ದಸರಾ ನಂತರ ಸಚಿವ ಸಂಪುಟ ವಿಸ್ತರಣೆ
ಬೆಂಗಳೂರು, ಸೆ.4 : ದೆಹಲಿ ತಲುಪಿದ್ದ ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ತಡೆ ಬಿದ್ದಿದೆ. ಸದ್ಯ ನಿಗಮ ಮಂಡಳಿಗಳಿಗೆ ಮಾತ್ರ ನೇಮಕ ನಡೆಯಲಿದ್ದು, ದಸರಾ ನಂತರ ಸಚಿವ ಸಂಪುಟ ವಿಸ್ತರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬಗ್ಗೆಯೂ ಯಾವುದೇ ಚರ್ಚೆ ನಡೆದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಬುಧವಾರ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಈ ಭೇಟಿಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರಿಗೆ ಉಪ ಚುನಾವಣೆ ಗೆಲುವಿನ ಬಗ್ಗೆ ವರದಿ ನೀಡಿದ್ದಾರೆ. ನಿಗಮ ಮಂಡಳಿಗಳ ನೇಮಕದ ಕುರಿತು ಮಾತ್ರ ಚರ್ಚೆ ನಡೆದಿದ್ದು, ಸಂಪುಟ ವಿಸ್ತರಣೆ ಮತ್ತು ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ. [ಯಾರಿಗೆ ಒಲಿಯಲಿದೆ ಉಪಮುಖ್ಯಮಂತ್ರಿ ಹುದ್ದೆ?]
ದಿಗ್ವಿಜಯ್ ಸಿಂಗ್ ಪ್ರವಾಸದಲ್ಲಿ : ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ವಿದೇಶ ಪ್ರವಾಸದಲ್ಲಿದ್ದು 10 ದಿನಗಳ ನಂತರ ದೆಹಲಿಗೆ ಮರಳಲಿದ್ದಾರೆ. ಅವರು ಬಂದ ನಂತರ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸೋಣ ಎಂದು ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ.
ಸಿಎಂ ಸೋನಿಯಾ ಗಾಂಧಿ ಭೇಟಿಯ ವೇಳೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿ ಮಾಡುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ. ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ವಿಚಾರವನ್ನು ಸೋನಿಯಾ ಗಾಂಧಿ ಸಿದ್ದರಾಮಯ್ಯ ಅವರಿಗೆ ವಹಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪರಮೇಶ್ವರ್ ಭೇಟಿಯಾಗಿಲ್ಲ : ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಬುಧವಾರ ಮಾತುಕತೆ ನಡೆಸಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಉಭಯ ನಾಯಕರನ್ನು ಭೇಟಿ ಮಾಡಿಲ್ಲ. ಕರ್ನಾಟಕ ಭವನಕ್ಕೂ ಆಗಮಿಸದ ಅವರು ಖಾಸಗಿ ಹೋಟೆಲ್‌ನಲ್ಲಿ ವಾಸ್ತಸ್ಯ ಹೂಡಿದ್ದಾರೆ.
ವಿಸ್ತರಣೆಗೆ ಒತ್ತಾಯ : ಸಂಪುಟ ವಿಸ್ತರಣೆಗೆ ಶಾಸಕರ ಲಾಬಿ ಮುಂದುವರೆದಿದೆ. ಶಾಸಕ ಕೆ.ಬಿ.ಕೋಳಿವಾಡ ಅವರು ದಸರಾಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಬೇಕು. ಸಂಪುಟ ವಿಸ್ತರಣೆ ಮಾಡಿದರೆ ಸರ್ಕಾರಕ್ಕೆ ಶಕ್ತಿ ಬರುತ್ತದೆ ಎಂದು ಹೇಳಿದ್ದಾರೆ. ಗುರುವಾರವೂ ಹಲವು ನಾಯಕರು ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದು, ಸಚಿವ ಸ್ಥಾನ ಪಡೆಯಲು ಪ್ರಯತ್ನ ಮುಂದುವರೆರಸಿದ್ದಾರೆ. ಅಂದಾಗೆ ಸಿದ್ದರಾಮಯ್ಯ ಸಂಪುಟದಲ್ಲಿ 4 ಸಚಿವ ಸ್ಥಾನಗಳು ಖಾಲಿ ಇವೆ.












Click it and Unblock the Notifications