ದುರ್ಗದ ಗ್ರಾಮೀಣ ಜನತೆಗೆ ತಟ್ಟಿತು 'ಬಂದ್' ಬಿಸಿ (ವಿಶೇಷ ವರದಿ)
ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಮೆಡಿಕಲ್ ಶಾಪ್ ಗಳು ಬಂದ್ ಆಗಿದ್ದರೂ ಜಿಲ್ಲಾಸ್ಪತ್ರೆಯ ಔಷಧಿ ಮಳಿಗೆ, ಕೆಲವಾರು ಖಾಸಗಿ ಔಷಧಿ ಮಳಿಗೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದರಿಂದ ತೊಂದರೆಯಾಗಲಿಲ್ಲ.
ಚಿತ್ರದುರ್ಗ, ಮೇ 30: ರಾಜ್ಯಾದ್ಯಂತ ಮೇ 30ರಂದು ನಡೆದ ಖಾಸಗಿ ಔಷಧ ಮಾರಾಟಗಾರರ ಮುಷ್ಕರವು ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನತೆಗೆ ಕೊಂಚ ಬಿಸಿ ತಟ್ಟಿಸಿತು.
ಬಂದ್ ಗೆ ಕರೆ ನೀಡಿದ್ದ ಸಂಘಟನೆಯು ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂ ಗಳ ಆಸುಪಾಸಿನ ಮೆಡಿಕಲ್ ಶಾಪ್ ಗಳಿಗೆ ಬಂದ್ ನಿಂದ ವಿನಾಯ್ತಿ ನೀಡಿದ್ದರು. ಅಲ್ಲದೆ, ಬಂದ್ ಕೇವಲ ಒಂದು ದಿನ ಮಾತ್ರ ಇದ್ದಿದ್ದರಿಂದಾಗಿ ಅಷ್ಟಾಗಿ ಜನರ ಮೇಲೆ ಕೆಟ್ಟ ಪರಿಣಾಮ ಬೀರಲಿಲ್ಲ.[ಬಂದ್ ಭಾಗ್ಯ : ಹೊಟ್ಟೆಗೆ ಹಿಟ್ಟಿಲ್ಲ, ತಿನ್ನಲು ಮಾತ್ರೆಯೂ ಇಲ್ಲ]
ಚಿತ್ರದುರ್ಗ ಜಿಲ್ಲೆಯೂ ಇದರಿಂದ ಹೊರತಾಗೇನೂ ಇರಲಿಲ್ಲ. ಆದರೆ, ನಿರ್ದಿಷ್ಟ ಔಷಧಿಗಾಗಿ ಹುಡುಕಾಟ ನಡೆಸುತ್ತಿದ್ದವರಿಗೆ ಮಾತ್ರ ಇದು ಕೊಂಚ ಕಿರಿಕಿರಿಯನ್ನುಂಟು ಮಾಡಿತು. ಆದರೆ, ಜಿಲ್ಲಾ ಕೇಂದ್ರ ಹಾಗೂ ಸುತ್ತಲಿನ ತಾಲೂಕು ಕೇಂದ್ರಗಳಿಂದ ಬಂದವರಿಗೆ ಈ ಬಗ್ಗೆ ಗೊತ್ತಿತ್ತು. ಹಾಗಾಗಿ, ಅವರು ತಮಗೆ ಬೇಕಾದ ಔಷಧಿಗಾಗಿ ಎಲ್ಲಿಗೆ ಹೋಗಬೇಕು, ಯಾರನ್ನು ಕಾಣಬೇಕೆಂದು ಪಕ್ಕಾ ಯೋಜಿಸಿಕೊಂಡೇ ಬಂದಿದ್ದರು.

ಕೆಲವರ ಪರದಾಟ
ಮೆಡಿಕಲ್ ಶಾಪ್ ಬಂದ್ ಹಿನ್ನೆಲೆಯಲ್ಲಿ ನಗರದ ಬಹುತೇಕ ಮೆಡಿಕಲ್ ಶಾಪ್ ಗಳು ಬಂದ್ ಆಗಿದ್ದವು. ಚಿತ್ರದುರ್ಗ ನಗರದಲ್ಲಿ ಮೆಡಿಕಲ್ ಶಾಪ್ ಗಳ ಹಬ್ ಎಂದೇ ಕರೆಯಲ್ಪಡುವ ಜಿಲ್ಲಾಸ್ಪತ್ರೆಯ ಎದುರಿನ ಪ್ರಾಂತ್ಯದಲ್ಲಿನ ಎಲ್ಲಾ ಔಷಧ ಮಳಿಗೆಗಳೂ ಬಂದ್ ಆಗಿದ್ದವು.
ಕಳೆದೆರಡು ದಿನಗಳಿಂದ ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗಿದ್ದರೂ, ಇಲ್ಲಿನ ಜನರು ಅದನ್ನು ಅಷ್ಟಾಗಿ ಗಮನಿಸದಂತೆ ಕಾಣುತ್ತಿತ್ತು. ಇದರ ಪರಿಣಾಮವಾಗಿ, ಈ ಮೆಡಿಕಲ್ ಶಾಪ್ ಹಬ್ ಗಳ ಮುಂದೆಲ್ಲಾ ವೈದ್ಯರು ನೀಡಿದ್ದ ಔಷದಿ ಚೀಟಿಗಳನ್ನು ಹಿಡಿದುಕೊಂಡು ಹಲವಾರು ಜನರು ಅಡ್ಡಾಡುತ್ತಿದ್ದರು.

ಜಗುಲಿಯಲ್ಲಿ ಕುಳಿತು ಟೈಂ ಪಾಸ್ ಮಾಡಿದರು!
ಇವರಲ್ಲಿ ಹಲವಾರು ಮಂದಿ ವಿವಿಧ ಹಳ್ಳಿಗಳಿಂದ ಬಂದವರು. ಗ್ರಾಮೀಣ ಪ್ರದೇಶಗಳಿಂದ ಬಂದವರಲ್ಲಿ ಹಲವಾರು ಜನರಿಗೆ ಮೇ 30ರಂದು ಇರುವ ಮುಷ್ಕರ ಬಗ್ಗೆ ಕಿಂಚಿತ್ತಾದರೂ ಅರಿವಿದ್ದಂತೆ ಅನಿಸಲಿಲ್ಲ.
ಇನ್ನೂ ಕೆಲವರು ಬೆಳಗ್ಗೆ 10 ಗಂಟೆಗೇ ಮೆಡಿಕಲ್ ಶಾಪ್ ಗೆ ಬಂದವರು, 'ಏನೋ ಲೇಟಾಗಿರಬೇಕು. ಅದಕ್ಕೆ ಬಾಗಿಲು ತೆರೆದಿಲ್ಲ. ಇನ್ನೇನು ಇಷ್ಟರಲ್ಲೇ ಬಾಗಿಲು ತೆರೆಯುತ್ತಾರೆ' ಎಂಬ ನಿರೀಕ್ಷೆಯಲ್ಲೇ ಶಟ್ಟರ್ ಎಳೆಯಲ್ಪಟ್ಟಿರುವ ಅಂಗಡಿಗಳ ಮುಂದಿನ ಜಗಲಿಯಲ್ಲಿ ಕುಳಿತುಕೊಂಡು ಟೈಂ ಪಾಸ್ ಮಾಡುತ್ತಿದ್ದರು.[ಮೇ 30ಕ್ಕೆ ಹೋಟೆಲ್ ಗಳು ಬಂದ್, ಊಟ-ತಿಂಡಿಗೆ ವ್ಯವಸ್ಥೆ ಮಾಡಿಕೊಳ್ರೀ...]

ಔಷಧಿಗಳ ಉತ್ತಮ ಸರಬರಾಜು
ಜಿಲ್ಲಾಸ್ಪತ್ರೆಯಲ್ಲಿ ಇಂಥ ಸನ್ನಿವೇಶವಿರಲಿಲ್ಲ. ಅಲ್ಲಿನ ಔಷಧ ವಿತರಣೆ ವಿಭಾಗದಲ್ಲಿ ಎಂದಿನಂತೆ ಉಚಿತ ಔಷಧಿ ವಿತರಣೆ ನಡೆಯುತ್ತಿತ್ತು. ಅಲ್ಲಿ ಇಲ್ಲದ ಔಷಧಿಗಳನ್ನು ಜಿಲ್ಲಾಸ್ಪತ್ರೆಯ ಆವರಣದಲ್ಲೇ ಇರುವ ಜೆನರಿಕ್ ಮೆಡಿಸಿನ್ ವಿಭಾಗಕ್ಕೆ ಕಳುಹಿಸಲಾಗುತ್ತಿತ್ತು.

ಎಲ್ಲರಿಗೂ ಅನುಕೂಲ
ಅಲ್ಲಿ ಜನರಿಕ್ ಮೆಡಿಸಿನ್ ವಿಭಾಗದಲ್ಲಿಯೂ ಯಾವುದೇ ಗೊಂದಲ ಇರಲಿಲ್ಲ. ವಿವಿಧೆಡೆ ಮೆಡಿಕಲ್ ಶಾಪ್ ಗಳು ಬಂದ್ ಆಗಿದ್ದರಿಂದಾಗಿ, ಅಲ್ಲಿ ಕೊಂಚ ಜನಸಂದಣಿ ಹೆಚ್ಚು ಅನ್ನುವುದನ್ನು ಬಿಟ್ಟರೆ, ಜನರಿಗೆ ಅಗತ್ಯವಾಗಿದ್ದ ಔಷಧಿಗಳು ಕಡಿಮೆ ಬೆಲೆಯಲ್ಲಿ (ಜನರಿಕ್ ಮೆಡಿಸಿನ್ ಶಾಪ್ ನಲ್ಲಿ ಶೇ. 50ರವರೆಗೆ ರಿಯಾಯಿತಿ) ಸಿಗುತ್ತಿದ್ದವು.

ಏನೂ ತೊಂದರೆಯಿಲ್ಲ: ಅಧಿಕಾರಿ ಸ್ಪಷ್ಟನೆ
ಮೆಡಿಕಲ್ ಶಾಪ್ ಮುಷ್ಕರದ ಹಿನ್ನೆಲೆಯಲ್ಲಿ, ಜಿಲ್ಲಾಸ್ಪತ್ರೆ ಕೈಗೊಂಡ ಕ್ರಮಗಳ ಬಗ್ಗೆ 'ಒನ್ ಇಂಡಿಯಾ'ಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಸ್ಪತ್ರೆಯ ನೂತನ ಸ್ಥಳೀಯ ವೈದ್ಯಾಧಿಕಾರಿ (ಆರ್.ಎಂ.ಒ) ಡಾ. ಆನಂದ್ ಪ್ರಕಾಶ್, ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಆಸ್ಪತ್ರೆಯಲ್ಲಿ ಎಂದಿನಂತೆ ಉಚಿತ ಔಷಧಿ ಸರಬರಾಜು ಆಗುತ್ತಿದೆ. ಇನ್ನು, ಇತರ ಸಾರ್ವಜನಿಕರಿಗೆ ಜೆನರಿಕ್ ಮೆಡಿಸಿನ್ ವಿಭಾಗದಲ್ಲಿ ಕಡಿಮೆ ಬೆಲೆಗೆ ಔಷಧ ಸಿಗುತ್ತಿದೆ. ಅಗತ್ಯ ಔಷಧಿಗಳ ಕೊರತೆಯೂ ಇಲ್ಲ ಎಂದರು.
ಆದರೆ, ಹೊರಗಡೆ, ಮುಚ್ಚಲ್ಪಟ್ಟ ಮೆಡಿಕಲ್ ಶಾಪ್ ಗಳನ್ನು ನೋಡಿ ಜನರು ನಿರಾಸೆಗೊಂಡು ಅಲೆದಾಡುತ್ತಿರುವವರ ಬಗ್ಗೆ ಗಮನ ಸೆಳೆದಾಗ, ''ಆ ಜನರು ಆಸ್ಪತ್ರೆ ಕಡೆಗೆ ಬಂದರೆ, ಅವರಿಗೆ ಎಲ್ಲಾ ಅನುಕೂಲ ಸಿಗುತ್ತದೆ'' ಎಂದು ತಿಳಿಸಿದರು.












Click it and Unblock the Notifications