ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಗೆ ಶ್ಯಾಂ ಭಟ್ ಹೆಸರು ಶಿಫಾರಸು
ಬೆಂಗಳೂರು, ಮೇ 18 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ಯಾಂ ಭಟ್ ಅವರ ಹೆಸರನ್ನು ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಗೆ ಶಿಫಾರಸು ಮಾಡಲಾಗುತ್ತದೆ. ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಶಿಫಾರಸು ಮಾಡಿದ್ದ ವಿ.ಆರ್.ಸುದರ್ಶನ್ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಅಧ್ಯಕ್ಷ ಹುದ್ದೆಗೆ ಸರ್ಕಾರ ಶ್ಯಾಂ ಭಟ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಶೀಘ್ರದಲ್ಲಿಯೇ ಈ ಕುರಿತ ಶಿಫಾರಸು ಪತ್ರವನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ. [KPSC ಅಧ್ಯಕ್ಷರ ನೇಮಕ ಸರ್ಕಾರಕ್ಕೆ ಮುಖಭಂಗ]

1992ನೇ ಬ್ಯಾಚ್ ಐಎಎಸ್ ಅಧಿಕಾರಿ ಶ್ಯಾಂ ಭಟ್ ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವಾರ ಅವರಿಗೆ ಸರ್ಕಾರ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿದ್ದು, ಬೇರೆ ಇಲಾಖೆಗೆ ವರ್ಗಾವಣೆಯಾಗಬೇಕಿತ್ತು. [ಸರ್ಕಾರ, ರಾಜಭವನದ ನಡುವೆ ಕೆಪಿಎಸ್ ಸಿ ಗುದ್ದಾಟ]
ಉಡುಪಿ, ಬೀದರ್ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಶ್ಯಾಂ ಭಟ್ ಅವರು, ಕೆಲವು ಕಾಲ ಮುಜರಾಯಿ ಇಲಾಖೆ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಅವರು ಬಿಡಿಎ ಆಯುಕ್ತರಾಗಿದ್ದಾರೆ.
ಹೆಸರು ತಿರಸ್ಕಾರವಾಗಿತ್ತು : 2015ರ ಮೇ ತಿಂಗಳಿನಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ವಿ.ಆರ್.ಸುದರ್ಶನ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ, ರಾಜ್ಯಪಾಲರು ಹೆಸರನ್ನು ತಿರಸ್ಕರಿಸಿದ್ದರು.












Click it and Unblock the Notifications