟ್ಟತನವನ್ನು ರಾಜ್ಯ ಬಿಜೆಪಿ ಸರ್ಕಾರ ಪ್ರದರ್ಶಿಸಬೇಕು ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಕಟೀಲ್-ಮುಸ್ಲಿಂರ ಸಂಬಂಧ ಎಂತದ್ದು?
ಇನ್ನು ನಳಿನ್‌ಕುಮಾರ ಕಟೀಲ್ ಅವರು ಬಹಿರಂಗವಾಗಿ ಮುಸ್ಲಿಮರ ಬಗ್ಗೆ ಬೆಂಕಿ ಕಾರಿತ್ತಾರೆ. ಹೀಗಿದ್ದರು ಮುಸ್ಲಿಂ ಉದ್ಯಮಿಗಳ ಜೊತೆ ಅವರಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವುದಾಗಿ ಅವರೇ ಹಲವಾರು ಬಾರಿ ಬಹಿರಂಗ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಕಟೀಲ್ ಮತ್ತು ಮುಸ್ಲಿಂರ ನಡುವಿನ ಈ ಸಂಬಂಧಗಳು ಕೇವಲ ಸಾಮಾಜಿಕವಾದದ್ದೆ? ಅಥವಾ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ್ದೇ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೆ ಹಿಂದುಳಿದ ಜಾತಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಬಿಲ್ಲವ ಯುವಕರೇ ಕೋಮು ಸಂಘರ್ಷಣೆಯಲ್ಲಿ ಬಲಿಯಾಗುತ್ತಿದ್ದಾರೆ?. ರಾಜಕೀಯ ಪ್ರಾತಿನಿಧ್ಯ ಕಳೆದುಕೊಳ್ಳುತ್ತಿರುವ ಈ ಸಮುದಾಯದ ಯುವಕರು ನಡುರಸ್ತೆಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.












Click it and Unblock the Notifications