ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಟೀಕಾಕಾರರ ವಿರುದ್ಧ ಪ್ರತಿಭಟಿಸಿ ಎಂದ ಬಿಎಸ್‌ವೈಗೆ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ

|
Google Oneindia Kannada News

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವವರ ವಿರುದ್ಧ ಪ್ರತಿಭಟಿಸಿ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಸಿದ್ದರಾಮಯ್ಯ, ಯಡಿಯೂರಪ್ಪನವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಸಿದ್ದರಾಮಯ್ಯ ಫೇಸ್‌ಬುಕ್‌ನಲ್ಲಿ ಕೇಳಿದ್ದೇನು...

***

ಯಡಿಯೂರಪ್ಪನವರು ಇತ್ತೀಚೆಗೆ ಜನಸಂಕಲ್ಪ ಯಾತ್ರೆಯೊಂದರಲ್ಲಿ ಮೋದಿಯವರನ್ನು ಟೀಕಿಸುವವರ ವಿರುದ್ಧ ಆ ಕ್ಷಣದಲ್ಲಿಯೆ ಪ್ರತಿಭಟಿಸಿ ಎಂದು ಕಾರ್ಯಕರ್ತರಿಗೆ ಆಜ್ಞೆ ಹೊರಡಿಸುವ ಧ್ವನಿಯಲ್ಲಿ ಹೇಳಿದ್ದಾರೆ. ಮಾನ್ಯ ಯಡಿಯೂರಪ್ಪನವರಿಗೆ ಈ ಕೆಳಕಂಡ ಪ್ರಶ್ನೆಗಳನ್ನು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾದ ನಾನು ಕೇಳಬಯಸುತ್ತೇನೆ.

2014ಕ್ಕೂ ಮೊದಲು ಮನಮೋಹನ್ ಸಿಂಗ್ ಸರ್ಕಾರ ರೈತರ ಎಷ್ಟು ಸಾಲವನ್ನು ಮನ್ನಾ ಮಾಡಿತ್ತು? ಅಂಬಾನಿ, ಅದಾನಿ ಮುಂತಾದ ಕಾರ್ಪೊರೇಟ್ ಬಂಡವಾಳಿಗರ ಎಷ್ಟು ಸಾಲವನ್ನು ಮನ್ನಾ ಮಾಡಲಾಗಿತ್ತು? ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಯಾರ್ಯಾರ ಎಷ್ಟು ಸಾಲವನ್ನು ಮನ್ನಾ ಮಾಡಿದ್ದಾರೆ?

Siddaramaiah BS Yediyurappa Narendra Modi Karnataka Politics Congress BJP

ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಜನರು ಕಟ್ಟುತ್ತಿದ್ದ ತೆರಿಗೆ ಎಷ್ಟು? ಕಾರ್ಪೊರೇಟ್ ಬಂಡವಾಳಿಗರು ಪಾವತಿಸುತ್ತಿದ್ದ ತೆರಿಗೆ ಎಷ್ಟಿತ್ತು? ಈಗ ಎಷ್ಟಿದೆ? ಜನರ ಮೇಲಿನ ತೆರಿಗೆ ಹೆಚ್ಚಿಸಿ ಅದಾನಿ, ಅಂಬಾನಿ ಮುಂತಾದವರ ಮೇಲಿದ್ದ ತೆರಿಗೆಯನ್ನು ಶೇ.8 ರಷ್ಟು ಇಳಿಸಿದ್ದು ಏಕೆ?

2014 ಕ್ಕೆ ಮೊದಲು ಪೆಟ್ರೋಲ್, ಡೀಸೆಲ್‍ಗಳ ಮೇಲೆ ವಿಧಿಸುತ್ತಿದ್ದ ಸೆಸ್‍ಗಳೆಷ್ಟು? ಮೋದಿಯವರು ವಿಧಿಸುತ್ತಿರುವ ಸೆಸ್‍ಗಳ ಪ್ರಮಾಣವೆಷ್ಟು?

ಇದರಿಂದಾಗಿ ಪೆಟ್ರೋಲ್, ಡೀಸೆಲ್‍ಗಳ ಬೆಲೆ ಹಿಂದೆ ಎಷ್ಟಿತ್ತು? ಈಗ ಎಷ್ಟಿದೆ? 2014 ರ ಮೊದಲು 10 ವರ್ಷಗಳ ಕಚ್ಚಾ ತೈಲದ ಸರಾಸರಿ ಬೆಲೆಗಳು ಎಷ್ಟಿತ್ತು? 2014 ರಿಂದ ಇದುವರೆಗೆ ಕಚ್ಚಾ ತೈಲದ ಸರಾಸರಿ ಬೆಲೆಗಳು ಎಷ್ಟು?

2014 ಕ್ಕೆ ಮೊದಲು ದೇಶದಲ್ಲಿ ನಿರುದ್ಯೋಗದ ಪ್ರಮಾಣ ಎಷ್ಟಿತ್ತು? ಈಗ ಎಷ್ಟಿದೆ?

2014ಕ್ಕೆ ಮೊದಲು ರೈತರ ತಲೆಯ ಮೇಲೆ, ದೇಶದ ಜನರ ತಲೆಯ ಮೇಲೆ ಇದ್ದ ಸಾಲವೆಷ್ಟು? ಈಗ ಎಷ್ಟಿದೆ? ರೈತರ ಹಾಗೂ ಇತರೆ ಜನಸಮುದಾಯಗಳ ಆದಾಯ ಎಷ್ಟಿತ್ತು? ಈಗ ಎಷ್ಟಿದೆ?

2014ಕ್ಕಿಂತ ಮೊದಲು ಮಹಿಳಾ ಕಾರ್ಮಿಕರ ಪ್ರಮಾಣ ಶೇ.32 ಇದ್ದದ್ದು ಈಗ ಶೇ.21 ಕ್ಕೆ ಇಳಿಯಲು ಮೋದಿ ಸರ್ಕಾರದ ಮಹಿಳಾ ವಿರೋಧಿ ನೀತಿಗಳು ಕಾರಣವಲ್ಲವೆ?

2014ಕ್ಕಿಂತ ಮೊದಲು ದೇಶದ ಮೇಲೆ 53 ಲಕ್ಷ ಕೋಟಿ ಇದ್ದದ್ದು, ಈಗ 155 ಲಕ್ಷ ಕೋಟಿಗೆ ಏರಿಸಿ ದೇಶವನ್ನು ದಿವಾಳಿ ಮಾಡಿದ್ದು ಮೋದಿಯವರಲ್ಲವೆ?

2018 ಕ್ಕೆ ಮೊದಲು 2.42 ಲಕ್ಷ ಕೋಟಿ ಇದ್ದ ರಾಜ್ಯದ ಸಾಲವು ಈ ವರ್ಷದ ಕೊನೆಯ ಹೊತ್ತಿಗೆ 5.30 ರಿಂದ 5.40 ಲಕ್ಷ ಕೋಟಿಗಳವರೆಗೆ ಏರಿಕೆಯಾಗಲು ಕಾರಣವೇನು?

2014 ಕ್ಕಿಂತ ಮೊದಲು ಕೇಂದ್ರವು ಕರ್ನಾಟಕದಿಂದ ವಿವಿಧ ಬಾಬತ್ತುಗಳಿಂದ ಸಂಗ್ರಹಿಸುತ್ತಿದ್ದ ತೆರಿಗೆಗಳು, ಸೆಸ್ಸುಗಳು, ಅಡಿಷನಲ್ ಎಕ್ಸೈಜ್ ಡ್ಯೂಟಿಗಳೆಷ್ಟು? ಈಗ ಎಷ್ಟು ಸಂಗ್ರಹಿಸುತ್ತಿದ್ದಾರೆ? ಕರ್ನಾಟಕಕ್ಕೆ ಎಷ್ಟು ಹಂಚಿಕೆ ಮಾಡುತ್ತಿದ್ದಾರೆ? ಕರ್ನಾಟಕದಿಂದ ಪ್ರತಿ ವರ್ಷ 3.5 ಲಕ್ಷ ಕೋಟಿಗಳವರೆಗೆ ದೋಚಿಕೊಂಡು ನಮಗೆ ಕೇವಲ 30 ಸಾವಿರ ಕೋಟಿ ತೆರಿಗೆ ಹಂಚಿಕೆ ಮಾಡುತ್ತಿದ್ದಾರೆ. ಇದನ್ನು ನ್ಯಾಯ ಎನ್ನಬೇಕೆ? ಇದರಿಂದಾಗಿ 2018-19 ಮತ್ತು 2019-20 ಕ್ಕೆ ಹೋಲಿಸಿದರೆ ರಾಜ್ಯವು ಈ ವರ್ಷ ಕನಿಷ್ಟ 60 ಸಾವಿರ ಕೋಟಿ ಕಳೆದುಕೊಳ್ಳುತ್ತಿದೆ.

2014 ಕ್ಕಿಂತ ಮೊದಲು ಕೇಂದ್ರ ಸರ್ಕಾರ ಅಡುಗೆ ಸಿಲಿಂಡರಿನ ಮೇಲೆ ನೀಡುತ್ತಿದ್ದ ಸಬ್ಸಿಡಿಗಳೆಷ್ಟು? ಈಗ ಎಷ್ಟು ಸಬ್ಸಿಡಿಗಳನ್ನು ನೀಡಲಾಗುತ್ತಿದೆ?

1947 ರಿಂದ 2014 ರವರೆಗೆ ಕೇಂದ್ರ ಸರ್ಕಾರವು ಸ್ಥಾಪಿಸಿದ್ದ ಸಾರ್ವಜನಿಕ ವಲಯದ ಕಂಪೆನಿ/ ಸಂಸ್ಥೆ/ಉದ್ದಿಮೆಗಳೆಷ್ಟು? ಹಿಂದಿನವರು ಸ್ಥಾಪಿಸಿದವುಗಳನ್ನು ಖಾಸಗೀಕರಿಸಿದ್ದೆಷ್ಟು?

2014ರ ನಂತರ ಮೋದಿಯವರು ಒಂದು ಕಂಪೆನಿ/ ಸಂಸ್ಥೆಯನ್ನೂ ಸ್ಥಾಪಿಸದೆ ಎಲ್ಲವುಗಳನ್ನೂ ಮಾರಾಟ ಮಾಡುತ್ತಿರುವುದನ್ನು ಒಳ್ಳೆಯ ಆಡಳಿತವೆನ್ನುತ್ತಾರೊ ಅಥವಾ ದಾರಿದ್ರ್ಯಾವಸ್ಥೆ ತಲುಪಿದ ಆಡಳಿತವೆನ್ನುತ್ತಾರೊ ಎಂದು ಯಡಿಯೂರಪ್ಪನವರು ಹೇಳಬೇಕು.

ಸರ್ಕಾರಿ ಸಂಸ್ಥೆಗಳನ್ನು ಮುಚ್ಚುತ್ತಿರುವುದರಿಂದ ದಲಿತರು, ಹಿಂದುಳಿದವರಿಗೆ ಮೀಸಲಾತಿ ಅವಕಾಶಗಳು ಮುಚ್ಚಿ ಹೋಗುತ್ತಿವೆ. ಮೀಸಲಾತಿ ಹೊರಟು ಹೋಗಲಿ ಎಂದು ಭಾವಿಸಿಯೆ ಖಾಸಗೀಕರಣ ಮಾಡುತ್ತಿರುವಂತಿದೆ. ಇದನ್ನು ಮನುವಾದಿ ಸಿದ್ಧಾಂತದ ಮೌನ ಅನುಷ್ಠಾನದ ವಿಧಾನ ಎನ್ನದೆ ಬೇರೆ ದಾರಿ ಇದೆಯೆ?

2014ಕ್ಕೆ ಮೊದಲು ರಾಜ್ಯದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಅನುದಾನದ ಪಾಲೆಷ್ಟು? 2014 ರ ನಂತರ ನೀಡುತ್ತಿರುವ ಪಾಲು ಎಷ್ಟು?

2014 ಕ್ಕೆ ಮೊದಲು ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಸರಾಸರಿ ಜಿಡಿಪಿ ಬೆಳವಣಿಗೆ ಎಷ್ಟು? ಕಳೆದ 8 ವರ್ಷಗಳ ಸರಾಸರಿ ಬೆಳವಣಿಗೆ ಎಷ್ಟು?

2004-05 ರಿಂದ 2013-14 ರವರೆಗೆ ಕೇಂದ್ರ ಸರ್ಕಾರವು ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನೀಡಿದ ಬೆಂಬಲ ಬೆಲೆಗಳ ಪ್ರಮಾಣ ಎಷ್ಟು? 2014 ರಿಂದ 2021-22 ರವರೆಗೆ ನೀಡಿದ ಬೆಂಬಲ ಬೆಲೆಗಳೆಷ್ಟು?

2014 ಕ್ಕಿಂತ ಮೊದಲು ದೇಶದ ವ್ಯಾಪಾರದ ಕೊರತೆ ಎಷ್ಟಿತ್ತು? ಈಗ ಎಷ್ಟಿದೆ? ಮೇಕ್ ಇಂಡಿಯಾ ಎಂದವರು ಯಾರು? ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ದುಪ್ಪಟ್ಟು ಮಾಡಿದ್ದು ಏಕೆ?

2014 ಕ್ಕಿಂತ ಮೊದಲು ರೂಪಾಯಿಯ ಮೌಲ್ಯ ಡಾಲರಿನ ಎದುರು ಸರಾಸರಿ 58 ರೂ ಇದ್ದದ್ದು ಎಷ್ಟಿತ್ತು? ಈಗ 82.5 ರೂಗಳಿಗೆ ಬೀಳಿಸಿದ್ದನ್ನು ಮೋದಿಯವರ ಜಗಮೆಚ್ಚುವ ಕೆಲಸ ಎನ್ನಬೇಕೆ?

2014 ಕ್ಕಿಂತ ಮೊದಲು ಭಾರತ ಹಸಿವು ಮತ್ತು ಬಡತನದ ಸೂಚ್ಯಂಕಗಳಲ್ಲಿ ಯಾವ ಸ್ಥಾನದಲ್ಲಿತ್ತು? ಈಗ ಯಾವ ಸ್ಥಾನದಲ್ಲಿದೆ?

2015 ಕ್ಕಿಂತ ಮೊದಲು ಭಾರತೀಯರ ಸ್ವಾತಂತ್ರ್ಯ ಸೂಚ್ಯಂಕವು 75 ನೇ ಸ್ಥಾನದಲ್ಲಿದ್ದದ್ದು 2020ರ ವೇಳೆಗೆ 111 ನೇ ಸ್ಥಾನಕ್ಕೆ ಕುಸಿಯಲು ಮೋದಿ ಕಾರಣರಲ್ಲವೆ?

2013-2019 ರವರೆಗೆ ಮೋದಿಯವರು ಎಷ್ಟು ಭರವಸೆಗಳನ್ನು ದೇಶದ ಜನರಿಗೆ ನೀಡಿದ್ದರು? ಅವುಗಳಲ್ಲಿ ಎಷ್ಟನ್ನು ಈಡೇರಿಸಿದ್ದಾರೆ?

ಜಾಗತಿಕ ಸ್ಪರ್ಧಾತ್ಮಕತೆಯಲ್ಲಿ ಭಾರತದ ಸ್ಥಾನ 2013 ರಲ್ಲಿ 40 ರ‌್ಯಾಂಕ್ ಇದ್ದದ್ದು 2021 ರ ಹೊತ್ತಿಗೆ 43 ಕ್ಕೆ ಸ್ಥಾನಕ್ಕೆ ಕುಸಿಯಲು ಕಾರಣವೇನು?

ವಿಶ್ವ ಸಂಸ್ಥೆಯ ಸಮೀಕ್ಷೆಯಲ್ಲಿ ಭಾರತೀಯರ ಸಂತೋಷದ ಸೂಚ್ಯಂಕವು 2015 ರಲ್ಲಿ 117 ನೇ ಸ್ಥಾನದಲ್ಲಿದ್ದದ್ದು 2021 ರ ಹೊತ್ತಿಗೆ 139 ಸ್ಥಾನಕ್ಕೆ ಕುಸಿದದ್ದು ಯಾಕೆ? ಇದಕ್ಕೆ ಯಾರು ಕಾರಣ?

ಜಾಗತಿಕ ಆರ್ಥಿಕ ಸ್ವಾತಂತ್ರ್ಯದಲ್ಲಿ ಭಾರತದ ಸ್ಥಾನವು 2015 ರಲ್ಲಿ 95 ಸ್ಥಾನದಲ್ಲಿದ್ದದ್ದು 2020 ರ ಹೊತ್ತಿಗೆ 105 ನೇ ಸ್ಥಾನಕ್ಕೆ ಕುಸಿದಿದ್ದು ಯಾಕೆ?

ಟ್ರಾನ್ಸಪೆರೆನ್ಸಿ ಇಂಟರ್ ನ್ಯಾಷನಲ್ ಗ್ಲೋಬಲ್ ಕರಪ್ಷನ್ ಇಂಡೆಕ್ಸ್‌ನಲ್ಲಿ 2014 ರಲ್ಲಿ 85ನೇ ಸ್ಥಾನದಲ್ಲಿದ್ದ ಭಾರತ 2020 ರ ವೇಳೆಗೆ 86 ನೆ ಸ್ಥಾನಕ್ಕೆ ಕುಸಿಯಲು ಕಾರಣವೇನು? ಇದರ ಹೊಣೆಯನ್ನು ಮೋದಿಯವರೆ ಹೊರಬೇಕಲ್ಲವೆ?

ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ ಜಾಗತಿಕ ಜೆಂಡರ್ ಗ್ಯಾಪ್‍ನ ಸೂಚ್ಯಂಕದಲ್ಲಿ 2014 ರಲ್ಲಿ 114 ನೇ ಸ್ಥಾನದಲ್ಲಿದ್ದ ಭಾರತ 2021 ರಲ್ಲಿ ತೀವ್ರ ಕುಸಿತ ಕಾಣಲು ಕಾರಣ ಯಾರು?

ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ ಜಾಗತಿಕ ಆರ್ಥಿಕ ಸ್ಪರ್ಧಾತ್ಮಕತೆಯಲ್ಲಿ 2017 ರಲ್ಲಿ ಭಾರತವು 40 ನೇ ರ‍್ಯಾಂಕ್‌ ನಲ್ಲಿದ್ದದ್ದು 2020 ರ ವೇಳೆಗೆ 68 ನೇ ಸ್ಥಾನಕ್ಕೆ ಕುಸಿಯಲು ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಕಾರಣವಲ್ಲವೆ?

ಪಾಸ್ ಪೋರ್ಟ್ ಇಂಡೆಕ್ಸ್‍ನಲ್ಲಿ 2013ರಲ್ಲಿ 74ನೇ ಸ್ಥಾನದಲ್ಲಿದ್ದ ಭಾರತವು 2021ರ ವೇಳೆಗೆ 85 ನೇ ಸ್ಥಾನಕ್ಕೆ ಕುಸಿಯಲು ಕಾರಣ ಯಾರು? ಇದರಿಂದ ಭಾರತೀಯರ ಘನತೆ ಕಡಿಮೆಯಾಗಲು ಮೋದಿಯವರ ಆಡಳಿತ ಕಾರಣವಲ್ಲವೆ?

ವಿಶ್ವ ಆರ್ಥಿಕ ವೇದಿಕೆಯ ಬಂಡವಾಳ ಸೂಚ್ಯಂಕದಲ್ಲಿ 78ನೇ ಸ್ಥಾನದಲ್ಲಿದ್ದ ಭಾರತವು 2017 ರ ವೇಳೆಗೆ 103 ನೇ ಸ್ಥಾನಕ್ಕೆ ಕುಸಿಯಲು ಮೋದಿಯವರು ಕಾರಣರಲ್ಲವೆ?

ಬ್ಲೂಮ್‍ಬರ್ಗ್ ಸಮೀಕ್ಷೆಗಳ ಪ್ರಕಾರ ಭಾರತದ ಆರೋಗ್ಯ ಕ್ಷೇತ್ರದ ಸೂಚ್ಯಂಕವು 2015 ರಲ್ಲಿ 103 ನೇ ಸ್ಥಾನದಲ್ಲಿದ್ದದ್ದು 2020 ರ ವೇಳೆಗೆ 120 ನೇ ಸ್ಥಾನಕ್ಕೆ ಕುಸಿಯಲು ಕಾರಣ ಯಾರು?

ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ 2016 ರಲ್ಲಿ 110 ನೇ ಸ್ಥಾನದಲ್ಲಿದ್ದ ಭಾರತವು 2021 ರ ವೇಳೆಗೆ 120 ನೇ ಸ್ಥಾನಕ್ಕೆ, ಬಾಂಗ್ಲಾ, ನೇಪಾಳ, ಶ್ರೀಲಂಕಾ, ಭೂತಾನ್ ಗಳಿಗಿಂತ ಕೆಳಕ್ಕೆ ಕುಸಿದು ಬೀಳಲು ಕಾರಣ ಮೋದಿಯವರಲ್ಲವೆ?

ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ಎಡವಿ ದೇಶದ ಜನರನ್ನು ಸಾವಿನ ಸಮುದ್ರದಲ್ಲಿ ಮುಳುಗಿಸಿದವರು ಮೋದಿಯವರಲ್ಲವೆ? ಜಾಗತಿಕವಾಗಿ ಕೋವಿಡ್ಡನ್ನು ಅತಿ ಕೆಟ್ಟದಾಗಿ ನಿಭಾಯಿಸಿದ 5 ಕೆಟ್ಟ ನಾಯಕರಲ್ಲಿ ಮೋದಿಯವರೂ ಒಬ್ಬರೆಂದು ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳು ವರದಿ ಮಾಡಿದ್ದನ್ನು ದೇಶ ಮರೆತಿದೆಯೆ? ನಿಮಗೂ ಮರೆತು ಹೋಗಿದೆಯೆ ಯಡಿಯೂರಪ್ಪನವರೆ?

2014 ಕ್ಕಿಂತ ಮೊದಲು ಇದ್ದ ಸಣ್ಣ, ಮಧ್ಯಮ, ಗುಡಿ ಕೈಗಾರಿಕೆಗಳೆಷ್ಟು? ಈಗ ಎಷ್ಟಿವೆ? ಶೇ. 60 ರಷ್ಟು ಕಂಪೆನಿಗಳು ಮುಚ್ಚಲು, ಮುಚ್ಚುವ ಹಂತಕ್ಕೆ ಬರಲು ಕಾರಣ ಯಾರು?

ಮನೆಗೆ ಮಾರಿ ಪರರಿಗೆ ಉಪಕಾರಿಯಂತೆ ವರ್ತಿಸುವ ಪ್ರಧಾನಿ ನರೇಂದ್ರ ಮೋದಿವರಿಂದಾಗಿಯೆ ದೇಶ ದುರವಸ್ಥೆಗೆ ಸಿಲುಕಿಕೊಂಡಿದೆ. ಆದರೂ ಅವರನ್ನು ಟೀಕಿಸಬೇಡಿ ಎಂದು ಆಜ್ಞೆ ಹೊರಡಿಸುವ ಯಡಿಯೂರಪ್ಪನವರನ್ನು, ಬೊಮ್ಮಾಯಿಯವರನ್ನು ಹಾಗೂ ಬಿಜೆಪಿಯವರನ್ನು ಏನೆಂದು ಕರೆಯಬೇಕು?

English summary
Siddaramaiah questions BS Yediyurappa on his statement on Prime Minister Narendra Modi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X