Siddaganga Mutt: ಬಸವ ಜಯಂತಿಯಂದು ನೂತನ ಉತ್ತರಾಧಿಕಾರಿಗಳಿಗೆ ಪಟ್ಟಾಭಿಷೇಕ
ತುಮಕೂರು, ಏಪ್ರಿಲ್ 23: ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿಗಳ ನೇಮಕವಾಗಿದ್ದು, ನೂತನ ಶ್ರೀಗಳಿಗೆ ಭಾನುವಾರ ಬಸವ ಜಯಂತಿಯಂದೇ ಪಟ್ಟಾಭಿಷೇಕವನ್ನು ಮಾಡಲಾಗಿದೆ.
ಸಿದ್ದಗಂಗಾ ಮಠ ಸೇರಿದಂತೆ ಮೂರು ಮಠಗಳಿಗೆ ಉತ್ತರಾಧಿಕಾರಿಗಳನ್ನು ಅವರಿಗೂ ಪಟ್ಟಾಧಿಕಾರ ಮಾಡಲಾಗಿದೆ. ಸಿದ್ಧಗಂಗಾಮಠದ ಶ್ರೀಗಳಾಗಿ ಶ್ರೀ ಮನೋಜ್ ಕುಮಾರ್ ಅವರು, ಶ್ರೀ ಕಂಚುಗಲ್ ಬಂಡೇಮಠದ ಶ್ರೀಗಳಾಗಿ ಶ್ರೀ ಹರ್ಷ.ಕೆ.ಎಂ ಅವರು, ದೇವನಹಳ್ಳಿ ಬಸವಕಲ್ಯಾಣ ಮಠದ ಶ್ರೀಗಳಾಗಿ ಶ್ರೀ ಗೌರೀಶ್ ಕುಮಾರ್ ಅವರನ್ನು ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ನಡೆದಾಡುವ ದೇವರ ಪುಣ್ಯಕ್ಷೇತ್ರ ಶ್ರೀ ಸಿದ್ಧಗಂಗಾ ಮಠದ ಪರಂಪರೆಯಂತೆ ನಿರಂಜನ ಪಟ್ಟಾಧಿಕಾರ ಮತ್ತು ಉತ್ತರಾಧಿಕಾರಿ ನೇಮಕವು ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ಧಲಿಂಗೇಶ್ವರ ಶ್ರೀಗಳ ದಿವ್ಯ ನೇತೃತ್ವದಲ್ಲಿ ಶ್ರೀ ಬಸವಜಯಂತಿ ಹಾಗೂ ಅಕ್ಷಯ ತೃತೀಯದ ಪವಿತ್ರ ದಿನದಂದು ಯಶಸ್ವಿಯಾಗಿ ನೆರವೇರಿದೆ.
ಬೆಳಗ್ಗೆ 5 ಗಂಟೆಯಿಂದ ಸಿದ್ದಗಂಗಾ ಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿ 6:30ಕ್ಕೆ ದೀಕ್ಷಾ ಸಂಸ್ಕಾರ ನಡೆದವು. ಬಳಿಕ ಬೆಳಿಗ್ಗೆ 7:30ಕ್ಕೆ ಪಟ್ಟಾಭಿಷೇಕ ಸರಳವಾಗಿ ನಡೆಯಿತು. ಈ ವೇಳೆ ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಾಗೂ ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವಮೂರ್ತಿ ಮಹಾಸ್ವಾಮಿಗಳು ಸೇರಿ ಅನೇಕ ಮಠಾಧೀಶರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಹಿತೈಷಿಗಳು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು ಸರಳವಾಗಿ ಈ ಸಮಾರಂಭ ಆಯೋಜನೆ ಮಾಡಲಾಗುತ್ತಿದ್ದು, ಮಠದ ಭಕ್ತಾದಿಗಳು ಸಹಕಾರ ನೀಡಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿಯಿಂದ ಮನವಿ ಮಾಡಿತ್ತು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಈಗ ಸುಮಾರು 10 ಸಾವಿರ ವಿದ್ಯಾರ್ಥಿಗಳು ಮಠದಲ್ಲಿ ಅಭ್ಯಾಸ ಮಾಡತ್ತಿದ್ದಾರೆ. ಸ್ವಾತಂತ್ರ್ಯದ ಪೂರ್ವದಿಂದಲೂ ಊಟ, ವಸತಿ ಹಾಗೂ ಶಿಕ್ಷಣ ಸೇರಿ ತ್ರಿವಿಧ ದಾಸೋಹ ನೆರವೇರಿಸುತ್ತಾ ಬಂದಿದ್ದು, ದೇಶದಲ್ಲಿಯೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ( ಪೂರ್ವಾಶ್ರಮದ ಹೆಸರು ಮನೋಜ್ ಕುಮಾರ್), ಬಂಡೇ ಮಠದ ಉತ್ತರಾಧಿಕಾರಿಯಾಗಿ ಮಹಾಲಿಂಗ ಸ್ವಾಮೀಜಿ ( ಪೂರ್ವಾಶ್ರಮದ ಹೆಸರು ಹರ್ಷ) ದೇವನಹಳ್ಳಿಯ ಬಸವ ಕಲ್ಯಾಣ ಮಠದ ಉತ್ತರಾಧಿಕಾರಿಯಾಗಿ ಸದಾಶಿವ ಸ್ವಾಮೀಜಿ ( ಪೂರ್ವಾಶ್ರಮದ ಹೆಸರು ಗೌರಿಶ್ ಕುಮಾರ್). ನೇಮಕಗೊಂಡಿದ್ದಾರೆ.
ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ ಅವರ ಪೂರ್ವಶ್ರಮದ ಹೆಸರು ಮನೋಜ್ ಕುಮಾರ್. ಅವರು ದಿನಾಂಕ 02.06.1987ರಲ್ಲಿ ಜನಿಸಿದ್ದಾರೆ. ಅವರ ತಂದೆ ಷಡಾಕ್ಷರಯ್ಯ ತಾಯಿ ವಿರೂಪಾಕ್ಷಮ್ಮ. ಇವರು ಮೂಲತಃ ಬೆಂಗಳೂರು ಗ್ರಾಮಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲನಹಳ್ಳಿಯವರು. ಶಿವ ಸಿದ್ದೇಶ್ವರ ಸ್ವಾಮೀಜಿಯವರು ಬಿಎಸ್‌ಸಿ, ಬಿಎಡ್ ಎಂಎಸ್‌ಸಿ, ಎಂಎ ವಿದ್ವತ್ ಪದವಿ ಪಡೆದಿದ್ದಾರೆ. ಇವರು ಮೊದಲು ಸಿದ್ದಗಂಗಾ ಪಾಲಿಟಿಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.












Click it and Unblock the Notifications