KSRTC: ಮಹಿಳೆಯರ ಉಚಿತ ಬಸ್ ಸಂಚಾರ ಸಂಖ್ಯೆ 500 ಕೋಟಿ ತಲುಪಲಿದೆ! ಟಿಕೆಟ್ ಮೌಲ್ಯ ₹12,500 ಕೋಟಿ..KSRTC
ಬೆಂಗಳೂರು, ಜುಲೈ 08: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಶಕ್ತಿ ಯೋಜನೆ'ಯು (Shakti Scheme) ಜಾರಿಯಾಗಿ ಭರ್ತಿ ಎರಡು ವರ್ಷ ಕಳೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲು ಜಾರಿಗೊಳಿಸಿದ ಗ್ಯಾರಂಟಿ ಯೋಜನೆ ಇದಾಗಿದೆ. ಅಂದಿನಿಂದ 500 ಕೋಟಿ ಮಹಿಳೆಯರು ರಾಜ್ಯದ ಎಲ್ಲ ನಾಲ್ಕು ನಿಗಮಗಳ ಸಾರಿಗೆ ಬಸ್‌ಗಳಲ್ಲಿ ಸಂಚರಿಸಿದ್ದಾರೆ ಎಂದು ಕರ್ನಾಟಕ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
2023 ಜೂನ್ 11 ರಂದು ಮುಖ್ಯಮಂತ್ರಿಗಳು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದರು. ಅಂದಿನಿಂದ ಪ್ರತಿ ತಿಂಗಳು ಸರಿಸುಮಾರು 20ರಿಂದ 22 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಲೇ ಬಂದಿದ್ದಾರೆ. ಈವರೆಗೆ 493 ಕೋಟಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಿದ್ದಾರೆ. ಇದೇ ತಿಂಗಳ ಜುಲೈ 14 ಅಥವಾ 15ನೇ ದಿನಕ್ಕೆ ಒಟ್ಟು 500 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಯೋಜನೆಯಡಿ ಸಂಚರಿಸಿದಂತಾಗುತ್ತದೆ. ಸರ್ಕಾರಿ ಯೋಜನೆಯ ಸದ್ಬಳಕೆ, ಜನರಿಗೆ ಯೋಜನೆ ಲಾಭ ತಲುಪುವ ನಿಟ್ಟಿನಲ್ಲಿ ಇದೊಂದು ಹೊಸ ದಾಖಲೆ, ಮೈಲಿಗಲ್ಲು ಸಾಧನೆ ಎಂದು ಇಲಾಖೆ ಬಣ್ಣಿಸಿದೆ.

2023 ರಿಂದ 2025 ಜುಲೈ 6ರವರೆಗೆ ಒಟ್ಟು ಸಂಚಾರ, ಪಟ್ಟಿ
* ಒಟ್ಟು ಪ್ರಯಾಣಿಕರು 831,60,40,033 (ಪುರುಷ & ಮಹಿಳೆ ಸೇರಿ)
* ಒಟ್ಟು ಮಹಿಳಾ ಪ್ರಯಾಣಿಕರು: 493,90,56,258
* ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ: 12511,28,45,094
ಮಹಿಳಾ ಸಬಲೀಕರಣದೆಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ದಿಟ್ಟ ಹೆಜ್ಜೆ ಇಟ್ಟಿದೆ. ಅದರ ನಿಟ್ಟಿನಲ್ಲಿ ಶಕ್ತಿ ಗ್ಯಾರೆಂಟಿ ಯೋಜನೆಯಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ ಶೀಘ್ರವೇ 500 ಕೋಟಿ ತಲುಪಲಿದೆ. ಶಕ್ತಿ ಯೋಜನೆ ಸೌಲಭ್ಯ ದೊರೆತ ಮೊದಲು ತಿಂಗಳು 2023 ಜೂನ್ ತಿಂಗಳಲ್ಲಿ ಎಲ್ಲ ಸಾರಿಗೆ ನಿಮಗದ ಬಸ್‌ಗಳಲ್ಲಿ 10,54,45,047 ಮಹಿಳೆಯರು ಸಂಚರಿಸಿದ್ದರು. ನಂತರದ ಜುಲೈ 2023ರಲ್ಲಿ 19 ಕೋಟಿಗೂ ಅಧಿಕ ಮಹಿಳೆಯರು ಸಂಚಾರ ಮಾಡಿದ್ದರು ಎಂದು ಸಾರಿಗೆ ಇಲಾಖೆ ಅಂಕಿ ಸಂಖ್ಯೆ ನೀಡಿದೆ.

2025 ಈ 6 ತಿಂಗಳಲ್ಲಿ ಎಷ್ಟು ಮಹಿಳಾ ಉಚಿತ ಪ್ರಯಾಣ ವಿವರ
* ಜನವರಿ : 21,11,05,086 ಮಹಿಳೆಯರ ಸಂಚಾರ
* ಫೆಬ್ರವರಿ : 19,65,21,093
* ಮಾರ್ಚ್: 21,28,71,409
* ಏಪ್ರಿಲ್: 21,45,69,354
* ಮೇ: 22,17,65,141
* ಜೂನ್: 21,90,69,639
* ಜುಲೈ: 56,05,132 (ಜುಲೈ 6ರವರೆಗಿನ ಮಾಹಿತಿ)
ರಾಜ್ಯ ಸರ್ಕಾರದ ಶಕ್ತಿ ಯೋಜನಡಿಯಡಿ ಕರ್ನಾಟಕದ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ' (KSRTC), 'ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ' (BMTC), 'ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ' (NWKRTC) ಮತ್ತು 'ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ' (KKRTC) ಸಾರಿಗೆ ನಿಮಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ.












Click it and Unblock the Notifications