'ಜಲಜೀವನ್ ಮಿಷನ್' ಕಾಮಗಾರಿ ಗುಣಮಟ್ಟ ಖಾತರಿ ಪಡಿಸಲು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೂಚನೆ!
ಬೆಂಗಳೂರು, ಜು. 13: ಕರ್ನಾಟಕದ ಜಲಜೀವನ್ ಮಿಷನ್ ಕಾರ್ಯಕ್ರಮವನ್ನು ನಿಗದಿತ ಅವಧಿಯೊಳಗೇ ಪೂರ್ಣಗೊಳಿಸುವುದು ಸೇರಿದಂತೆ, ಗುಣಮಟ್ಟದ ಕಾಮಗಾರಿ ಹಾಗೂ ನೀರು ಪೂರೈಸುವಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಗಜೇಂದ್ರ ಸಿಂಗ್ ಶೇಖಾವತ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.
"ಜಲಜೀವನ್ ಮಿಷನ್ ಯೋಜನೆ ಮೂಲಕ 2024ರ ವೇಳೆಗೆ ದೇಶದ ಒಟ್ಟು 18.93 ಕೋಟಿ ಗ್ರಾಮೀಣ ಪ್ರದೇಶದ ಮನೆಗಳಲ್ಲಿ 15.70 ಕೋಟಿ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿ ಕೇವಲ ಸೌಲಭ್ಯ ಕಲ್ಪಿಸುವುದು ಮಾತ್ರವಲ್ಲ, ನಿರಂತರವಾಗಿ ಕುಡಿಯುವ ನೀರು ಒದಗಿಸುವುದು ಸರ್ಕಾರದ ಆದ್ಯತೆ. ಅಂತೆಯೇ ರಾಜ್ಯದಲ್ಲಿ ಆದ್ಯತಾ ಜಿಲ್ಲೆಗಳಾದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕ್ರಿಯಾತ್ಮಕ ನಳ ಸಂಪರ್ಕಗಳನ್ನು ಆದ್ಯತೆಯ ಮೇರೆಗೆ ಒದಗಿಸಬೇಕು. ಜೊತೆಗೆ ನಳ ಸಂಪರ್ಕ ನೀಡುವುದರೊಂದಿಗೆ ಪೂರೈಸುವ ನೀರಿನ ಗುಣಮಟ್ಟವನ್ನೂ ಖಾತರಿ ಪಡಿಸಬೇಕು" ಎಂದು ಗಜೇಂದ್ರ ಸಿಂಗ್ ಶೇಖಾವತ್ ಇದೇ ಸಂದರ್ಭದಲ್ಲಿ ಸ್ಪಷ್ಟನೆ ಸೂಚನೆಯನ್ನು ಕೊಟ್ಟಿದ್ದಾರೆ.

ಕೇಂದ್ರ ಸಚಿವರಿಗೆ ರಾಜ್ಯದಲ್ಲಿ 'ಜಲಜೀವನ್ ಮಿಷನ್ ಯೋಜನೆ' ಪ್ರಗತಿಯ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, "ರಾಜ್ಯದ 91.19 ಲಕ್ಷ ಗ್ರಾಮೀಣ ಕುಟುಂಬಗಳಿಗೆ ತಲಾ 55 ಎಲ್‌ಪಿಸಿಡಿ ಶುದ್ಧ ನೀರು ಒದಗಿಸುವ ಗುರಿ ಇದೆ. ಯೋಜನೆಯಡಿ 2021-22 ನೆ ಆರ್ಥಿಕ ವರ್ಷದಲ್ಲಿ 25.17 ಲಕ್ಷ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ. 2022-23 ರಲ್ಲಿ 27.15 ಲಕ್ಷ ಹಾಗೂ 2023 ಡಿಸೆಂಬರ್ ಅಂತ್ಯದ ವೇಳೆಗೆ 10.72 ಲಕ್ಷ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ" ಎಂದು ರಾಜ್ಯದಲ್ಲಿ ಯೋಜನೆ ಅನುಷ್ಠಾನದ ಕುರಿತು ವಿವರಿಸಿದರು.

"ಆದ್ಯತಾ ಜಿಲ್ಲೆಗಳಾದ ರಾಯಚೂರು ಜಿಲ್ಲೆಗೆ 2000 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಯೋಜನೆ ರೂಪಿಸಲಾಗಿದ್ದು, ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಶೀಘ್ರವೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಯಾದಗಿರಿ ಜಿಲ್ಲೆಯಲ್ಲಿಯೂ ಬಹುಗ್ರಾಮ ಯೋಜನೆ ರೂಪಿಸಲಾಗುತ್ತಿದೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆಗೆ ಮಾಹಿತಿ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications