Finance Commission: ಕೇಂದ್ರ ಅನುದಾನ ಕೊಟ್ಟಿದ್ದರೆ ನಾನು ರಾಜಕೀಯ ತೊರೆಯುವೆ: ಸಿದ್ದರಾಮಯ್ಯ
ಹುಬ್ಬಳ್ಳಿ: ನವೆಂಬರ್ 04: ಕರ್ನಾಟಕಕ್ಕೆ ಯಾವಗಲೂ ಕೇಂದ್ರ ಸರ್ಕಾರ ತೆರಿಗೆ ಪಾಲು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತದೆ ಎಂದು ಕೇಂದ್ರದ ವಿರುದ್ಧ ದೂರಿದ್ದ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಕಿಡಿ ಕಾರಿದ್ದಾರೆ. ಕೇಂದ್ರ ಸರ್ಕಾರ 16 ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಅನುದಾನ ನೀಡಿಲ್ಲ. ನೀಡಿದ್ದರೆ ನಾನು ರಾಜಕೀಯ ಬಿಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ.
ಶಿಗ್ಗಾವಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಸೋಮವಾರ ಹುಬ್ಬಳ್ಳಿಗೆ ಬಂದಿಳಿದ ಅವರು ಸುದ್ದಿಗಾರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಕೇಂದ್ರ ಸರ್ಕಾರ 11495 ಕೋಟಿ ರೂ. ಅನುದಾನ ಕೊಟ್ಟಿದ್ದರೆ ನಾನು ರಾಜಕೀಯ ಬಿಟ್ಟು ಬಿಡುತ್ತೇನೆ ಎಂದು ಹೇಳಿದರು.

15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು 16 ನೇ ಹಣಕಾಸು ಆಯೋಗ ಸ್ಪಷ್ಟಪಡಿಸಿದೆ. ಅಲ್ಲದೇ ಕರ್ನಾಟಕ ರಾಜ್ಯಕ್ಕೆ 5495 ಕೋಟಿ ರೂ. ವಿಶೇಷ ಅನುದಾನ, ಪೆರಿಪೆರಲ್ ರಿಂಗ್ ರೋಡ್ ಗೆ 3 ಸಾವಿರ ಕೋಟಿ ರೂ. ಮತ್ತು ಕೆರೆಗಳ ಅಭಿವೃದ್ಧಿ ಗೆ 3 ಸಾವಿರ ಕೋಟಿ ರೂ. ಅನುದಾನ ನೀಡಬೇಕೆಂದು ಶಿಫಾರಸು ಮಾಡಲಾಗಿತ್ತು.
ಪ್ರಹ್ಲಾದ್ ಜೋಶಿ ರಾಜಕೀಯ ಬಿಡ್ತಾರಾ? ಸಿಎಂ ಸವಾಲು
ಈ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿದೆಯಾ? ಕೊಟ್ಟಿದ್ದರೆ ನಾನು ರಾಜಕೀಯ ಬಿಟ್ಟು ಬಿಡುತ್ತೇನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜಕೀಯ ಬಿಡುತ್ತಾರಾ ಎಂದು ಅವರು ಬಹಿರಂಗ ಸವಾಲು ಹಾಕಿದರು.
ರಾಜ್ಯದಿಂದ ಕೇಂದ್ರಕ್ಕೆ ವಾರ್ಷಿಕ ವಾಗಿ 4.55 ಲಕ್ಷ ಕೋಟಿ ರೂ. ತೆರಿಗೆ ಪಾವತಿ ಆಗುತ್ತದೆ. ಆದರೆ ಮರಳಿ ರಾಜ್ಯಕ್ಕೆ ಬರುವುದು 55-60 ಸಾವಿರ ಕೋಟಿ ರೂಪಾಯಿ ಮಾತ್ರ. ಇದು ಅನ್ಯಾಯ ಅಲ್ಲದೇ ಮತ್ತಿನ್ನೇನು ಎಂದು ಪ್ರಶ್ನಿಸಿದರು.

ಕರ್ನಾಟಕಕ್ಕೆ ಆದ ಅನ್ಯಾಯ ಪ್ರಶ್ನಿಸಿದರೆ ಅದನ್ನು ರಾಜಕೀಯ ಎಂದರೆ ಏನು ಹೇಳುವುದು? ರಾಜ್ಯಕ್ಕೆ ಅನ್ಯಾಯವಾಗಿದೆಯೆಂದು ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಯಾವತ್ತಾದರೂ ಮಾತನಾಡಿದ್ದಾರಾ ಎಂದು ಕೇಳಿದರು.
ಬಡವರ ವಿರೋಧಿ ಬಿಜೆಪಿ: ಸಿಎಂ ಗುಡುಗು
ಎಲ್ಲ ಜಾತಿ ಧರ್ಮದವರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದೆ. ಬಿಜೆಪಿಯವರಿಗೆ ಸಮಾನತೇ ಬೇಕಾಗಿಲ್ಲ.
ಅಸಮಾನತೆ ಇರಬೇಕು. ಬಿಜೆಪಿಯವರು ಬಡವರ ವಿರೋಧಿಗಳು. ಹೀಗಾಗಿ ಅವರನ್ನು ನಾವು ಬಡವರ ವಿರೋಧಿಗಳು ಎಂದು ಕರೆಯುತ್ತೇವೆ. ಅವರಿಗೆ ಬಡವರಿಗೆ ಆರ್ಥಿಕವಾಗಿ ಸಮಾಜಿಕ ಶಕ್ತಿ ಬರಬಾರದು ಎಂಬುದರಲ್ಲಿಯೇ ಬಿಜೆಪಿಗೆ ನಂಬಿಕೆ ಇದೆ ಎಂದು ಅವರು ವಾಗ್ದಾಳಿ ನಡೆಸಿದರು.
ಶಿಗ್ಗಾವಿಯಲ್ಲಿ ಗೆದ್ದೆ ಗೆಲ್ಲುತ್ತೇವೆ: ಸಿಎಂ ವಿಶ್ವಾಸ
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ನಾವು ಈ ಬಾರಿ ಗೆದ್ದೇ ಗೆಲ್ಲುತ್ತೇವೆ. ಅಲ್ಲಿ ನಮಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ನಾನು ಮುಂದಿನ ಮೂರು ದಿನ ಶಿಗ್ಗಾವಿ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಇಂದಿನಿಂದಲೇ ಪ್ರಚಾರ ನಡೆಯಲಿದೆ. ಈ ಕಳೆದ ಚುನಾವಣೆ ವೇಳೆ ಕ್ಷೇತ್ರಕ್ಕೆ ಬರಲು ನನಗೆ ಆಗಲಿಲ್ಲ. ಲೋಕಸಭೆಯಲ್ಲಿ ಹಾವೇರಿಯಲ್ಲಿ ಲೀಡ್ ಪಡೆದ ನಾವು ಈ ಉಪಚುನಾವಣೆಯಲ್ಲಿ ಇಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ ಎಂದು ಹೇಳಿದರು.
ವಕ್ಫ್ ವಿಚಾರದಲ್ಲಿ ಬಿಜೆಪಿ ಸುಳ್ಳು ಆರೋಪ
ವಕ್ಫ ವಿಚಾರದಲ್ಲಿ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. ಅವರು ಯಾವತ್ತು ಸಮಸ್ಯೆ ಮೇಲೆ ಹೋರಾಟ ಮಾಡಿಲ್ಲ. ರೈತರಿಗೆ ನೀಡಿದ ನೋಟಿಸ್ ವಾಪಸ್ ತಗೆದುಕೊಳ್ಳಿ ಎಂದು ಹೇಳಿದ ಮೇಲೂ ಬಿಜೆಪಿ ಹೋರಾಟ ಮಾಡುತ್ತಿದೆ. ಇಡೀ ಬಿಜೆಪಿ ರಾಜಕೀಯಕ್ಕಾಗಿ ವಕ್ಫ ವಿಚಾರದ ಮೇಲೆ ಬಿಜೆಪಿ ಹೋರಾಟ ಮಾಡುತ್ತಿದೆ.
ರೈತರನ್ನು ಒಕ್ಕಲೆಬ್ಬಿಸಬಾರದು: ಸಿಎಂ
ಅಸಲಿಗೆ ಬಿಜೆಪಿಯವರೇ ವಕ್ಟ್ ಆಸ್ತಿ ರಕ್ಷಿಸಬೇಕು ಎಂದು ಹೇಳಿದ್ದರು. ನೋಟಿಸ್ ನೀಡಿದ್ದರು ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೀಗ ಉಲ್ಟಾ ಹೊಡೆದಿದ್ದಾರೆ. ಯಾವದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಅವರು ತಿಳಿಸಿದರು .












Click it and Unblock the Notifications