ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಡಿಕೆ, ಸಿದ್ದರಾಮಯ್ಯ ಭಾಗಿ
ಹೈದರಾಬಾದ್, ಮೇ 18: ಕಾಂಗ್ರೆಸ್ ಶಾಸಕರು ಉಳಿದುಕೊಂಡಿದ್ದ ಹೈದರಾಬಾದ್ ಐಷಾರಾಮಿ ಹೋಟೆಲ್ ತಾಜ್ ಕೃಷ್ಣಾದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ.
ಇಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಟ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪ್ರತ್ಯೇಕವಾಗಿ ಬೆಂಗಳೂರಿನಿಂದ ಹೈದರಾಬಾದ್ ಗೆ ಹಾರಿದ್ದರು. ನಂತರ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರು ಉಳಿದುಕೊಂಡಿದ್ದ ಹೋಟೆಲ್ ಗೆ ತಲುಪಿದ್ದರು. ಸಿದ್ದರಾಮಯ್ಯ ಬರುತ್ತಿದ್ದಂತೆ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುತ್ತಿದೆ.
ಇದೇ ಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿಯೂ ಭಾಗಿಯಾಗಿದ್ದಾರೆ. ಶನಿವಾರ ನಡೆಯಲಿರುವ ವಿಶ್ವಾಸಮತಯಾಚನೆ ವೇಳೆ ಒಗ್ಗಟ್ಟಾಗಿರಬೇಕು ಎಂದು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್, "ಎಲ್ಲಾ ಶಾಸಕರು ನಾವು ಇಲ್ಲಿದ್ದೇವೆ. ನಾವು ಬೆಂಗಳೂರಿಗೆ ಹೊರಡುತ್ತಿದ್ದೇವೆ. ಸಿದ್ದರಾಮಯ್ಯ ಇಲ್ಲಿಗೆ ಬಂದಿದ್ದಾರೆ. ತಕ್ಷಣ ನಾವು ಹೊರಡುತ್ತೇವೆ. ನಾವು 77 ಶಾಸಕರಿದ್ದಾರೆ. ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲ. ಈ ಬಾರಿ ನಮ್ಮದೇ ಸರ್ಕಾರ," ಎಂದು ಹೇಳಿದ್ದಾರೆ.












Click it and Unblock the Notifications