ಸಿದ್ದರಾಮಯ್ಯ ಸಂಪುಟ ಪುನಾರಚನೆ, ಮುಂದೇನು?

Posted By:
Subscribe to Oneindia Kannada

ಬೆಂಗಳೂರು, ಜೂನ್ 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಪುನಾರಚನೆಗೆ ವೇದಿಕೆ ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಭಾನುವಾರ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೆಹಲಿಯಿಂದ ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ ಅವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಶನಿವಾರ ಸಂಜೆ ಬೆಂಗಳೂರಿಗೆ ಬಂದಿರುವ ಸಿದ್ದರಾಮಯ್ಯ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. 13 ಸಚಿವರಿಗೆ ಭಾನುವಾರ ಸಂಜೆ 4 ಗಂಟೆಯೊಳಗೆ ರಾಜೀನಾಮೆ ನೀಡುವಂತೆ ಸೂಚನೆ ಕೊಟ್ಟಿದ್ದಾರೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಂಪುಟ ಸೇರುತ್ತಿರುವುದರಿಂದ ಹೊಸ ಸ್ಪೀಕರ್ ಆಯ್ಕೆ ಬಗ್ಗೆ ಚರ್ಚೆ ನಡೆದಿದೆ. [ಸಂಪುಟ ಸೇರುವ ಶಾಸಕರ ಪಟ್ಟಿ]

siddaramaiah

ಸಂಪುಟ ಪುನಾರಚನೆ ಬಗ್ಗೆ ಕೆಲವು ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ವಸತಿ ಸಚಿವ ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಡಬಾರದು ಎಂದು ಮಂಡ್ಯದಲ್ಲಿ ಅಲ್ಲಲ್ಲಿ ಪ್ರತಿಭಟನೆ ನಡೆದಿದೆ. ಸಿದ್ದರಾಮಯ್ಯ ವಿರುದ್ಧ ಅಂಬರೀಶ್ ಅಸಮಾಧಾನಗೊಂಡಿದ್ದು, ಸಚಿವ ಸ್ಥಾನದ ಜೊತೆ ಶಾಸಕ (ಮಂಡ್ಯ ಕ್ಷೇತ್ರ) ಸ್ಥಾನಕ್ಕೂ ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. [ಸಂಪುಟದಿಂದ ಹೊರ ಹೋಗುವ 13 ಸಚಿವರು]

ಮುಂದಿನ ಸವಾಲುಗಳು....

1.ಸ್ಪೀಕರ್ ಆಯ್ಕೆ : ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಂದ ತೆರವಾಗುವ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಾಣೆಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ ಅವರನ್ನು ಆಯ್ಕೆ ಮಾಡಲು ಪಕ್ಷ ನಿರ್ಧರಿಸಿದೆ. ಈ ಬಗ್ಗೆ ಸೋಮವಾರ ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಅತ್ತ ಸಚಿವ ಸ್ಥಾನದಿಂದ ಕೈ ಬಿಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರು, 'ನಾನು ಸಚಿವನಾಗಿ ಇನ್ನೋವಾ ಕಾರಿನಲ್ಲಿ ಓಡಾಡ್ತಾ ಇದ್ದೀನಿ. ಸಚಿವ ಸ್ಥಾನದಿಂದ ಬಿಟ್ರೆ ಬೆಂಜ್ ಕಾರಿನಲ್ಲಿ ಓಡಾಡ್ತೀನಿ' ಎಂದು ಹೇಳಿದ್ದಾರೆ.

2.ಖಾತೆಗಳ ಹಂಚಿಕೆ : ಸಚಿವ ಸಂಪುಟ ಪುನಾರಚನೆ ಬಳಿಕ ಖಾತೆಗಳ ಹಂಚಿಕೆ ಮಾಡುವುದು ದೊಡ್ಡ ಸವಾಲಾಗಲಿದೆ. ಬಹುತೇಕ ಎಲ್ಲಾ ಸಚಿವರ ಖಾತೆಯಲ್ಲಿಯೂ ಬದಲಾವಣೆಯಾಗುತ್ತದೆ ಎಂಬುದು ಸದ್ಯದ ಮಾಹಿತಿ. ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ.

3.ಅಸಮಾಧಾನದ ಭಯ : ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದ ಶಾಸಕರು ರಾಜೀನಾಮೆ ಬೆದರಿಕೆಯೊಡ್ಡಬಹುದು. ಸಂಪುಟದಿಂದ ಕೈ ಬಿಟ್ಟ ಸಚಿವರ ಬೆಂಬಲಿಗರು ಪ್ರತಿಭಟನೆ ನಡೆಸಬಹುದು. ಇವುಗಳನ್ನು ಎದುರಿಸಲು ಪಕ್ಷ ಸಿದ್ಧವಾಗಿರಬೇಕು. ರಾಜೀನಾಮೆ ಕೊಟ್ಟ ಶಾಸಕರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಬೇಕು.

4.ಕೆಪಿಸಿಸಿಗೆ ಸಾರಥಿ ಆಯ್ಕೆ : ಸಂಪುಟ ಪುನಾರಚನೆ ಮಾತ್ರ ಮಾಡಿದರೆ ಸಾಲದು. ಕೆಪಿಸಿಸಿ ಅಧ್ಯಕ್ಷರ ಅವಧಿ ಮುಕ್ತಾಯಗೊಂಡಿದ್ದು, ಹೊಸ ಸಾರಥಿಗಾಗಿ ಹುಡುಕಾಟ ನಡೆಸಬೇಕಾಗಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಸರು ಈ ಸ್ಥಾನಕ್ಕೆ ಕೇಳಿಬರುತ್ತಿದೆ.

5.ಪರಿಷತ್ ನಾಮ ನಿರ್ದೇಶನ : ಸಂಪುಟ ಪುನಾರಚನೆ ಬಳಿಕ ವಿಧಾನಪರಿಷತ್ ನಾಮ ನಿರ್ದೇಶನ ಮಾಡಬೇಕಾಗಿದೆ. ಒಟ್ಟು ಮೂರು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಸವಾಲು ಸಿದ್ದರಾಮಯ್ಯ ಅವರ ಮುಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister Siddaramaiah all set to undertake a major reshuffle of the cabinet. What next?
Please Wait while comments are loading...