ಕೆಲವು ಕ್ಷೇತ್ರಕ್ಕೆ ಜೆಡಿಎಸ್ ಪಟ್ಟು, ಕಾಂಗ್ರೆಸ್‌ಗೆ ಸಂಕಟ!
Recommended Video

ಬೆಂಗಳೂರು, ಮಾರ್ಚ್ 03 : ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಮಾತುಕತೆ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಕೆಲವು ಕ್ಷೇತ್ರಗಳ ಹಂಚಿಕೆಯಲ್ಲಿ ಇನ್ನೂ ಉಭಯ ಪಕ್ಷಗಳ ನಡುವೆ ಹೊಂದಾಣಿಕೆ ಮೂಡಿಲ್ಲ.
ಹಾಲಿ ಕಾಂಗ್ರೆಸ್ ಸಂಸದರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಬಿಟ್ಟುಕೊಡಲು ನಾಯಕರು ಸಿದ್ಧರಿಲ್ಲ. ಅವುಗಳನ್ನು ಬಿಟ್ಟು ಬೇರೆ ಕ್ಷೇತ್ರಗಳನ್ನು ಹಂಚಿಕೊಳ್ಳೋಣ ಎಂಬ ಪಕ್ಷದ ನಾಯಕರ ಅಭಿಪ್ರಾಯಕ್ಕೆ ಎರಡೂ ಪಕ್ಷಗಳಲ್ಲಿ ಒಪ್ಪಿಗೆ ಸಿಕ್ಕಿಲ್ಲ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸೀಟು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳ ಹಂಚಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ.
ಮಂಡ್ಯ ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಿದೆ. ಆದರೆ, ಮೈಸೂರು-ಕೊಡಗು ಬಿಟ್ಟುಕೊಡಲು ಸಿದ್ದರಾಮಯ್ಯ ಒಪ್ಪಿಗೆ ನೀಡುತ್ತಿಲ್ಲ. ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.

ಯಾವ-ಯಾವ ಕ್ಷೇತ್ರಗಳು
ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಬೆಂಗಳೂರು ಉತ್ತರ, ಮೈಸೂರು-ಕೊಡಗು, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಇದರಿಂದಾಗಿ ಸೀಟು ಹಂಚಿಕೆ ಪ್ರಕ್ರಿಯೆ ಕಗ್ಗಂಟಾಗಿದೆ.

ಕಾಂಗ್ರೆಸ್ ಯಾವ ಕ್ಷೇತ್ರ ಕೊಡಲಿದೆ
ಜೆಡಿಎಸ್ ಪ್ರತಿನಿಧಿಸುತ್ತಿರುವ ಮಂಡ್ಯ, ಹಾಸನ ಬಿಟ್ಟು ಕೊಡುತ್ತೇವೆ. ಶಿವಮೊಗ್ಗ ಮತ್ತು ವಿಜಯಪುರ ಕ್ಷೇತ್ರ ಬಿಟ್ಟು ಕೊಡಲು ಸಿದ್ಧ ಎಂದು ಕಾಂಗ್ರೆಸ್ ಹೇಳಿದೆ. ಆದರೆ, ಮೈಸೂರು-ಕೊಡಗು, ಚಿಕ್ಕಬಳ್ಳಾಪುರ, ತುಮಕೂರು ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪುತ್ತಿಲ್ಲ.

ಎಚ್.ವಿಶ್ವನಾಥ್ ಹೇಳುವುದೇನು?
'ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ಪಕ್ಷದ ಕಾರ್ಯಕರ್ತರ ತೀವ್ರ ಒತ್ತಡವಾಗಿದೆ. ಮಂಡ್ಯ ಅಥವ ಬೇರೆ ಯಾವುದಾದದರೂ ಕ್ಷೇತ್ರದಿಂದ ಅವರು ಕಣಕ್ಕಿಳಿಯುವುದು ಖಚಿತ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

ದಿನೇಶ್ ಗುಂಡೂರಾವ್
'ಮೈಸೂರು ಕ್ಷೇತ್ರ ಜೆಡಿಎಸ್‌ಗೆ ಎನ್ನುವುದು ಇನ್ನೂ ನಿಗದಿಯಾಗಿಲ್ಲ. ಸ್ಥಳೀಯ ಮುಖಂಡರು ಏನು ಬೇಕಾದರೂ ಹೇಳಿಕೊಳ್ಳಬಹುದು. ವರಿಷ್ಠರು ತೀರ್ಮಾನಿಸಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.












Click it and Unblock the Notifications