ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಶೋಭಾ ಕರಂದ್ಲಾಜೆ ಸ್ಪಷ್ಟನೆ
ಬೆಂಗಳೂರು, ಅಕ್ಟೋಬರ್ 25: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ತಮ್ಮ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೇಂದ್ರ ಸಚಿವೆಯಾಗಿಯೇ ಸಂತಸದಿಂದ ಇದ್ದೇನೆ, ರಾಜ್ಯ ರಾಜಕಾರಣಕ್ಕೆ ಬರುವ ಪ್ರಶ್ನೆಯೇ ಇಲ್ಲ. ನಾನು ಕೇಂದ್ರದಲ್ಲೇ ಇರುತ್ತೇನೆ. ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವೇ ಇಲ್ಲ. ನನಗೆ ಒಳ್ಳೆ ಖಾತೆ ಸಿಕ್ಕಿದೆ, ಅಲ್ಲಿಯೇ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ನನಗೆ ಯಾವ ವರಿಷ್ಠರಿಂದಲೂ, ಯಾವ ಸೂಚನೆಯೂ ಬಂದಿಲ್ಲ. ಯಾವ ಚರ್ಚೆಯೂ ಆಗಿಲ್ಲ. ಇವೆಲ್ಲ ಸುದ್ದಿ ಹೇಗೆ ಬರುತ್ತಿವೆಯೋ ನನಗೆ ಗೊತ್ತಿಲ್ಲ. ನನ್ನ ಇಚ್ಛೆ ಇರುವುದು ಮುಂದಿನ ಬಾರಿಯೂ ಮೋದಿ ಪ್ರಧಾನಿ ಆಗಬೇಕು ಎಂಬುದು. ಆ ಕುರಿತೇ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಕರ್ನಾಟಕದಲ್ಲಿ ನೂತನ ಸರ್ಕಾರ ಬಂದು 5 ತಿಂಗಳಾದರೂ ವಿರೋಧ ಪಕ್ಷದ ನಾಯಕರ ಆಯ್ಕೆ ಪ್ರಕ್ರಿಯೆ ಶುರುವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷರ ಅವಧಿಯೂ ಮುಗಿದಿದೆ. ಆದರೆ ಈ ಎರಡು ಹುದ್ದೆಗಳಿಗೆ ನಾಯಕರ ನೇಮಕ ಮಾಡುವ ಬಗ್ಗೆ ಕೇಂದ್ರ ಹೈಕಮಾಂಡ್ ಹಸಿರು ನಿಶಾನೆ ತೋರಿಲ್ಲ. ಹೀಗಾಗಿ ಎರಡು ಹುದ್ದೆ ನೇಮಕಾತಿ ಬಗ್ಗೆ ಹಲವಾರು ಹೆಸರುಗಳು ರೇಸ್‌ನಲ್ಲಿ ಕೇಳಿಬರುತ್ತಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಸಂಬಂಧ ಬಿಎಸ್ ಯಡಿಯೂರಪ್ಪನವರ ಮಗ ಬಿಎಸ್ ವಿಜಯೇಂದ್ರ ಹೆಸರು ಪ್ರಬಲವಾಗಿ ಕೇಳಿ ಬಂದಿದೆ. ಇದಕಿಂತ ಮೊದಲು ಸಿಟಿ ರವಿ, ಅಶ್ವಥ್ ನಾರಾಯಣ, ಆರ್ ಅಶೋಕ್ ಸೇರಿದಂತೆ ಹಲವಾರು ನಾಯಕರ ಹೆಸರುಗಳು ಕೇಳಿ ಬಂದಿದ್ದವು. ನಿನ್ನೆ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಸಂಬಂಧ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ನಾನೂ ಈ ಹುದ್ದೆ ಆಕಾಂಕ್ಷಿ ಎಂದು ಹೇಳಿದ್ದಾರೆ.
ಪಕ್ಷ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರಾಜ್ಯ ವಿಧಾನಸಭೆಗೆ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೆಲವು ಅಭ್ಯರ್ಥಿಗಳನ್ನು ಬದಲಾಯಿಸದಂತೆ ಪಕ್ಷದ ಹೈಕಮಾಂಡ್‌ಗೆ ಸಲಹೆ ನೀಡಿದ್ದರು. ಅವರ ಮಾತಿಗೆ ಕಿವಿಗೊಡದೆ ಪಕ್ಷ ಪತನಗೊಂಡಿದೆ' ಎಂದು ಇಲ್ಲಿನ ಸರ್ವಜನಿಕ ವಿಜಯದಶಮಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು. ಪಕ್ಷವನ್ನು ಅಧಿಕಾರಕ್ಕೆ ತಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಂತಹ ಜಾತ್ಯತೀತ ಮತ್ತು ಸಮರ್ಥ ನಾಯಕ ಕರ್ನಾಟಕಕ್ಕೆ ಅಗತ್ಯವಿದೆ. ಪಕ್ಷವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಸಮಯ ಮತ್ತೊಮ್ಮೆ ಬಂದಿದೆ. ಜಾತ್ಯತೀತ ಮನೋಭಾವ ಹೊಂದಿರುವ ಯಡಿಯೂರಪ್ಪ ನೇತೃತ್ವದಲ್ಲಿ ಸಾರ್ವತ್ರಿಕ ಚುನಾವಣೆಗೆ ಹೋಗುವುದು ಉತ್ತಮ. ತಮ್ಮ ರಾಜಕೀಯ ಜೀವನದ ಕೊನೆ ಹಂತದಲ್ಲಿರುವ ಯಡಿಯೂರಪ್ಪ ಅವರು ಇಂದಿಗೂ ಕರ್ನಾಟಕದ ಜನರಲ್ಲಿ ಗೌರವವನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.












Click it and Unblock the Notifications