• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳಿಗೆ ಮೊಟ್ಟೆ ಖರೀದಿಯಲ್ಲಿ ಲಂಚ: ಆರೋಪ ನಿರಾಕರಿಸಿದ ಸಚಿವೆ ಶಶಿಕಲಾ ಜೊಲ್ಲೆ

|
Google Oneindia Kannada News

ಬೆಂಗಳೂರು, ಜು. 24: "ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ದು, ವಯಕ್ತಿಕವಾಗಿ ನನ್ನ ತೇಜೊವಧೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ" ಎಂದು ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಹೊರಡಿಸಿರುವ ಅವರು, "ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿ ಮಹಿಳೆಯರು, ಮಕ್ಕಳು, ವೃದ್ಧರು, ವಿಕಲಚೇತನರ ಏಳಿಗೆಗಾಗಿ ನಿರಂತರವಾಗಿ ನಾನು ಶ್ರಮಿಸುತ್ತಿದ್ದೇನೆ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಉಂಟಾದ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಇಲಾಖೆ ವತಿಯಿಂದ ಅಗತ್ಯ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಅಲ್ಲದೆ ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್ ತೆರೆಯಲು ಕ್ರಮ ವಹಿಸಲಾಗಿದೆ" ಎಂದು ಸಚಿವೆ ಶಶಿಕಲಾ ಜೊಲ್ಲೆ ವಿವರಿಸಿದ್ದಾರೆ.

ಎರಡನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದೇನೆ

ಎರಡನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದೇನೆ

"ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಜವಾಬ್ದಾರಿ ವಹಿಸಿಕೊಳ್ಳುವ ಸಂದರ್ಭದಲ್ಲಿ ಪೋಷಣ ಅಭಿಯಾನ ಯೋಜನೆ ಅಡಿ, ಪೋಷಣ ಮಾಸಾಚರಣೆಯಲ್ಲಿ ದೇಶದಲ್ಲಿ ನಮ್ಮ ರಾಜ್ಯವು 15 ನೇ ಸ್ಥಾನದಲ್ಲಿತ್ತು. ಆದರೆ, ಕಳೆದ ಎರಡು ವರ್ಷದಲ್ಲಿ ನಿರಂತರ ಪರಿಶ್ರಮ ಹಾಗೂ ಅಧಿಕಾರಿಗಳ ಸಹಕಾರದೊದಿಗೆ 2 ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದೇವೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಅಡಿಯಲ್ಲಿ ದೇಶದಲ್ಲಿ ರಾಜ್ಯವು 26 ನೇ ಸ್ಥಾನದಲ್ಲಿತ್ತು. ಈಗ ಐದನೇ ಸ್ಥಾನಕ್ಕೆ ತರಲಾಗಿದೆ. ರಾಜ್ಯದಲ್ಲಿ ಅಪೌಷ್ಟಿಕತೆ ಪ್ರಮಾಣವು ಶೇಕಡಾ 0.3ರಷ್ಟಿತ್ತು. ನಾನು ಅಧಿಕಾರ ಸ್ವೀಕರಿಸಿದ ಮೇಲೆ ಅದನ್ನು ಎರಡು ವರ್ಷಗಳಲ್ಲಿ ಶೇಕಡಾ 0.1ಕ್ಕೆ ಇಳಿಸಲಾಗಿದೆ" ಎಂದು ಸಚಿವೆ ಶಶಿಕಲಾ ಜೊಲ್ಲೆ ತಮ್ಮ ಸ್ಪಷ್ಟನೆಯಲ್ಲಿ ವಿವರಿಸಿದ್ದಾರೆ.

ಮೊಟ್ಟೆಗೆ ಟೆಂಡರ್ ಕರೆದಿಲ್ಲ

ಮೊಟ್ಟೆಗೆ ಟೆಂಡರ್ ಕರೆದಿಲ್ಲ

"ಒಬ್ಬ ಮಹಿಳೆಯಾಗಿ ನನಗೆ ಪಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿರುವ ಅವಕಾಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಏಳಿಗೆಗಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಮೂಲಕ ರಹಸ್ಯ ಕಾರ್ಯಾಚರಣೆ ನಡೆಸಿ ನನ್ನನ್ನು ಆರೋಪಿತಳನ್ನಾಗಿ ಮಾಡುವ ಪ್ರಯತ್ನ ನಡೆಸುತ್ತಿರುವುದು ದುರದೃಷ್ಟಕರ. ಖಾಸಗಿ ವಾಹಿನಿಯಲ್ಲಿ ಹೇಳುತ್ತಿರುವ ಹಾಗೆ ಮೊಟ್ಟೆ ಖರೀದಿಗೆ ಇದುವರೆಗೂ ಯಾವುದೇ ಟೆಂಡರ್ ಕರೆದಿಲ್ಲ. ಅಲ್ಲದೇ ಟೆಂಡರ್ ನೀಡಲು ನಾನು ವಯಕ್ತಿಕವಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ನಮ್ಮ ಬಿಜೆಪಿ ಪಕ್ಷದ ಶಾಸಕರಾದ ಪರಣ್ಣ ಮುನವಳ್ಳಿ ಅವರು ತಮ್ಮ ಸಂಬಂಧಿಕರು ಎಂದು ಕರೆದುಕೊಂಡು ಬಂದಾಗ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಹಣಕಾಸಿನ ವ್ಯವಹಾರದ ಕುರಿತು ನಾನು ಮಾತನಾಡಿಲ್ಲ" ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ

ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ

"ಒಬ್ಬ ಮಹಿಳೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ರಾಜಕೀಯದಲ್ಲಿ ನನ್ನದೇ ಆದ ತತ್ವ ಸಿದ್ದಾಂತ ನಂಬಿಕೊಂಡು ಕೆಲಸ ಮಾಡುತ್ತಿರುವ ನನ್ನ ಏಳಿಗೆಯನ್ನು ಸಹಿಸದವರು, ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ. ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿರುವ ಮಾಹಿತಿ ಪ್ರಕಾರ 2021 ರ ಫೆಬ್ರವರಿ ತಿಂಗಳಲ್ಲಿಯೇ ರಹಸ್ಯ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳುತ್ತಿದೆ. ಆದರೆ, ರಹಸ್ಯ ಕಾರ್ಯಾಚರಣೆ ಮಾಡಿದವರು ಆರು ತಿಂಗಳಿನಿಂದ ಮಾಧ್ಯಮದವರ ಮುಂದೆ ಬಿಡುಗಡೆ ಮಾಡದೇ ಇಟ್ಟುಕೊಂಡಿರುವ ಉದ್ದೇಶದ ಬಗ್ಗೆ ಅನುಮಾನ ಮೂಡಿಸುತ್ತದೆ. ಇದರ ಹಿಂದೆ ವ್ಯವಸ್ಥಿತ ರಾಜಕೀಯ ಪಿತೂರಿ ಇರುವುದು ಎದ್ದು ಕಾಣಿಸುತ್ತಿದೆ. ನಾನು ಷಡ್ಯಂತ್ರಕ್ಕೆ ಬಲಿಯಾಗದೆ, ಪಕ್ಷ ಹಾಗೂ ಪಕ್ಷದ ನಾಯಕರು ನನ್ನ ಮೇಲೆ ಇಟ್ಟಿರುವ ಭರವಸೆ, ನಂಬಿಕೆಯನ್ನು ಉಳಿಸಿಕೊಂಡು ಪ್ರಾಮಾಣಿಕವಾಗಿ ರಾಜ್ಯದ ಜನರ ಸೇವೆ ಮಾಡುತ್ತೇನೆ. ಅಲ್ಲದೇ ನನ್ನ ವಿರುದ್ಧ ಆಧಾರ ರಹಿತವಾಗಿ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಕಾನೂನು ಹೋರಾಟವನ್ನೂ ಮಾಡಲು ಚಿಂತನೆ ನಡೆಸುತ್ತಿದ್ದೇನೆ" ಎಂದು ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜೊಲ್ಲೆ ವಿವರಿಸಿದ್ದಾರೆ.

  Vehicles floating? ಲಕ್ಷ ಲಕ್ಷ ಬೆಲೆಬಾಳುವ ಕಾರ್ ಪರಿಸ್ಥಿತಿ ನೋಡಿ!! | Oneindia Kannada
  ಖಾಸಗಿ ವಾಹಿನಿಯ ಸ್ಟಿಂಗ್ ಆಪರೇಷನ್?

  ಖಾಸಗಿ ವಾಹಿನಿಯ ಸ್ಟಿಂಗ್ ಆಪರೇಷನ್?

  ಖಾಸಗಿ ಸುದ್ದಿವಾಹಿನಿ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತೃಪೂರ್ಣ ಯೋಜನೆಯಡಿಯಲ್ಲಿ ಮೊಟ್ಟೆ ವಿತರಿಸುವ ಟೆಂಡರ್ ಹಂಚಿಕೆಯಲ್ಲಿ ಲಂಚದ ಆಮಿಷವೊಡ್ಡಿದ ಆರೋಪ ಎದುರಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಅಂಗನವಾಡಿ ಮೂಲಕ ಗರ್ಭಿಣಿಯರು, ಅಪೌಷ್ಟಿಕ ಮಕ್ಕಳು ಮತ್ತು ಬಾಣಂತಿಯರಿಗೆ ಮೊಟ್ಟೆ ವಿತರಿಸಲು ಸರ್ಕಾರ ಯೋಜನೆ ರೂಪಿಸಿದೆ. ಯೋಜನೆ ಅನುಷ್ಠಾನಕ್ಕೆ ಟೆಂಡರ್ ಮೂಲಕ ಮೊಟ್ಟೆ ವಿತರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತೀರ್ಮಾನ ಮಾಡಿತ್ತು. ಆ ಟೆಂಡರ್ ಪಡೆಯುವವರು ಪ್ರತಿ ತಿಂಗಳು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ತಿಂಗಳಿಗೆ 1 ಕೋಟಿ ರೂ. ಹಣ ನೀಡಬೇಕು ಎನ್ನುವ ಸಂಭಾಷಣೆ ಸ್ಟಿಂಗ್ ಆಪರೇಶನ್‌ನಲ್ಲಿ ರೆಕಾರ್ಡ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸಚಿವ ಶಶಿಕಲಾ ಜೊಲ್ಲೆ ರಾಜೀನಾಮೆಗೆ ಆಗ್ರಹಿಸಿವೆ.

  English summary
  Women and Child Welfare Minister Shashikala Jolle has clarified that allegations of sting operation by news channel is baseless. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X