ತಮಿಳುನಾಡಿಗೆ ಕಾವೇರಿ ನೀರು; ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಡಬೇಕು: ಶೋಭಾ ಕರಂದ್ಲಾಜೆ
ಬೆಂಗಳೂರು, ಆಗಸ್ಟ್ 25: ತಮಿಳುನಾಡಿನ ನಾಯಕರನ್ನು ಮನವೊಲಿಸಬೇಕಾದ್ದು ಸಿದ್ದರಾಮಯ್ಯ ಮಾಡಬೇಕಾದ ಕೆಲಸ. ಬದಲಾಗಿ ನೀರು ಬಿಡುವುದನ್ನು ನಿಲ್ಲಿಸಿ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದರು.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟವನ್ನು ಸಂತುಷ್ಠಗೊಳಿಸಲು ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದಾರೆ. ತಮಿಳುನಾಡು - ಕರ್ನಾಟಕ ಭಾರತ-ಪಾಕಿಸ್ತಾನ ಅಲ್ಲ. ಅವರು ನಮ್ಮ ನೆರೆಹೊರೆಯವರು. ನೀರು ಹೆಚ್ಚಿದ್ದಾಗ ಬಿಡುವುದಕ್ಕೆ ಅಭ್ಯಂತರ ಇಲ್ಲ. ಕಳೆದ ವರ್ಷ ಮಳೆಯಾಗಿತ್ತು, ಹೆಚ್ಚು ನೀರು ಬಿಟ್ಟಿದ್ದರು. ಇವಾಗ ರಾಜ್ಯಕ್ಕೆ ನೀರಲ್ಲದಿದ್ದರೂ ನೀರು ಬಿಟ್ಟಿದ್ದಾರೆ. ನಮ್ಮ ಡ್ಯಾಂ ನಲ್ಲಿ ಎಷ್ಟು ನೀರಿದೆ ಹಾಗೂ ಎಷ್ಟು ನೀರನ್ನು ಬಿಟ್ಟಿದ್ದಾರೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಯಶಸ್ವಿಯಾಗಿ ಚಂದ್ರಯಾನ ಸಾಧಿಸಿರುವ ವಿಜ್ಞಾನಿಗಳಿಗೆ ಅಭಿನಂದನೆ. ಕಳೆದ ಬಾರಿ ಸ್ವತಃ ಪ್ರಧಾನಿ ಬೆಂಗಳೂರಿಗೆ ಬಂದಿದ್ದರು, ಅತ್ಯಂತ ಕಡಿಮೆ ಸಮಯದಲ್ಲಿ ಚಂದ್ರಯಾನ-3 ರೂಪಿಸಲಾಗಿದೆ ಚಂದ್ರನ ದಕ್ಷಿಣದಲ್ಲಿ ತಲುಪಿದ ಮೊದಲ ದೇಶ ಭಾರತ. ವಿಜ್ಞಾನಿಗಳನ್ನು ಪ್ರಧಾನಿ ಅಭಿನಂದಿಸಿದರು ಎಂದು ಹೇಳಿದರು.
ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವ ಸಮಯ ಹತ್ತಿರವಾಗುತ್ತಿದೆ. ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ನೇತೃತ್ವ ಬೇಕು ಎಂದು ವಿಶ್ವ ಬಯಸುತ್ತಿದೆ, ಅಂತಹ ಪ್ರಧಾನಿಯನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ. ಕಾಲೇಜು ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಹಿತಿ ಇರುವುದಿಲ್ಲ, ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ನಿಧನರಾದವರ ಹೆಸರು ಡಿಲೀಟ್, ನಕಲಿ ಮತದಾರರ ಗುರುತಿಸಬೇಕು. ಈ ಕಾರ್ಯವನ್ನು ಬಿಜೆಪಿ ಕೈಗೆತ್ತಿಕೊಂಡಿದೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ಮಾತ್ರ ಒತ್ತು ನೀಡುತ್ತಿರುವ ಕುರಿತಾಗಿ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಹಾಲು ಕರೆಯುವ ದನ. ಬೇರೆ ಯಾವ ಅಭಿವೃದ್ಧಿ ಕೆಲಸವೂ ನಡೆಯುತ್ತಿಲ್ಲ. ಈಶಾನ್ಯ ರಾಜ್ಯದ ಪುಟ್ಟ ಅಂಗಡಿಗಳಿಂದ ನಿಯೋಗ ಬಂದಿತ್ತು. ಅಲ್ಲಿಯವರಿಂದಲೂ ಬಿಬಿಎಂಪಿ ಮಾಸಿಕ 15 ಸಾವಿರ ರೂ. ಕೇಳುತ್ತಿದ್ದಾರೆ. ಇದರಿಂದ ಬೇಸೆತ್ತ ಅವರು ಬೆಂಗಳೂರು ಬಿಡಬೇಕಾಗುತ್ತದೆ ಎನ್ನುತ್ತಿದ್ದಾರೆ. ಇದು ಇವತ್ತಿನ ಕರ್ನಾಟಕದ ಸ್ಥಿತಿ ಎಂದು ಆರೋಪಿಸಿದರು.
ಇನ್ನೂ ಈ ವೇಳೆ ತೇಜಸ್ವಿ ಸೂರ್ಯ ಮಾತನಾಡಿ, ಮತದಾನ ನಮ್ಮೆಲ್ಲರ ಹಕ್ಕು ಹಾಗೂ ಕರ್ತವ್ಯ. ಸದೃಢ, ಸಶಕ್ತ ಹಾಗೂ ಸುಭದ್ರ ಸರ್ಕಾರದ ಆಯ್ಕೆ ಜವಾಬ್ದಾರಿ, ಮತದಾರರು ಜವಾಬ್ದಾರಿಯಿಂದ ನಿರ್ವಹಣೆ ಮಾಡಿದ್ದರಿಂದಲೇ 2014ರಲ್ಲಿ ಸುಭದ್ರ ಹಾಗೂ ಸಶಕ್ತ ಸರ್ಕಾರ ರಚನೆ ಆಯಿತು. ಈ ಮತದಾನದಿಂದಾಗಿ ದೇಶದಲ್ಲಿ 50 ಕೋಟಿ ಜನಧನ ಖಾತೆ ತೆರೆಯಲು ಕಾರಣವಾಯಿತು. ಶೌಚಾಲಯ ನಿರ್ಮಾಣ ಮಾಡಿ ಹೆಣ್ಣು ಮಕ್ಕಳ ಗೌರವ ಕಾಪಾಡಿತು ಎಂದು ಹೇಳಿದರು.












Click it and Unblock the Notifications