ಸಿಎಂ ವಿಚಾರವಾಗಿ ಸುಳ್ಳು ಸುದ್ದಿ ಪ್ರಕಟ: ಅದಾನಿಯ ಎನ್‌ಡಿಟಿವಿಯಿಂದ ಕ್ಲ್ಯಾರಿಫಿಕೇಶನ್ ಕೇಳಿದ ಸಿದ್ದರಾಮಯ್ಯ- ಏನಿದು ಅವಘಡ?
ಬೆಂಗಳೂರು, ಏಪ್ರಿಲ್ 04: ಕರ್ನಾಟಕದ ( Karnataka ) ಮುಂದಿನ ಮುಖ್ಯಮಂತ್ರಿ ವಿಚಾರವಾಗಿ 'ಎನ್‌ಡಿಟಿವಿ' ಸುಳ್ಳು ಸುದ್ದಿಯನ್ನು ಪ್ರಕಟಿಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ( Siddaramaiah ) ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅದಾನಿಗೆ ( Goutam Adani ) ಸಂಬಂಧಿಸಿದ ಎನ್‌ಡಿಟಿವಿ ಕ್ಲ್ಯಾರಿಫಿಕೇಶನ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪ್ರಕಟಗೊಂಡಿರುವ ವರದಿಯನ್ನೂ ವೆಬ್‌ಸೈಟ್‌ನಿಂದ ತೆಗೆದುಹಾಕುವಂತೆ ಸೂಚಿಸಿದ್ದಾರೆ.
ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ನಾನು ಆಡದ ಮಾತುಗಳನ್ನು ಉಲ್ಲೇಖಿಸಿ @ndtv ವರದಿಯೊಂದನ್ನು ಪ್ರಕಟಿಸಿದೆ. ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶದಿಂದ ಕೂಡಿದ್ದಾಗಿದೆ.
— Siddaramaiah (@siddaramaiah) April 4, 2023
ಎನ್.ಡಿ ಟಿವಿ ತಕ್ಷಣ ಈ ಬರಹವನ್ನು ಅಳಿಸಿಹಾಕಿ ತಿದ್ದುಪಡಿ ಪ್ರಕಟಿಸಬೇಕು ಎಂದು ಒತ್ತಾಯಿಸುತ್ತೇನೆ. 1/2 pic.twitter.com/AnaUspvVqT
ಕರ್ನಾಟಕದ ಮುಖ್ಯಮಂತ್ರಿ ವಿಚಾರವಾಗಿ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆಂದು ಪ್ರಕಟಿಸಲಾಗಿತ್ತು. 'ಕಾಂಗ್ರೆಸ್ ಗೆದ್ದರೂ ಪಕ್ಷದ ಹೈಕಮಾಂಡ್ ಡಿ ಕೆ ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡಲ್ಲ ಎಂಬುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ' ಎಂದು ಎನ್‌ಡಿಟಿವಿ ಲೇಖನವೊಂದನ್ನು ಪ್ರಕಟಿಸಿತ್ತು.

ಈ ಕುರಿತಾಗಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಟ್ವೀಟ್ ಮಾಡಿದ್ದರು. ಇದೊಂದು ನಕಲಿ ಸುದ್ದಿ ಎಂದು ಅವರು ತಿಳಿಸಿದ್ದಾರೆ. ಎನ್‌ಡಿಟಿವಿ ಸಂದರ್ಶನದ ವಿಡಿಯೊ ತುಣುಕು ಹಾಗೂ ಪ್ರಕಟಗೊಂಡಿರುವ ಆನ್‌ಲೈನ್ ವರದಿಯ ಸ್ಕ್ರೀನ್‌ಶಾಟ್ ಅನ್ನೂ ಸುರ್ಜೇವಾಲಾ ಹಂಚಿಕೊಂಡಿದ್ದಾರೆ.
'ಕರ್ನಾಟಕದಲ್ಲಿ ಬಿಜೆಪಿ ಶಾಸಕರು ಮತ್ತು ಎಂಎಲ್‌ಸಿಗಳು ಪ್ರತಿದಿನವೂ ರಾಜೀನಾಮೆ ನೀಡುತ್ತಿದ್ದಾರೆ. ಬಿಜೆಪಿಯ ಸಂಖ್ಯಾಬಲ ಕುಸಿಯುತ್ತಲೇ ಇದೆ. ಕಾಂಗ್ರೆಸ್ ನಾಯಕರ ನಡುವೆ ನಕಲಿ ಬಿರುಕುಗಳನ್ನು ಸೃಷ್ಟಿಸಲು ಬಿಜೆಪಿ ಅದಾನಿಯವರ NDTV ಅನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿಯ ಮುಳುಗುತ್ತಿರುವ ಹಡಗನ್ನು ಕೈಬಿಡುವ ಕೆಲಸವನ್ನು ನಿಲ್ಲಿಸುವ ಸಮಯ ಬಂದಾಗಿದೆ. #40PercentSarkara ತನ್ನ ಪಾಪಗಳಿಗೆ ಮುಂದಿನ ದಿನಗಳಲ್ಲಿ ದಂಡವನ್ನು ಪಾವತಿಸಬೇಕಾಗುತ್ತದೆ. ಯಾವ ಟಿವಿಗಳೂ ಕೂಡ ಕರ್ನಾಟಕದಲ್ಲಿ ಬಿಜೆಪಿಯನ್ನು ಉಳಿಸಲು ಸಾಧ್ಯವಿಲ್ಲ' ಎಂದು ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.
ಸುರ್ಜೇವಾಲಾರ ಟ್ವೀಟ್ ಅನ್ನು ರಿಶೇರ್ ಮಾಡಿಕೊಂಡಿರುವ ಸಿದ್ದರಾಮಯ್ಯ, 'ಎನ್‌ಡಿಟಿವಿ (ಅದಾನಿ ಟಿವಿ) ಪ್ರಕಟಿಸಿದ ಸುದ್ದಿ ಲೇಖನದಲ್ಲಿ ನಾನು ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಕಾಮೆಂಟ್ ಮಾಡಿದ್ದೇನೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ. ನಾನು ಯಾವತ್ತೂ ಅಂತಹ ಕಾಮೆಂಟ್‌ಗಳನ್ನು ಮಾಡಿಲ್ಲ ಮತ್ತು ಅಂತಹ ಕ್ಷುಲ್ಲಕ ರಾಜಕೀಯವನ್ನು ಎಂದಿಗೂ ಮಾಡುವುದಿಲ್ಲ' ಎಂದು ತಿಳಿಸಿದ್ದಾರೆ.

ಈ ಸುಳ್ಳು ವರದಿ ಬಗ್ಗೆ ಎನ್‌ಡಿಟಿವಿ ಸ್ಪಷ್ಟೀಕರಣವನ್ನು ನೀಡಲೇಬೇಕೆಂದು ನಾನು ಒತ್ತಾಯಿಸುತ್ತೇನೆ. ಆಧಾರ ರಹಿತ ಪೋಸ್ಟ್ ಅನ್ನು ಹಿಂಪಡೆಯಬೇಕೆಂದು ಸೂಚಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಎಚ್‌ಡಿಟಿವಿ ಸಂದರ್ಶನದಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?
ತಾವು ಮತ್ತು ಶಿವಕುಮಾರ್ ಇಬ್ಬರೂ ಉನ್ನತ ಸ್ಥಾನದ ಆಕಾಂಕ್ಷಿಗಳು. ಇದರಲ್ಲಿ ತಪ್ಪೇನಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಮುಖ್ಯಮಂತ್ರಿಯನ್ನು ಚುನಾಯಿತ ಶಾಸಕರು ಆಯ್ಕೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
'ನಾವು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಹೋಗಬೇಕು. ಆಯ್ಕೆಯಾದ ಶಾಸಕರ ಅಭಿಪ್ರಾಯದಂತೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ' ಎಂದು ಸಿದ್ದರಾಮಯ್ಯ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿಯನ್ನು ಇಂದು ಅಂತಿಮಗೊಳಿಸಲಿದೆ.
ಬಿಡುಗೊಂಡಿರುವ ಮೊದಲ ಪಟ್ಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ ಅವರು ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ ಬಿ ಪಾಟೀಲ್ ಅವರು ಬಬಲೇಶ್ವರ ಕ್ಷೇತ್ರದಿಂದ ಕಣಕ್ಕಿಳಿದರೆ, ಸತೀಶ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.












Click it and Unblock the Notifications