ವಿದ್ಯಾರ್ಥಿಗಳೇ ಗಮನಿಸಿ.. ಹೀಗೆ ಮಾಡಿದ್ರೆ ನಿಮ್ಮ ಕೈಸೇರುತ್ತೆ 40,000 ರೂ.
ಬೆಂಗಳೂರು, ಆಗಸ್ಟ್ 24: ಸರ್ಕಾರಿ ಶಾಲಾ ಮಕ್ಕಳಿಗಾಗಿ ಜವಾಹರಲಾಲ್ ನೆಹರು ತಾರಾಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಶಾಲಾ ಶಿಕ್ಷಣ ಇಲಾಖೆಗಳು ನಗದು ಬಹುಮಾನ ಗೆಲ್ಲುವ ಸುವರ್ಣಾವಕಾಶವನ್ನು ಕಲ್ಪಿಸಿವೆ. ನಿಮ್ಮ ಪ್ರತಿಭೆ ಪ್ರದರ್ಶಿಸಿದ್ದೇ ಆದಲ್ಲಿ 40,000 ರೂಪಾಯಿವರೆಗಿನ ಆಕರ್ಷಕ ನಗದು ಬಹುಮಾನ ನಿಮ್ಮ ಕೈಸೇರಲಿದೆ.
ಇದು ಹೇಗಪ್ಪಾ ಅಂದ್ರೆ.. ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಆಸಕ್ತಿ ಮೂಡಿಸಲು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.

ಈ ಸ್ಪರ್ಧೆ ಹೇಗೆ ನಡೆಯಲಿದೆ?: ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಬ್ಲಾಕ್ ಹಂತ, ಜಿಲ್ಲಾ ಮಟ್ಟ, ವಿಭಾಗೀಯ ಮಟ್ಟ, ರಾಜ್ಯ ಮಟ್ಟ ಮತ್ತು ಫೈನಲ್ ಹಂತ ಎಂಬ 5 ಹಂತಗಳು ಇರಲಿವೆ. ಪ್ರಥಮ ಬಹುಮಾನ ಪಡೆದ ತಂಡಕ್ಕೆ 40,000 ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ವಿತರಿಸಲಾಗುತ್ತದೆ. ಇನ್ನು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 30,000 ಸಾವಿರ ನಗದು ರೂಪಾಯಿ ಮತ್ತು ತೃತೀಯ ಸ್ಥಾನ ಪಡೆದ ತಂಡಕ್ಕೆ 10,000 ಸಾವಿರ ರೂಪಾಯಿ ಬಹುಮಾನ ಸಿಗಲಿದೆ.
ರಾಜ್ಯದ ಎಲ್ಲ ಸರ್ಕಾರಿ ಪ್ರೌಢ ಶಾಲೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿ ಪ್ರೌಢಶಾಲೆ ಇಬ್ಬರು ವಿದ್ಯಾರ್ಥಿಗಳು ಒಂದು ತಂಡ ಮಾಡಿಕೊಂಡು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ತಂಡದಲ್ಲಿ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿ ಇರಬೇಕು. ಒಂದು ವೇಳೆ ಬಾಲಕಿಯರ ಪ್ರೌಢಶಾಲೆಯವರಾದರೆ, ತಂಡದಲ್ಲಿ ಇಬ್ಬರೂ ಬಾಲಕಿಯರು ಮತ್ತು ಬಾಲಕರ ಶಾಲೆಯಿಂದ ಇಬ್ಬರೂ ಬಾಲಕರೇ ತಂಡ ಮಾಡಿಕೊಂಡು ಭಾಗವಹಿಸಲು ಅವಕಾಶವಿರುತ್ತದೆ. 8, 9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಪರ್ಧೆ ಪ್ರಕ್ರಿಯೆ ಹೇಗಿರುತ್ತೆ?: ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾದ ಸ್ಪರ್ಧಿಗಳು ತಾವು ಓದುತ್ತಿರುವ ಶಾಲೆ ಹಾಗೂ ತರಗತಿಯ ಬಗ್ಗೆ ದಾಖಲೆಗಳನ್ನು ನೀಡಬೇಕು. ಯಾವುದೇ ಸ್ಪರ್ಧಿಯ ವರ್ತನೆ ಅಥವಾ ಭಾಗವಹಿಸುವಿಕೆಯು ನಿಯಮ ಬಾಹಿರ ಎಂದು ಕಂಡುಬಂದಲ್ಲಿ ಸ್ಪರ್ಧಿಯನ್ನು ಅನರ್ಹಗೊಳಿಸಲಾಗುವುದು. ಅರ್ಹತೆ, ಸ್ಪರ್ಧಿಯ ದೃಢೀಕರಣ ಮತ್ತು ಇತರ ನಿರ್ಧಾರಗಳ ಹಕ್ಕನ್ನು ಜವಾಹರಲಾಲ್ ನೆಹರು ತಾರಾಲಯ, ಬೆಂಗಳೂರು ಇವರು ಹೊಂದಿರುತ್ತಾರೆ. ಸೂಕ್ತ ಸಂದರ್ಭಗಳಲ್ಲಿ ಎಲ್ಲಾ ಹಂತಗಳಲ್ಲೂ ಪರೀಕ್ಷೆಯಲ್ಲಿ ಬದಲಾವಣೆ ಮಾಡುವ ಹಕ್ಕು ಜವಾಹರಲಾಲ್ ನೆಹರು ತಾರಾಲಯ ಹೊಂದಿರುತ್ತದೆ. ಯಾವುದೇ ಸಂದರ್ಭದಲ್ಲಿ ಸ್ಪರ್ಧೆಯ ಆಯೋಜಕರಾದ ಜವಾಹರಲಾಲ್ ನೆಹರು ತಾರಾಲಯ ನೀಡುವ ತೀರ್ಪು ಅಂತಿಮವಾಗಿರುತ್ತದೆ.
ದಿನಾಂಕ ಇದೇ ಆಗಸ್ಟ್ 28ರಂದು ಈ ಸ್ಪರ್ಧೆಗಳು ನಡೆಯಲಿದ್ದು, ಎಲ್ಲ ಮಕ್ಕಳಿಗೆ ಪ್ರವೇಶ ಉಚಿತ. ಹೆಚ್ಚಿನ ವಿವರಗಳಿಗೆ ನೆಹರು ತಾರಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.












Click it and Unblock the Notifications