ಭಟ್ಕಳದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವರ್ತಕನ ಸಾವು
ಕಾರವಾರ, ಸೆಪ್ಟೆಂಬರ್ 16 : ಭಟ್ಕಳ ಪುರಸಭೆ ಮಳಿಗೆಯನ್ನು ವಶಪಡಿಸಿಕೊಳ್ಳುವುದನ್ನು ವಿರೋಧಿಸಿ 2 ದಿನಗಳ ಹಿಂದೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವರ್ತಕ ರಾಮಚಂದ್ರ ನಾಯ್ಕ ಶನಿವಾರ ಬೆಳಗಿನ ಜಾವ 2 ಗಂಟೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತದೇಹವನ್ನು ಪಟ್ಟಣಕ್ಕೆ ತರಲಾಗುತ್ತಿದ್ದು, ತಾಲ್ಲೂಕಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಪಟ್ಟಣ ವ್ಯಾಪ್ತಿಯ ಶಾಲೆ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದೆ. ನಗರದಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಅಂಗಡಿಕಾರ ರಾಮಚಂದ್ರ ನಾಯ್ಕ ಗುರುವಾರ ಬೆಳಿಗ್ಗೆ 6.30ರ ಸುಮಾರಿಗೆ ಪುರಸಭೆ ಕಾರ್ಯಾಲಯದೊಳಗೆ ಅಧಿಕಾರಿಗಳು ಅಂಗಡಿ ತೆರವುಗೊಳಿಸಲು ಮುಂದಾದಾಗ ಈತ ಭಾರೀ ವಿರೋಧ ವ್ಯಕ್ತಪಡಿಸಿ ನಂತರ ಆತ್ಮಹತ್ಯೆಗೆ ಯತ್ನಿಸಿದ್ದ. ಅದನ್ನು ತಪ್ಪಿಸಲು ಹೋದ ಇನ್ನೋರ್ವ ಈಶ್ವರ ನಾಯ್ಕ ಎಂಬಾತನಿಗೂ ಸಹ ಬೆಂಕಿಯ ಕೆನ್ನಾಲಿಗೆ ತಗುಲಿತ್ತು.
ಈ ಘಟನೆಯ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆಯಾಗಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜಾ ನೀಡಲಾಗಿದೆ. ಪಟ್ಟಣದಲ್ಲಿ ಘರ್ಷಣೆಗಳಾಗುವ ಸಂಭವವಿರುವುದನ್ನು ಮನಗಂಡು ಜಿಲ್ಲೆಯಿಂದ ಪೊಲೀಸರನ್ನು ಕರೆಯಿಸಲಾಗಿದೆ. ಹಾಗೆಯೆ, ಜನರು ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ.












Click it and Unblock the Notifications