ರಾಜ್ಯಾದ್ಯಂತ ಶಾಲೆಗಳ ಸಮಯ ಬದಲಾವಣೆ: ಶಿಕ್ಷಣ ಇಲಾಖೆ ಮಹತ್ವದ ಆದೇಶ
ಬೆಂಗಳೂರು, ಅಕ್ಟೋಬರ್ 07: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಗಿಯದ ಹಿನ್ನೆಲೆ ಕರ್ನಾಟಕ ಸರ್ಕಾರ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಅಕ್ಟೋಬರ್ 12ರವರೆಗೆ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ಟೋಬರ್ 24ರ ವರೆಗೆ ಸಮೀಕ್ಷೆ ವಿಸ್ತರಣೆ ಆಗಲಿದೆ ಎಂದು ಆದೇಶದಲ್ಲಿ ತಿಳಿಸಿಲಾಗಿದೆ. ಇನ್ನೂ ಶಿಕ್ಷಕರು ಜಾತಿಗಣತಿ ಸಮೀಕ್ಷೆಯ ಗಣತೀದಾರರಾಗಿರುವ ಹಿನ್ನೆಲೆ ರಾಜ್ಯದಾದ್ಯಂತ ಶಾಲಾ ಸಮಯದಲ್ಲೂ ಬದಲಾವಣೆ ಆಗಲಿದೆ.
ಕರ್ನಾಟಕದಾದ್ಯಂತ ಜಾತಿ ಗಣತಿ ಕಾರ್ಯವನ್ನು ವಿಸ್ತರಣೆ ಮಾಡಲಾಗಿದೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಶಿಕ್ಷಕರು ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ಶಾಲೆಗಳ ಸಮಯವನ್ನು ಬದಲಾಯಿಸಲಾಗಿದೆ. ಅಕ್ಟೋಬರ್ 8 ರಿಂದ 12 ರವರೆಗೆ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ತರಗತಿಗಳು ನಡೆಯಲಿವೆ. ಬೆಂಗಳೂರಿನಲ್ಲಿ ಅಕ್ಟೋಬರ್ 24 ರವರೆಗೆ ಇದೇ ಸಮಯ ಅನ್ವಯಿಸುತ್ತದೆ ಎಂದು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಸೆಪ್ಟೆಂಬರ್ 22ರಂದು ಜಾತಿ ಗಣತಿ ಸಮೀಕ್ಷೆ ಆರಂಭವಾಗಿದ್ದು, ಜಾತಿ ಗಣತಿ ಆರಂಭವಾಗಿ 14 ದಿನ ಕಳೆದಿದೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯ ಸರ್ಕಾರ ಅಕ್ಟೋಬರ್ 7ರ ತನಕ ಡೆಡ್ಲೈನ್ ಕೊಟ್ಟಿತ್ತು. ರಾಜ್ಯ ಸರ್ಕಾರಕ್ಕೆ ಕೊಟ್ಟ ಈ ಗಡುವು ಇಂದಿಗೆ ಮುಗಿದೆ. ಆದರೆ, ಜಾತಿ ಗಣತಿ ಮುಗಿದಿಲ್ಲ. ಸಮೀಕ್ಷೆ ಇನ್ನು ಬಾಕಿ ಉಳಿದ ಹಿನ್ನೆಲೆ ಬೆಂಗಳೂರು ಹೊರತುಪಡಿಸಿ ವಿವಿಧ ರಾಜ್ಯದಲ್ಲಿ ಅಕ್ಟೋಬರ್ 12ರವರೆಗೆ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಅಕ್ಟೋಬರ್ 8 ರಿಂದ ಶಾಲಾ ತೆರೆಯುವ ಸಮಯದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ.
ಜಾತಿ ಗಣತಿ ದಿನಾಂಕ ವಿಸ್ತರಣೆಯಾಗಿರುವುದರಿಂದ ಕರ್ನಾಟಕದಾದ್ಯಂತ ಶಾಲೆಗಳ ಸಮಯವನ್ನು ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಅರ್ಧ ದಿನ ಮಾತ್ರ ಮಕ್ಕಳಿಗೆ ಶಾಲೆ ನಡೆಯಲಿದ್ದು, ಆ ಬಳಿಕ ಶಿಕ್ಷಕರು ಗಣತಿ ಕಾರ್ಯಕ್ಕೆ ತೆರಳಲಿದ್ದಾರೆ. ಇನ್ನು ಶಾಲಾ ಸಮಯ ಬದಲಾವಣೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗಲಿದೆ. ರಾಜ್ಯದಲ್ಲಿ (ಗ್ರೇಟರ್ ಬೆಂಗಳೂರು ವ್ಯಾಪ್ತಿ ಹೊರತುಪಡಿಸಿ ಉಳಿದ ಭಾಗಗಳು) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ಟೋಬರ್ 8 ರಿಂದ 12 ರವರೆಗೆ ತರಗತಿಗಳನ್ನು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ನಂತರದ ಅವಧಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಸಮೀಕ್ಷಾ ಕಾರ್ಯವನ್ನು ನಿರ್ವಹಿಸಲು ಸೂಚನೆ ನೀಡಲಾಗಿದೆ.
ಇನ್ನೂ ಕರ್ನಾಟಕದ ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ಅಕ್ಟೋಬರ್ 12 ರ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಗ್ರೇಟರ್ ಬೆಂಗಳೂರಿನಲ್ಲಿ ಅಕ್ಟೋಬರ್ 24 ರೊಳಗೆ ಪೂರ್ಣಗೊಳಿಸಬೇಕು ಎಂದು ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಗಡುವು ನೀಡಿದೆ. ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಧ್ಯ ವಾರ್ಷಿಕ ರಜಾ ದಿನಗಳ ನಂತರ ಶಾಲಾ ತರಗತಿಗಳು ಸಮೀಕ್ಷೆಯ ಕಾರಣದಿಂದ ಕುಂಠಿತವಾಗಬಾರದು ಎನ್ನುವ ದೃಷ್ಟಿಯಿಂದ ಸಮಯ ಬದಲಾವಣೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಸುರಲ್ಕರ್ ವಿಕಾಶ್ ಕಿಶೋರ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications