ಅಖಂಡ ಶ್ರೀನಿವಾಸ ಮೂರ್ತಿಗೆ ಬಿಜೆಪಿಯಿಂದ ಬಂತು ಬಿಗ್ ಆಫರ್; ಕಮಲ ಕಲಿಗಳ ಲೆಕ್ಕಾಚಾರವೇನು?
ಬೆಂಗಳೂರು, 08: ಲೋಕಸಭಾ ಚುನಾವಣೆ ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠೆಯ ಕಣವಾಗಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನ ಗೆಲ್ಲುವ ಮೂಲಕ ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಹಲವು ನಾಯಕರಿಗೆ ಬಿಜೆಪಿ ಗಾಳ ಹಾಕುತ್ತಿದೆ.
ಹೌದು, ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಬಿಜೆಪಿ,ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದು, ಪಕ್ಷಗಳ ನಾಯಕರು ಕೂಡ ಪ್ರಚಾರದ ಜತೆಗೆ ರಣತಂತ್ರ ರೂಪಿಸುತ್ತಿದ್ದಾರೆ.

ಕರ್ನಾಟಕ ಬಿಜೆಪಿಯು ಆಡಳಿತರೂಢ ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ನಿಟ್ಟಿನಲ್ಲಿ ಕಾಂಗ್ರೆಸ್ ವಿರೋಧಿಸುವ ನಾಯಕರನ್ನ ಸಂಪರ್ಕಿಸುತ್ತಿರುವ ಬಿಜೆಪಿ ನಾಯಕರು, ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಗಾಳ ಹಾಕಿದ್ದು, ಬಿಜೆಪಿ ಪಕ್ಷಕ್ಕೆ ಆಹ್ವಾನ ನೀಡಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರೇ ಮಾಜಿ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಭೇಟಿಯಾಗಿ, ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಅಸ್ತ್ರದ ಜೊತೆ ಜೊತೆ ದಲಿತ ಅಸ್ತ್ರವನ್ನ ಪ್ರಯೋಗಿಸುತ್ತಿದ್ದು, ಕಾಂಗ್ರೆಸ್ ವಿರುದ್ಧ ದಲಿತಾಸ್ತ್ರ ಪ್ರಯೋಗಿಸಲು ಇದೀಗ ಬಿಜೆಪಿ ಮುಂದಾಗಿದ್ದು, ಶೋಭಾ ಕರಂದ್ಲಾಜೆ ಅವರು ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಭೇಟಿ ಅವರನ್ನ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಪಕ್ಷ ಸೇರ್ಪಡೆ ವಿಚಾರವಾಗಿಯೂ ಬಿಜೆಪಿ ನಾಯಕರು ಅಖಂಡ ಶ್ರೀನಿವಾಸ್ ಮೂರ್ತಿ ಅವರ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಮಾಜಿ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ತೆರಳಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿಗೆ ಆಹ್ವಾನ ನೀಡಿದ್ದಲ್ಲದೆ, ಬಿಜೆಪಿ ನೀಡಿರುವ ದೊಡ್ಡ ಆಫರ್ ಬಗ್ಗೆಯೂ ಅವರ ಗಮನಕ್ಕೆ ತಂದಿದ್ದಾರೆ. ಆ ಮೂಲಕ ಬಿಜೆಪಿಗೆ ಸೇರ್ಪಡೆಯಾಗಲು ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ಪಕ್ಷಕ್ಕೆ ಬನ್ನಿ ಮುಂದಿನ ದಿನಗಳಲ್ಲಿ ನಿಮಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನಗಳನ್ನ ನೀಡುವ ಭರವಸೆಯನ್ನ ರಾಜ್ಯ ಬಿಜೆಪಿ ನಾಯಕರು ನೀಡಿದ್ದಾರೆ ಎನ್ನಲಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ತಪ್ಪಿಸಿದ್ದು, ದಲಿತರಿಗೆ ಮಾಡಿದ ಅನ್ಯಾಯ ಎಂದೇ ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗಿತ್ತು. ಕಾಂಗ್ರೆಸ್ ನಿಂದ ಟಿಕೆಟ್ ತಪ್ಪಿದ ಕಾರಣ ಅಖಂಡ ಶ್ರೀನಿವಾಸಮೂರ್ತಿ ಅವರು ಕೊನೆಯ ಕ್ಷಣದಲ್ಲಿ ಭಾರತೀಯ ಸಮಾಜ ಪಕ್ಷದಿಂದ ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದ್ದರು. ಇನ್ನೂ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರೆ, ಕಾಂಗ್ರೆಸ್ ವಿರುದ್ಧ ದಲಿತಾಸ್ತ್ರ ಪ್ರಯೋಗಿಸಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.












Click it and Unblock the Notifications