ಕೆಎಎಸ್ ಅಧಿಕಾರಿ ಕೆ. ಮಥಾಯಿ ಸೇವೆಯಿಂದ ನಿವೃತ್ತಿ
ಬೆಂಗಳೂರು, ಮೇ 31 : ಹಿರಿಯ ಕೆಎಎಎಸ್ ಅಧಿಕಾರಿ ಕೆ. ಮಥಾಯಿ ಸೇವೆಯಿಂದ ನಿವೃತ್ತರಾಗಿದ್ದಾರೆ. ತಮ್ಮ ಹಲವಾರು ದಿಟ್ಟ ಕ್ರಮಗಳಿಂದ ಸರ್ಕಾರವನ್ನು ಹಲವು ಬಾರಿ ಎದುರುಹಾಕಿಕೊಂಡು ಅವರು ಸುದ್ದಿಯಾಗಿದ್ದರು.
14 ವರ್ಷಗಳ ಕಾಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದ ಕೆ. ಮಥಾಯಿ ಶನಿವಾರ ಸೇವೆಯಿಂದ ನಿವೃತ್ತರಾದರು. 2006ರಲ್ಲಿ ಅವರು ಶೃಂಗೇರಿಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ಆರಂಭಿಸಿದ್ದರು.
ಬಿಬಿಎಂಪಿ ಜಾಹೀರಾತು ಹಗರಣವನ್ನು ಬೆಳಕಿಗೆ ತಂದಿದ್ದ ಕೆ. ಮಥಾಯಿ ಭ್ರಷ್ಟಾಚಾರಕ್ಕೆ ತಡೆ ಹಾಕಿದ ಕಾರಣಕ್ಕಾಗಿಯೇ ಹಲವು ಬಾರಿ ವರ್ಗಾವಣೆಯಾಗಿದ್ದರು. ಕರ್ನಾಟಕದಲ್ಲಿ ಸಕಾಲ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರ ಪಾತ್ರವೂ ಮಹತ್ವದ್ದಾಗಿದೆ.

ವಾಯುಪಡೆಯಲ್ಲಿ 19 ವರ್ಷ ಕೆಲಸ ಮಾಡಿದ್ದ ಕೆ. ಮಥಾಯಿ ಅವರು 8 ವರ್ಷ ಮಂಗಳೂರಿನಲ್ಲಿ ವಕೀಲರಾಗಿ ಕೆಲಸ ಮಾಡಿದ್ದರು. ಜೋಯಿಡಾ, ಭಟ್ಕಳ, ಹಿರೇಕೆರೂರು, ಮಡಿಕೇರಿ, ಹಾಸನದಲ್ಲಿಯೂ ಅವರು ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದರು.
ಕರ್ನಾಟಕ ಸರ್ಕಾರ ಕಚೇರಿ ಕೆಲಸಕ್ಕೆ ವಾಹನ ನೀಡಲು ನಿರಾಕರಿಸಿದ ಕಾರಣಕ್ಕೆ ಮನೆಯಿಂದ ಎಂ. ಎಸ್. ಬಿಲ್ಡಿಂಗ್‌ನಲ್ಲಿರುವ ಕಚೇರಿಗೆ ಸೈಕಲ್‌ನಲ್ಲಿ ಆಗಮಿಸಿದ್ದರು. ಆಗ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ 2 ಸಾವಿರ ಕೋಟಿ ರೂ. ಹಗರಣವನ್ನು ಅವರು ಬಯಲಿಗೆಳೆದಿದ್ದರು. ಆಗ ಕೆಲವು ಬಿಬಿಎಂಪಿ ಸದಸ್ಯರು, ಜಾಹೀರಾತು ಏಜೆನ್ಸಿಯಾವರು ಕೆ. ಮಥಾಯಿ ಕಚೇರಿಗೆ ನುಗ್ಗಿ ಧಮಕಿ ಹಾಕಿದ್ದರು.












Click it and Unblock the Notifications