ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರಿಗಳ ಜೊತೆ 10 ಗಂಟೆ ಸಿಎಂ ಸಭೆ, ನಿರ್ಣಯಗಳು

|
Google Oneindia Kannada News

ಬೆಂಗಳೂರು, ಅ. 14 : ಕಾಳಸಂತೆಯಲ್ಲಿ ಅಕ್ಕಿ ಮಾರುವವರ, ಖರೀದಿಸುವವರ ವಿರುದ್ಧ ಗೂಂಡಾ ಕಾಯ್ದೆ, ನೆರೆಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹೆಚ್ಚುವರಿ 100 ಕೋಟಿ ರೂ. ಬಿಡುಗಡೆ, ಕಂದಾಯ ಅದಾಲತ್, ಗೈರು ಹಾಜರಾಗುವ ವೈದ್ಯರು, ಶಿಕ್ಷಕರ ಮೇಲೆ ನಿಗಾ, ಭೂ ಒತ್ತುವರಿ ತೆರವಿಗೆ ಖಡಕ್ ಆದೇಶ ಮುಂತಾದ ನಿರ್ಣಯಗಳನ್ನು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ.

ವಿಧಾನಸೌಧದಲ್ಲಿ ಸೋಮವಾರ ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ 10 ಗಂಟೆ ಸಭೆ ನಡೆಸಿದ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅನ್ನಭಾಗ್ಯ ಯೋಜನೆ ಅಕ್ಕಿ ದುರುಪಯೋಗಕ್ಕೆ ಕಾರಣವಾಗುವವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. [ನಿಮ್ಮ ಕೆಲಸದ ಆತ್ಮಾವಲೋಕನ ಮಾಡಿಕೊಳ್ಳಿ]

100 ಕೋಟಿ ಬಿಡುಗಡೆ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರ ಮತ್ತು ಅತಿವೃಷ್ಟಿ ಪರಿಸ್ಥಿತಿಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. 9 ಜಿಲ್ಲೆಗಳ 34 ತಾಲೂಕುಗಳಲ್ಲಿ ಬರ ಇದೆ. ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ 8 ಜಿಲ್ಲೆಗಳಲ್ಲಿ ನಷ್ಟ ಉಂಟಾಗಿದೆ. ಬರ ಮತ್ತು ಅತಿವೃಷ್ಟಿ ಪರಿಹಾರ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಬರ ಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರು ಹಾಗೂ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲು ಅತಿವೃಷ್ಟಿ ಪ್ರದೇಶಗಳಲ್ಲಿ ತುರ್ತು ಕಾಮಗಾರಿ ಆರಂಭಿಸಲು ತಿಳಿಸಲಾಗಿದೆ ಎಂದು ಹೇಳಿದರು. ಒಂದೆರಡು ದಿನಗಳಲ್ಲಿ ಕೇಂದ್ರ ತಂಡ ನೆರೆ ಮತ್ತು ಬರದ ಅಧ್ಯಯನ ನಡೆಸಲು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದ ಸಿಎಂ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹೆಚ್ಚುವರಿಯಾಗಿ 100 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಸಭೆಯ ಇತರ ನಿರ್ಣಯಗಳು ಇಲ್ಲಿವೆ.

ಜನತಾದರ್ಶನದಲ್ಲಿ ಜಿಲ್ಲಾ ಸಮಸ್ಯೆ

ಜನತಾದರ್ಶನದಲ್ಲಿ ಜಿಲ್ಲಾ ಸಮಸ್ಯೆ

ಜಿಲ್ಲಾ ಮಟ್ಟದಲ್ಲಿಯೇ ಬಗೆಹರಿಸಬಹುದಾದ ಬಹುತೇಕ ಸಮಸ್ಯೆಗಳನ್ನು ಹೊತ್ತು ನೊಂದ ನೂರಾರು ಜನರು ದೂರದ ಜಿಲ್ಲೆಗಳಿಂದ ಹಣ ಮತ್ತು ಸಮಯವನ್ನು ವ್ಯಯಮಾಡಿ ಜನತಾದರ್ಶನ ಕಾರ್ಯಕ್ರಮದಲ್ಲಿ ತಮಗೆ ಅಹವಾಲುಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ ಅವರು, ಜನರ ಸಮಸ್ಯೆ ಜಿಲ್ಲೆಗಳಲ್ಲಿ ನಿವಾರಣೆ ಆಗಿಲ್ಲ ಎಂದರೆ ಅದು ಅಧಿಕಾರಿಗಳ ವೈಫಲ್ಯ ಎಂದು ಬಣ್ಣಿಸಬಹುದೇ ಎಂದು ಪ್ರಶ್ನಿಸಿದರು.

ಕಂದಾಯ ಅದಾಲತ್

ಕಂದಾಯ ಅದಾಲತ್

ಖಾತೆ ಬದಲಾವಣೆ, ಪೋಡಿ ಮಾಡಿಕೊಡುವುದು ಹಾಗೂ ಪಹಣೆ ನೀಡುವಿಕೆ ಕಂದಾಯ ಇಲಾಖೆಯಲ್ಲಿನ ನಿರಂತರ ಪ್ರಕ್ರಿಯೆಗಳು. ಖಾತೆ ಬದಲಾವಣೆಯಲ್ಲಿ ಅನಗತ್ಯ ವಿಳಂಬ, ಪೋಡಿ ಮಾಡಿಕೊಡುವಲ್ಲಿ ಲೋಪ, ಪಹಣಿಯಲ್ಲಿ ದಾಖಲೆಗಳ ನಮೂದಿಸುವಲ್ಲಿ ದೋಷಗಳು ತಮ್ಮ ಕಾರ್ಯ ವೈಖರಿಯೇ ಹೀಗಾದರೆ ಹೇಗೆ ? ಎಂದು ಪ್ರಶ್ನಿಸಿದ ಸಿಎಂ, ಆಂದೋಲನದ ಮಾದರಿಯಲ್ಲಿ ಕಂದಾಯ ಅದಾಲತ್ ನಡೆಸಿ ಬಡವರ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸೂಚನೆ ನೀಡಿದರು. ಗ್ರಾಮ ಹಾಗೂ ಹೋಬಳಿ ಮಟ್ಟದ ಭೂ ಲಭ್ಯತೆ ಕುರಿತಂತೆ ನಾಡ ಕಚೇರಿಗಳು, ತಾಲ್ಲೂಕು ಕಚೇರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗಳ ಪ್ರದರ್ಶನಾ ಫಲಕಗಳಲ್ಲಿ ಪ್ರದರ್ಶಿಸಿದರೆ ಸರ್ಕಾರಿ ಜಮೀನು, ಕೆರೆ ಅಂಗಳ ಹಾಗೂ ಗೋಮಾಳ ಭೂಮಿಯ ಒತ್ತುವರಿಗಳನ್ನು ತಡೆಗಟ್ಟಬಹುದಾಗಿದೆ ಎಂದರು.

ಗೈರಾಗುವವರ ಬಗ್ಗೆ ಗಮನ ಹರಿಸಿ

ಗೈರಾಗುವವರ ಬಗ್ಗೆ ಗಮನ ಹರಿಸಿ

ಶಾಲೆಗೇ ಹೋಗದ ಶಿಕ್ಷಕರು, ಆಸ್ಪತ್ರೆಗಳಿಗೇ ತೆರಳದ ವೈದ್ಯರು ಇಂತಹ ಪ್ರಕರಣಗಳನ್ನು ತಡೆಗಟ್ಟಲು ಉನ್ನತ ಅಧಿಕಾರಿಗಳು ವೈಯುಕ್ತಿಕ ಗಮನ ಹರಿಸಬೇಕು ಎಂದು ಹೇಳಿದ ಸಿದ್ದರಾಮಯ್ಯ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳು ದಾಸ್ತಾನಿದ್ದರೂ, ಖಾಸಗಿ ಔಷಧಿ ಅಂಗಡಿಗಳಿಂದ ಔಷಧಿಗಳನ್ನು ಕೆಲವೆಡೆ ವೈದ್ಯರು ಬರೆದುಕೊಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ ಈ ಬಗ್ಗೆಯೂ ಗಮನಹರಿಸಿ ಎಂದು ನಿರ್ದೇಶನ ನೀಡಿದರು.

ಪ್ರತಿಭಟನೆ ನಿಲ್ಲಿಸಲು ಮನವಿ

ಪ್ರತಿಭಟನೆ ನಿಲ್ಲಿಸಲು ಮನವಿ

ಸರ್ಕಾರಿ ಭೂ ಒತ್ತುವರಿ ತೆರವು ವಿಚಾರದಲ್ಲಿ ಕಠಿಣವಾಗಿ ವರ್ತಿಸಿ. ಪೊಲೀಸ್‌ ಸಹಕಾರ‌ದೊಂದಿಗೆ ಕ್ರಮ ಕೈಗೊಳ್ಳಿ. ಯಾವುದೇ ಒತ್ತಡಕ್ಕೆ ಮಣಿಯಬೇಡಿ. ಸರ್ಕಾರಿ ಭೂಮಿ ವಶಕ್ಕೆ ಪಡೆದು ತಂತಿ ಬೇಲಿ ಹಾಕಿ ಭದ್ರಪಡಿಸಿ ಎಂದು ಸೂಚನೆ ನೀಡಿದ ಸಿಎಂ, ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬಂಧ ಎ.ಟಿ.ರಾಮಸ್ವಾಮಿ ವರದಿ ಜಾರಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಭೂ ಒತ್ತುವರಿದಾರರ ವಿರುದ್ಧ ಕ್ರಮಕ್ಕೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಬೇಡಿಕೆ ಈಡೇರಿದ್ದು, ಪ್ರತಿಭಟನೆ ವಾಪಸ್‌ ಪಡೆಯಬೇಕು ಎಂದು ಮನವಿ ಮಾಡಿದರು.

30 ಸಾವಿರ ಹಳ್ಳಿಗಳಲ್ಲಿ ಸ್ಮಶಾನ ನಿರ್ಮಾಣ

30 ಸಾವಿರ ಹಳ್ಳಿಗಳಲ್ಲಿ ಸ್ಮಶಾನ ನಿರ್ಮಾಣ

30 ಸಾವಿರ ಹಳ್ಳಿಗಳಲ್ಲಿ ಸ್ಮಶಾನ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರಿ ಜಮೀನು ಇಲ್ಲದಿದ್ದರೆ, ಖಾಸಗಿ­ಯಾಗಿ ಖರೀದಿಸಿ ಸ್ಮಶಾನಕ್ಕೆ ಮೀಸಲಿಡಲು ನಿರ್ಧರಿಸಲಾಗಿದೆ.

ಸಹಾಯಧನ ಅರ್ಹರನ್ನು ತಲುಪಬೇಕು

ಸಹಾಯಧನ ಅರ್ಹರನ್ನು ತಲುಪಬೇಕು

ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಸೀಟು ಸಿಗದವರಿಗೆ 'ವಿದ್ಯಾಸಿರಿ' ಯೋಜನೆಯಡಿ ಸಹಾಯಧನ ನೀಡುತ್ತಿದ್ದು, ­ಅದನ್ನು ಕೆಲವು ಜಿಲ್ಲೆಗಳಲ್ಲಿ ಸರಿಯಾಗಿ ವಿತರಣೆ ಮಾಡುತ್ತಿಲ್ಲ ಎನ್ನುವ ದೂರುಗಳು ಬಂದಿವೆ ಎಂದು ಹೇಳಿದ ಸಿಎಂ ಸಹಾಯಧನ ಅರ್ಹರಿಗೆ ತಲುಪಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಕೈಗೊಂಡ ಇತರ ನಿರ್ಣಯಗಳು

ಸಭೆಯಲ್ಲಿ ಕೈಗೊಂಡ ಇತರ ನಿರ್ಣಯಗಳು

* ರಾಜ್ಯದ ಆಸ್ಪತ್ರೆಗಳಿಗೆ ಬೇಕಿರುವ ಅರೆ ವೈದ್ಯಕೀಯ ಸಿಬ್ಬಂದಿಗಳ ಶೀಘ್ರ ನೇಮಕ.
* ವಿದ್ಯಾರ್ಥಿನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಆಹಾ­­ರಗುಣಮಟ್ಟ, ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು.
* ಕಟ್ಟಡ ಮಾಲೀಕರಿಂದ ಕಡ್ಡಾಯವಾಗಿ ಆಸ್ತಿ ತೆರಿಗೆ ವಸೂಲಿ ಮಾಡಬೇಕು.
* ಕೆರೆ ಸೇರಿದಂತೆ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.

English summary
Karnataka Chief Minister Siddaramaiah on Monday held a daylong review meeting with officials on the functioning of the government. In a meeting at Vidhana Soudha CM questions to the top bureaucracy on their failure to provide efficient service to people of state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X