ಕೆಪಿಎಸ್‌ಸಿ: ಸಿದ್ದರಾಮಯ್ಯ ಸರಕಾರಕ್ಕೆ ಭಾರೀ ಮುಖಭಂಗ
ಬೆಂಗಳೂರು, ಆ 30: ಭಾರೀ ವಿವಾದಕ್ಕೀಡಾಗಿದ್ದ ಕೆಪಿಎಸ್‌ಸಿ 2011ರ ಸಾಲಿನ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಸರಕಾರಕ್ಕೆ ಸೂಚಿಸಿದೆ. ಈ ಮೂಲಕ ಸಿದ್ದರಾಮಯ್ಯ ಸರಕಾರ ತೀವ್ರ ಹಿನ್ನಡೆ ಅನುಭವಿಸಿದೆ.
ಪ್ರಕರಣ ಇತ್ಯರ್ಥವಾಗುವವರೆಗೆ ಕೆಪಿಎಸ್‌ಸಿ 2011ರ ಸಾಲಿನ ಗಜೆಟೆಡ್ ಪ್ರೊಬೆಷನರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಹಿಂದಕ್ಕೆ ಪಡೆಯಬಾರದು. ಮತ್ತು ಈ ಸಾಲಿನಲ್ಲಿ ಆಯ್ಕೆಯಾದ 362 ಅಭ್ಯರ್ಥಿಗಳ ಹಿತಕ್ಕೆ ಧಕ್ಕೆ ತರುವಂತಹ ಆದೇಶವನ್ನು ಸರಕಾರ ಹೊರಡಿಸಬಾರದೆಂದು ಕೆಎಟಿ ಸಿದ್ದು ಸರಕಾರಕ್ಕೆ ಸೂಚಿಸಿದೆ.
ಈ ಸಾಲಿನಲ್ಲಿ ಆಯ್ಕೆಯಾದ 362 ಜನರಲ್ಲಿ ದೇವರಾಜ್ ಮತ್ತು ಇತರ 159 ಜನರು ಸರಕಾರದ ರದ್ದತಿ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಅಭ್ಯರ್ಥಿಗಳ ಪರವಾಗಿ ಹಿರಿಯ ವಕೀಲ ಬಿ ವಿ ಆಚಾರ್ಯ ಹಾಜರಾಗಿ, ಸರಕಾರ ಅಭ್ಯರ್ಥಿಗಳ ಪಟ್ಟಿಯನ್ನು ಹಿಂದಕ್ಕೆ ಪಡಿದಿರುವುದಕ್ಕೆ ಸೂಕ್ತ ಕಾರಣ ನೀಡಿಲ್ಲ ಎಂದು ವಾದಿಸಿದರು.
ಸರಕಾರದ ನಿರ್ಧಾರದಿಂದ ಪ್ರಾಮಾಣಿಕ ಮತ್ತು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಸರಕಾರ, ಸಂವಿಧಾನದ ಮತ್ತು ಗಜೆಟೆಡ್ ಪ್ರೊಬೇಷನರ್ಸ್ ಅಧಿನಿಯಮದ ಉಲ್ಲಂಘನೆ ಮಾಡಿದೆ ಎಂದು ಅರ್ಜಿದಾರರ ವಕೀಲರು ವಾದಿಸಿದರು.
ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾ.ಮೂಸ ನಾಯರ್ ಮೂಲೆ ಅವರ ನ್ಯಾಯಪೀಠ, ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸಬಾರದು. ಮತ್ತು 2011ರ ಆಯ್ಕೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಹತ್ವದ ಆದೇಶ ನೀಡಿದೆ. ಅಂತೆಯೇ, ಸರಕಾರಕ್ಕೆ ಒಂದು ವೇಳೆ ಆಕ್ಷೇಪಣೆ ಇದ್ದಲ್ಲಿ ಸೆಪ್ಟಂಬರ್ 19ರೊಳಗೆ ಸಲ್ಲಿಸುವಂತೆ ಸೂಚಿಸಿದೆ.

ಅಭ್ಯರ್ಥಿಗಳ ಕಾನೂನು ಹೋರಾಟ
2011ರ ಕೆಪಿಎಸ್‌ಸಿ ನೇಮಕಾತಿ ರದ್ದುಗೊಳಿಸಿರುವ ಸರ್ಕಾರದ ತೀರ್ಮಾನದ ವಿರುದ್ಧ ನೊಂದ ಅಭ್ಯರ್ಥಿಗಳು ಕಾನೂನು ಹೋರಾಟ ಆರಂಭಿಸಿದ್ದರು. ಆಗಸ್ಟ್ 21ರಂದು ಅಭ್ಯರ್ಥಿಗಳು ಈ ಕುರಿತು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು.

ಅಭ್ಯರ್ಥಿಗಳ ಬೃಹತ್ ಪ್ರತಿಭಟನೆ
ಕೆಪಿಎಸ್‌ಸಿ ನೇಮಕಾತಿ ರದ್ದುಗೊಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ನೊಂದ ಅಭ್ಯರ್ಥಿಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ನೊಂದ ಅಭ್ಯರ್ಥಿಗಳ ಪರ ನಿಂತಿದ್ದರು.

ಕುಮಾರಸ್ವಾಮಿ ಧರಣಿ
ಕೆಪಿಎಸ್‌ಸಿ ನೇಮಕಾತಿ ರದ್ದುಗೊಳಿಸಿರುವ ಸರ್ಕಾರದ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. 2011ರ ನೇಮಕಾತಿ ಆದೇಶವನ್ನು ರದ್ದುಗೊಳಿಸಿರುವುದು ಷಡ್ಯಂತ್ರವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ನಿರ್ಧಾರ ಹಿಂಪಡೆಯದಿದ್ದರೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದರು.

ಕೆಪಿಎಸ್‌ಸಿ ಹಗರಣ ಮಂಗಳಾ ಶ್ರೀಧರ್ ಪಾತ್ರವೇನು?
ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಗಳಾ ಶ್ರೀಧರ್ ಅವರನ್ನು 2012 ಡಿಸೆಂಬರ್ 24ರಂದು ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೆಪಿಎಸ್‌ಸಿ ಸದಸ್ಯೆಯಾಗಿ ನೇಮಕ ಮಾಡಿದ್ದರು. ನೇಮಕಾತಿ ಅಕ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಇವರನ್ನು ಅಮಾನತುಗೊಳಿಸಿತ್ತು. ಮಂಗಳಾ ಶ್ರೀಧರ್ ಅಸಿಸ್ಟೆಂಟ್ ಕಮೀಷನರ್ ಆಗಲು 75 ಲಕ್ಷ ಲಂಚ ಕೇಳಿದ್ದರು ಎನ್ನುವುದು ಆರೋಪ.

ಕೆಪಿಎಸ್‌ಸಿ ಎಲ್ಲಾ ಸದಸ್ಯರ ವಿರುದ್ದ ತನಿಖೆ
ಕೆಪಿಎಸ್‌ಸಿ ನೇಮಕಾತಿ ರದ್ದುಗೊಳಿಸಿರುವುದು ಸರ್ಕಾರ ತೆಗೆದುಕೊಂಡ ದ್ವೇಷದ ನಿರ್ಧಾರವಲ್ಲ. 2011ರ ನೇಮಕಾತಿ ಸಂದರ್ಭದಲ್ಲಿ ಕೆಪಿಎಸ್‌ಸಿ ಸದಸ್ಯರಾಗಿದ್ದ ಎಲ್ಲರ ವಿರುದ್ಧವೂ ತನಿಖೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ ಬಿ ಜಯಚಂದ್ರ ಹೇಳಿದ್ದರು.












Click it and Unblock the Notifications