'ಲೋಕಾಯುಕ್ತ ಸಂಸ್ಥೆ ಮುಚ್ಚಲು ಸರ್ಕಾರದ ಷಡ್ಯಂತ್ರ'
ಬೆಂಗಳೂರು, ಮಾರ್ಚ್ 23 : 'ಕಾಂಗ್ರೆಸ್ ಸರಕಾರ ಎಸಿಬಿ ರಚಿಸಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಪ್ರಯತ್ನಿಸುತ್ತಿದೆ' ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, 'ಈಗಿನ ಕಾಂಗ್ರೆಸ್ ಸರಕಾರಕ್ಕೆ ಲೋಕಾಯುಕ್ತ ಬೇಡವಾಗಿದ್ದು, ಹೀಗಾಗಿ ಅದನ್ನು ಮುಚ್ಚಲು ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿಯೇ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau- ACB) ಸ್ಥಾಪನೆ ಮಾಡಲಾಗಿದೆ' ಎಂದು ಹೇಳಿದರು. [ಎಸಿಬಿ ಬಗ್ಗೆ ಗೊಂದಲ : ಸಿದ್ದರಾಮಯ್ಯ ನೀಡಿದ ಸ್ಪಷ್ಟನೆಗಳು]

'ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನೀಡಿದ ವರದಿಯಂತೆ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದವರು ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ಕೈಗೊಂಡಿದ್ದರು. ಲೋಕಾಯುಕ್ತದಲ್ಲಿ ಅವರಿಗೆ ನಂಬಿಕೆಯಿಲ್ಲದಿದ್ದರೆ ಆ ಸಮಯದಲ್ಲಿ ಏಕೆ ಪಾದಯಾತ್ರೆ ನಡೆಸಬೇಕಿತ್ತು?' ಎಂದು ಹೆಗ್ಡೆ ಪ್ರಶ್ನಿಸಿದ್ದಾರೆ. [ಸಂದರ್ಶನ : ಎಸಿಬಿಯಿಂದ ಲೋಕಾಯುಕ್ತದ ಅಧಿಕಾರ ಮೊಟಕುಗೊಳ್ಳುವುದಿಲ್ಲ]
'ಸದನದಲ್ಲಿ ಚರ್ಚೆ ಮಾಡದೇ, ಮಾಧ್ಯಮಗಳ ಗಮನಕ್ಕೂ ತಾರದೇ ಎಸಿಬಿ ರಚನೆ ಮಾಡಲಾಗಿದೆ. ಅಧಿಕಾರಿಗಳು ಅಧಿಕಾರಿಗಳ ವಿರುದ್ಧವೇ ಕೆಲಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಸಂತೋಷ್ ಹೆಗ್ಡೆ ಅವರು, 'ಎಸಿಬಿ ರಚನೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ' ಎಂದರು. [ಎಸಿಬಿ ರಚನೆ : ಕೃಷ್ಣ ಕೊಟ್ಟ ಸಲಹೆ ಕೇಳ್ತಾರಾ ಸಿದ್ದು?]
'ನಮ್ಮ ಲೋಕಾಯುಕ್ತ ಸಂಸ್ಥೆ ಇಡೀ ದೇಶದಲ್ಲಿಯೇ ಅತ್ಯಂತ ಬಲಿಷ್ಠ ಸಂಸ್ಥೆಯಾಗಿದೆ. ಪೊಲೀಸರು, ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಮಾತ್ರ ಕ್ರಮ ಕೈಗೊಂಡಿರಲಿಲ್ಲ. 750ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು, ಉನ್ನತ ರಾಜಕಾರಣಿಗಳನ್ನು ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಿದ್ದೇವೆ' ಎಂದು ತಿಳಿಸಿದರು.[ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿದ ಸರ್ಕಾರ]












Click it and Unblock the Notifications