Siddaramaiah: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಒಳ್ಳೆಯದು; ನ್ಯಾ. ಸಂತೋಷ್ ಹೆಗ್ಡೆ
ಮುಡಾ ಸೈಟು ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯ ತನಿಖೆಗೆ ಆದೇಶ ನೀಡಿದೆ. ನ್ಯಾಯಾಲಯದ ಆದೇಶದ ಬೆನ್ನಲ್ಲೇ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವ ಕೂಗು ಜೋರಾಗಿದೆ. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಒಳಿತು ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದ್ದ ಘಟನೆಯನ್ನು ಉದಾಹರಣೆಯಾಗಿ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹತ್ವದ ಸಲಹೆಯೊಂದನ್ನು ನೀಡಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಅಪಘಾತ ಮಾಡಿದ ಸಂದರ್ಭದಲ್ಲಿ ತಾವೇ ರಾಜೀನಾಮೆ ಕೊಟ್ಟಿದ್ದರು. ರಾಜೀನಾಮೆ ಕೊಡಬೇಕಾ ಬೇಡವಾ ಎನ್ನುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟಿದ್ದು. ಆದರೆ ಇಂತಹ ಗಂಭೀರವಾದ ಆರೋಪಗಳು ಕೇಳಿ ಬಂದು, ತನಿಖೆ ನಡೆಯುವ ಸಂದರ್ಭದಲ್ಲಿ ರಾಜೀನಾಮೆ ಕೊಡುವುದು ಒಳ್ಳೆಯದು. ರಾಜೀನಾಮೆ ಕೊಡದೇ ಇದ್ದರೆ ಕಾನೂನು ಪ್ರಕಾರ ತಪ್ಪಾಗುವುದಿಲ್ಲ, ಆದರೆ ಸಾರ್ವಜನಿಕ ಬದುಕಿನಲ್ಲಿರುವಾಗ, ರಾಜೀನಾಮೆ ಕೊಡಬೇಕು ಎನಿಸುತ್ತದೆ ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಹೈಕೋರ್ಟ್ ಆದೇಶದಲ್ಲಿ ಹಗರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿ ಇದೆ ಎಂದು ಹೇಳಿದೆ, ಈ ಕಾರಣಕ್ಕೆ ಅವರು ರಾಜೀನಾಮೆ ಕೊಡಬೇಕೆನಿಸುತ್ತದೆ. ಯಾವ ತನಿಖಾ ಸಂಸ್ಥೆ ಉತ್ತಮವೆಂದು ಹೇಳಲ್ಲ, ಅದೆಲ್ಲ ಸರ್ಕಾರಕ್ಕೆ ಬಿಟ್ಟ ವಿಚಾರ. ಯಾವುದೇ ತನಿಖಾ ಸಮಿತಿ ವಿಚಾರಣೆ ಮಾಡಬಹುದು. ತನಿಖೆ ಬಳಿಕ ಅವರು ನಿರಪರಾಧಿ ಎಂದು ಸಾಬೀತಾದರೆ ಅವರು ಮತ್ತೆ ಸಿಎಂ ಸ್ಥಾನ ಅಲಂಕರಿಸಲಿ ಎಂದು ಹೇಳಿದರು.
ಹೈಕೋರ್ಟ್ ಆದೇಶಕ್ಕೆ ಮುನ್ನ ನಾನು ತಪ್ಪೇ ಮಾಡಿಲ್ಲ, ನ್ಯಾಯ ಸಿಗುತ್ತದೆ ಎಂದು ಅವರೇ ಹೇಳಿದ್ದರು. ಈಗ ನ್ಯಾಯಾಲಯ ಮೇಲ್ನೋಟಕ್ಕೆ ತಪ್ಪು ಕಂಡುಬಂದಿದೆ ಎಂದು ಹೇಳಿದ್ದು, ಸಿದ್ದರಾಮಯ್ಯ ಅವರ ಹೇಳಿಕೆ ಸುಳ್ಳು ಎನ್ನುವಂತಾಗಿದೆ ಎಂದರು.
ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ
ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಹೆಸರು ಕೇಳಿಬಂದಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಕೊಟ್ಟಿದೆ.
ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ತನಿಖೆ ಎದುರಿಸಲು ನಾನು ಸಿದ್ದವಾಗಿದ್ದೇನೆ ಎಂದು ತಿಳಿಸಿದ್ದಾರೆ. 17ಎ ಪ್ರಕಾರ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ, ಆದೇಶದ ಪ್ರತಿ ನನ್ನ ಕೈಗೆ ಸಿಕ್ಕ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.












Click it and Unblock the Notifications