ರಾಜ್ಯದ ಮುಜರಾಯಿ ದೇವಸ್ಥಾನಗಳ ಆಸ್ತಿ ಕಬಳಿಸಿದವರಿಗೆ ಶುರುವಾಯ್ತು ಸಂಕಷ್ಟ!
ಬೆಂಗಳೂರು, ಆ. 18: ದೇವಸ್ಥಾನಗಳ ಎಷ್ಟೇ ಭಕ್ತಿಯಿದ್ದರೂ, ಕೆಲವೆಡೆ ದೇವಸ್ಥಾನಗಳ ಆಸ್ತಿಯನ್ನೇ ಕಬಳಿಸಿರುವುದು ಕಂಡುಬಂದಿದೆ. ದೇವಸ್ಥಾನಗಳು, ಮಠ ಮಾನ್ಯಗಳ ಆಸ್ತಿಯನ್ನು ಕಬಳಿಸುವುದು ಹೊಸದೇನಲ್ಲ. ಜೊತೆಗೆ ವಕ್ಫ್‌ಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನೂ ಕಬಳಿಸಿರುವುದು ಇದೆ. ಇದೀಗ ಈ ಕಬಳಿಕೆಯನ್ನು ಮತ್ತೆ ವಶಕ್ಕೆ ಪಡೆಯಲು ರಾಜ್ಯ ಮುಜರಾಯಿ ಇಲಾಖೆ ಮುಂದಾಗಿದೆ. ಈ ಬಗ್ಗೆ ನೂತನ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಖಡಕ್ ಆದೇಶ ಮಾಡಿದ್ದಾರೆ.
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸುವಂತೆ ಮುಜರಾಯಿ, ವಕ್ಪ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಬುಧವಾರ ಸೂಚನೆ ನೀಡಿದ್ದಾರೆ. ಮುಜರಾಯಿ ಇಲಾಖೆ ವಹಿಸಿಕೊಂಡ ಬಳಿಕ ಶಶಿಕಲಾ ಜೊಲ್ಲೆ ಅವರು ನೂತನ ಕಚೇರಿ ಪೂಜೆ ಮಾಡಿದರು. ಇದೇ ಸಂದರ್ಭದಲ್ಲಿ ಇಲಾಖೆ ವ್ಯಾಪ್ತಿಯ ಎ, ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳ ಕುರಿತು ಜಿಲ್ಲಾವಾರು ಮಾಹಿತಿ ಪಡೆದುಕೊಂಡು, ಆಸ್ತಿ ಎಷ್ಟಿದೆ ಎಂದು ಸಮೀಕ್ಷೆ ನಡೆಸಿ, ದೇವಸ್ಥಾನಗಳ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ ಇನ್ನೂ ಹಲವು ಸೂಚನೆಗಳನ್ನು ಅಧಿಕಾರಿಗಳಿಗೆ ಕೊಟ್ಟಿದ್ದಾರೆ.

ಇಲಾಖೆಯಿಂದ ಸಾರ್ವಜನಿಕರಿಗೆ ಸಿಗುವ ಪ್ರಯೋಜನಗಳೇನು?
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಜೊತೆಗೆ ಭಕ್ತರಿಗೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಅದಕ್ಕಾಗಿ ಕ್ರಮ ಕೈಗೊಳ್ಳುವಂತೆ ಇಲಾಖೆ ಸಚಿವ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮುಜಾರಾಯಿ ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯುವ ಯೋಜನೆಗಳ ಮಾಹಿತಿಯನ್ನೂ ಸಚಿವರು ಪಡೆದು ಕೊಂಡಿದ್ದಾರೆ.

ತಿರುಪತಿ ಯಾತ್ರಿ ನಿವಾಸದ ಮಾದರಿ ಅನುಸರಿಸಲು ಸೂಚನೆ!
ರಾಜ್ಯದಲ್ಲಿ ಸುಪ್ರಸಿದ್ಧ ದೇವಸ್ಥಾನಗಳಿದ್ದರೂ ಅಲ್ಲಿ ಭಕ್ತರಿಗೆ ವಸತಿಗಾಗಿ ಯಾತ್ರಿ ನಿವಾಸಗಳ ಕೊರತೆ ಸಾಕಷ್ಟಿದೆ. ಹೀಗಾಗಿ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಬಳಿ ಭಕ್ತರಿಗೆ ವಸತಿಗಾಗಿ ಎಷ್ಟು ಯಾತ್ರಿ ನಿವಾಸಗಳಿವೆ? ರಾಜ್ಯದಲ್ಲಿ ಯಾವ ದೇವಸ್ಥಾನದ ವ್ಯಾಪ್ತಿಯಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲು ಅವಕಾಶವಿದೆ? ಎನ್ನುವ ಬಗ್ಗೆ ಸಂಪೂರ್ಣ ಅಗತ್ಯ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸಚಿವ ಜೊಲ್ಲೆ ಸೂಚಿಸಿದ್ದಾರೆ.
ತಿರುಪತಿಯ ತಿಮ್ಮಪ್ಪ ದೇವಸ್ಥಾನದ ಬಳಿ ರಾಜ್ಯ ಸರ್ಕಾರದಿಂದ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದ ಭಕ್ತರು ಹೆಚ್ಚಾಗಿ ನಡೆದುಕೊಳ್ಳುವ ಮಹಾರಾಷ್ಟ್ರದ ಪಂಡರಪುರ ಹಾಗೂ ತುಳಜಾಭವಾನಿ ದೇವಸ್ಥಾನದ ಬಳಿಯೂ ತಿರುಪತಿಯಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲು ರಾಜ್ಯ ಮುಜರಾಯಿ ಇಲಾಖೆ ಚುಂತನೆ ನಡೆಸಿದೆ. ಆ ಎರಡೂ ದೇವಸ್ಥಾನಗಳ ಸಮೀಪ ರಾಜ್ಯ ಸರ್ಕಾರಕ್ಕೆ ಸೇರಿರುವ ಜಮೀನು ಎಷ್ಟಿದೆ ಎನ್ನುವ ಮಾಹಿತಿ ಪಡೆಯುವಂತೆ ಅಧಿಕಾರುರಿಗಳಿಗೆ ಶಶಿಕಲಾ ಜೊಲ್ಲೆ ಸೂಚಿಸಿದ್ದಾರೆ.

ಆಂಧ್ರ ಹಾಗೂ ಕೇರಳದ ದೇವಸ್ಥಾನಗಳಲ್ಲಿಯೂ..!
ಅದೇ ಮಾದರಿಯಲ್ಲಿ ಆಂಧ್ರಪ್ರದೇಶದ ಶ್ರೀಶೈಲಂಗೆ ಭೇಟಿ ನೀಡಿ ಅಲ್ಲಿಯೂ ರಾಜ್ಯದ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡುವ ಕುರಿತು ಸ್ಥಳ ಪರಿಶೀಲನೆ ನಡೆಸಿ, ಜೊತೆಗೆ ತಮಿಳುನಾಡು, ಕೇರಳದ ಪ್ರಸಿದ್ಧ ದೇವಸ್ಥಾನಗಳಲ್ಲಿ ಯಾತ್ರಿ ನಿವಾಸಗಳನ್ನು ತೆರೆಯುವ ಬಗ್ಗೆ ವಸ್ತುಸ್ಥಿತಿ ವರದಿ ನೀಡುವಂತೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊರೊನಾ ವೈರಸ್ ಮೂರನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೇವಸ್ಥಾನಗಳಿಗೆ ಸಂಪೂರ್ಣ ನಿಷೇಧ ಹೇರುವ ಬದಲು ಭಕ್ತರನ್ನು ಹಂತ ಹಂತವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ಆಧರಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಲು ತೀರ್ಮಾನ ಮಾಡಲಾಗಿದೆ. ಇನ್ನು ರಾಜ್ಯ ಸರ್ಕಾರದ ಮಹತ್ವದ ಸಾಮೂಹಿಕ ಮದುವೆ ಯೋಜನೆ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಯೋಜನೆ ಯಶಸ್ವಿಗೆ ಕ್ರಮ ಕೈಗೊಳ್ಳುವಂತೆ ಸಚಿವೆ ಶಶಿಕಲಾ ಜಿಲ್ಲೆ ಸೂಚಿಸಿದ್ದಾರೆ.
Recommended Video

ಕೊವಿಡ್ ಕೇರ್ ಕೇಂದ್ರವಾಗಿ ಹಜ್ ಭವನ ಬಳಕೆ!
ಇದೇ ವೇಳೆ. ವಕ್ಫ್ ಮತ್ತು ಹಜ್ ಇಲಾಖೆ ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕ ಸರ್ಫರಾಜ್ ಖಾನ್ ಅವರೊಂದಿಗೆ ಚರ್ಚೆ ನಡೆಸಿದದರು. ಹಜ್ ಭವನವನ್ನು ಕೊವಿಡ್ ಕೇರ್ ಕೇಂದ್ರವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications