Get Updates
Get notified of breaking news, exclusive insights, and must-see stories!

1.4 ಕೋಟಿ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಿದ ‘ಸಾಯಿ ಶ್ಯೂರ್‌’ಗೆ ದಶಮಾನೋತ್ಸವ ಸಂಭ್ರಮ: ಭವಿಷ್ಯದ ಕನಸು ಕಾಣಲು ಆಹಾರದ ಬಲ

"ಯಾವುದೇ ಮಗು ಹಸಿದ ಹೊಟ್ಟೆಯಲ್ಲಿ ಶಾಲೆಗೆ ಹೋಗಬಾರದು. ಒಂದು ಮಗುವಿನ ಹಸಿವು ನೀಗಿಸಿದರೆ ಪೋಷಕಾಂಶ ಕೊರತೆಯಿಂದ ಉದ್ಭವಿಸುವ ಸಮಸ್ಯೆಗಳನ್ನು ನಿವಾರಿಸಿಕೊಂಡ ಭಾರತವನ್ನು ನಿರ್ಮಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಂತೆ. ಅನ್ನ, ಆರೋಗ್ಯ ಮತ್ತು ಶಿಕ್ಷಣ ಎಲ್ಲ ಮಕ್ಕಳ ಜನ್ಮಸಿದ್ಧ ಹಕ್ಕುಗಳು. ಅವುಗಳನ್ನು ಎಲ್ಲರಿಗೂ ಉಚಿತವಾಗಿ ಹಾಗೂ ಸಮಾನವಾಗಿ ಒದಗಿಸುವುದೇ ಮಾನವಕುಲಕ್ಕೆ ಸಲ್ಲಿಸುವ ನಿಜವಾದ ಸೇವೆ" ಎನ್ನುತ್ತಾರೆ ಸದ್ಗುರು ಶ್ರೀ ಮಧುಸೂದನ ಸಾಯಿ.

ಅವರ ಈ ಆಶಯದ ಸಾಕಾರ ರೂಪ ಎನ್ನುವಂತೆ ಕಾರ್ಯನಿರ್ವಹಿಸುತ್ತಿದೆ ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್. ಫೆಬ್ರುವರಿ 14 ಲಕ್ಷಾಂತರ ಮಕ್ಕಳ ಬದುಕಿನಲ್ಲಿ ಬದಲಾವಣೆ ತಂದ ದಿನ. ಬೆಳಗಿನ ಹಸಿವು, ಮಕ್ಕಳ ಶಾಲಾ ಶಿಕ್ಷಣಕ್ಕೆ ಅಡ್ಡಿಯಾಗಬಾರದೆಂಬ ಸಂಕಲ್ಪದಿಂದ ಆರಂಭವಾದ 'ಸಾಯಿ ಶ್ಯೂರ್' ಪೌಷ್ಟಿಕ ಉಪಹಾರ ಕಾರ್ಯಕ್ರಮ ಇದೀಗ ದಶಮಾನೋತ್ಸವದ ಘಟ್ಟ ತಲುಪಿದೆ. 10 ವರ್ಷಗಳ ಹಿಂದೆ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶ ಉಪಹಾರ ನೀಡುವ ಮೂಲಕ ಆರಂಭವಾದ ಈ ಸೇವೆ, ಇಂದು ಕೋಟ್ಯಂತರ ಮಕ್ಕಳ ಆರೋಗ್ಯಕ್ಕೆ ಪೌಷ್ಟಿಕಾಂಶ ನೀಡುವ ಮೂಲಕ ಶಿಕ್ಷಣದ ಬಲವರ್ಧನೆ ಮಾಡುತ್ತ ರಾಷ್ಟ್ರಮಟ್ಟದ ಪೌಷ್ಟಿಕ ಆಹಾರ ಚಳವಳಿಯಾಗಿ ಬೆಳೆದು ನಿಂತಿದೆ.

SaiSure Decennial Celebration

ಈ ಯೋಜನೆಗೆ ಪ್ರೇರಣೆ ದೊರಕಿದ್ದು 2012ರ ಏಪ್ರಿಲ್‌ನಲ್ಲಿ. ಬೆಂಗಳೂರು ಸಮೀಪದ ದೊಡ್ಡಬೆಲೆ ಸರ್ಕಾರಿ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಕೆಲವು ಮಕ್ಕಳು ಅಸ್ವಸ್ಥರಾಗಿದ್ದ ಘಟನೆ ಈ ಸೇವಾ ಕಾರ್ಯಕ್ಕೆ ಪ್ರೇರಣೆಯಾಯಿತು. ಮಕ್ಕಳು ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಬಂದಿರುವುದು ತಿಳಿದ ನಂತರ, ಶ್ರೀ ಮಧುಸೂದನ್ ಸಾಯಿ ಅವರ ಸೂಚನೆಯಂತೆ ಉಪಹಾರ ನೀಡುವ ಕಾರ್ಯ ಆರಂಭವಾಯಿತು.

ಕ್ರಮೇಣ ಈ ಕಾರ್ಯ ವಿಸ್ತರಿಸಿ, 2015ರ ನವೆಂಬರ್‌ನಲ್ಲಿ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ರೂಪುಗೊಂಡಿತು. ಚಿಕ್ಕಬಳ್ಳಾಪುರ ಜಿಲ್ಲೆಯ 90 ಸರ್ಕಾರಿ ಶಾಲೆಗಳಲ್ಲಿ ಬೆಳಗಿನ ಉಪಹಾರ ವಿತರಣೆ ಆರಂಭಿಸಲಾಯಿತು. ಇಂದು ದೇಶವ್ಯಾಪಿ ಬೆಳಗಿನ ಅತಿದೊಡ್ಡ ಪೌಷ್ಟಿಕ ಉಪಹಾರ ಕಾರ್ಯಕ್ರಮವಾಗಿ ವಿಸ್ತರಗೊಂಡಿದೆ. ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನಡೆಸುತ್ತಿರುವ ಈ ಯೋಜನೆ ಈಗ 25 ರಾಜ್ಯಗಳು ಹಾಗೂ 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿದೆ. 1.50 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ತಲುಪಿದೆ. ಈ ದಶಕದ ಪಯಣದಲ್ಲಿ ಸಾಧನೆಗಳಿವೆ, ಸವಾಲುಗಳಿವೆ, ಮತ್ತು ಮುಖ್ಯವಾಗಿ ಮಕ್ಕಳ ಆರೋಗ್ಯದಲ್ಲಿ ಕಂಡು ಬಂದ ಸ್ಪಷ್ಟ ಬದಲಾವಣೆಗಳಿವೆ. ಈ ದಶಮಾನೋತ್ಸವ ಕೇವಲ ಆಚರಣೆ ಅಲ್ಲ; ಇದು ಸತತ ಸೇವೆ ಒದಗಿಸುವ ಸಂಕಲ್ಪದ ಮರುಖಾತ್ರಿ.

ದೇಶವ್ಯಾಪಿ ಸವಾಲು: 1.4 ಕೋಟಿ ಮಕ್ಕಳಿಗೆ ಆಸರೆ

ದೇಶದಲ್ಲಿ ಸುಮಾರು 14.71 ಲಕ್ಷ ಶಾಲೆಗಳಿದ್ದು, 24.69 ಕೋಟಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದರಲ್ಲಿ ಅಂದಾಜು 17 ಕೋಟಿ ಮಕ್ಕಳು ಸರ್ಕಾರಿ ಶಾಲೆಗಳಲ್ಲಿದ್ದಾರೆ. ವಿವಿಧ ಅಧ್ಯಯನಗಳ ಪ್ರಕಾರ, ಲಕ್ಷಾಂತರ ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಸರ್ಕಾರದ ಮಧ್ಯಾಹ್ನದ ಬಿಸಿ ಊಟ ಯೋಜನೆ ಇದ್ದರೂ ಬೆಳಗಿನ ಉಪಹಾರ ಸೌಲಭ್ಯ ಎಲ್ಲೆಡೆ ಲಭ್ಯವಿಲ್ಲ. ಹೀಗಾಗಿ 'ಹಸಿದ ಹೊಟ್ಟೆಯಲ್ಲಿ ಬರುವ ಮಕ್ಕಳಲ್ಲಿ ಏಕಾಗ್ರತೆ ಕೊರತೆ, ಶಕ್ತಿಹೀನತೆ ಹಾಗೂ ಹಾಜರಾತಿ ಸಮಸ್ಯೆಗಳು ಸಾಮಾನ್ಯ' ಎನ್ನುತ್ತಾರೆ ಶಾಲಾ ಶಿಕ್ಷಕರು.

ಆರಂಭದಲ್ಲಿ ಅಡುಗೆ ಮಾಡಿ ಉಪಹಾರ ನೀಡಲಾಗುತ್ತಿತ್ತು. ಆದರೆ ಲಕ್ಷಾಂತರ ಶಾಲೆಗಳಿಗೆ ವಿಸ್ತರಿಸುವ ವೇಳೆ ಅಡುಗೆ ವ್ಯವಸ್ಥೆಯಲ್ಲಿ ಸವಾಲುಗಳು ಎದುರಾದವು. ಈ ಹಿನ್ನೆಲೆಯಲ್ಲಿ ರಾಗಿ ಹಾಗೂ ಗೋಧಿ ಆಧರಿತ, ವಿವಿಧ ವಿಟಮಿನ್ ಮತ್ತು ಖನಿಜಾಂಶಗಳಿಂದ ಸಮೃದ್ಧಗೊಳಿಸಿದ 'ಸಾಯಿ ಶ್ಯೂರ್' ಪುಡಿ ಪರಿಚಯಿಸಲಾಯಿತು.

ಕರ್ನಾಟಕದ ಮುದ್ದೇನಹಳ್ಳಿಯಲ್ಲಿ ಆಹಾರ ಸುರಕ್ಷಾ ಪ್ರಾಧಿಕಾರ (FSSAI) ಮಾನದಂಡಗಳಿಗೆ ಅನುಗುಣವಾಗಿ ಈ ಮಿಶ್ರಣ ತಯಾರಾಗುತ್ತದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ರಾಗಿ ಆಧರಿತ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಗೋಧಿ ಆಧರಿತ ಪುಡಿಯ ರೂಪದಲ್ಲಿ 'ಸಾಯಿ ಶ್ಯೂರ್' ಪೂರೈಕೆ ಮಾಡಲಾಗುತ್ತದೆ. ಇದನ್ನು ಹಾಲಿನೊಂದಿಗೆ ಬೆರೆಸಿ ಬೆಳಗಿನ ಉಪಹಾರವಾಗಿ ನೀಡಲಾಗುತ್ತದೆ.

ಅಧಿಕೃತ ಮಾಹಿತಿಯ ಪ್ರಕಾರ, ಪ್ರತಿದಿನ 1 ಕೋಟಿ 4 ಲಕ್ಷಕ್ಕೂ ಹೆಚ್ಚು ಮಕ್ಕಳು ಈ ಪೌಷ್ಟಿಕ ಮಿಶ್ರಣ ಪಡೆಯುತ್ತಿದ್ದಾರೆ. ಸುಮಾರು 1.5 ಲಕ್ಷ ಶಾಲೆಗಳಲ್ಲಿ ಯೋಜನೆ ಅನುಷ್ಠಾನದಲ್ಲಿದೆ. ಪ್ರತಿ 10 ಗ್ರಾಂ ಸಾಯಿ ಶ್ಯೂರ್ ಮಿಶ್ರಣದಲ್ಲಿ ವಿಟಮಿನ್ D, B1, B2, B6, B9, B12, ವಿಟಮಿನ್ C ಹಾಗೂ ಜಿಂಕ್ ಸೇರಿದಂತೆ ಪ್ರಮುಖ ಖನಿಜಾಂಶಗಳು ಒಳಗೊಂಡಿವೆ. ಇಂತಹ ಪೌಷ್ಟಿಕ ಮಿಶ್ರಣಗಳು ರೋಗನಿರೋಧಕ ಶಕ್ತಿ ವೃದ್ಧಿ, ಮೂಳೆಗಳ ಬಲವರ್ಧನೆ ಹಾಗೂ ಏಕಾಗ್ರತೆ ಹೆಚ್ಚಿಸಲು ನೆರವಾಗಬಹುದು ಎನ್ನುತ್ತಾರೆ ತಜ್ಞರು.

ವಿವಿಧ ರಾಜ್ಯ ಸರ್ಕಾರಗಳ ಸಹಭಾಗಿತ್ವ

2018ರಲ್ಲಿ ಪುದುಚೇರಿ ಸರ್ಕಾರ ಮೊದಲ ಬಾರಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನೊಂದಿಗೆ​ ಅಧಿಕೃತ ಒಪ್ಪಂದ ಮಾಡಿಕೊಂಡಿತು. ನಂತರ ತೆಲಂಗಾಣ, ಕರ್ನಾಟಕ ಹಾಗೂ ಅಸ್ಸಾಂ ಸರ್ಕಾರಗಳು ಸಹ ಇದನ್ನು ಜಾರಿಗೆ ತಂದವು.

ತಮ್ಮ ರಾಜ್ಯಗಳಲ್ಲಿ ಈ ಯೋಜನೆ ಅನುಷ್ಠಾನದ ಶೇ 50 ರಷ್ಟು ವೆಚ್ಚ ಭರಿಸಲು ತೆಲಂಗಾಣ ಮತ್ತು ಅಸ್ಸಾಂ ಸರ್ಕಾರಗಳು ಒಪ್ಪಂದ ಮಾಡಿಕೊಂಡಿವೆ. ಕರ್ನಾಟಕ ಸರ್ಕಾರವು ಶೇ 25 ರಷ್ಟು ವೆಚ್ಚ ಭರಿಸಲು ಮುಂದಾಗಿದೆ.

ಕರ್ನಾಟಕ ಸರ್ಕಾರದ ಸಕ್ರಿಯ ಸಹಭಾಗಿತ್ವದ ನಂತರ ಸಾಯಿ ಶ್ಯೂರ್ ಯೋಜನೆಗೆ ಮಹತ್ವದ ವೇಗ ದೊರಕಿತು. 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಈ ಯೋಜನೆಯ ರಾಜ್ಯವ್ಯಾಪಿ ಅನುಷ್ಠಾನಕ್ಕೆ ಅಧಿಕೃತ ಚಾಲನೆ ನೀಡಿದರು. ಕರ್ನಾಟಕದಲ್ಲಿ ಈ ಯೋಜನೆ 'ಕ್ಷೀರಭಾಗ್ಯ' ಯೋಜನೆಯೊಂದಿಗೆ ಸಂಯೋಜಿತವಾಗಿ ಜಾರಿಯಲ್ಲಿದೆ. ರಾಜ್ಯ ಸರ್ಕಾರ ಭಾಗಶಃ (25%) ವೆಚ್ಚ ಹೊರುತ್ತಿದ್ದು, ಉಳಿದ ಜವಾಬ್ದಾರಿ ಟ್ರಸ್ಟ್‌ನದು. ಇನ್ನು ತಮಿಳುನಾಡಿನ "ಮುಖ್ಯಮಂತ್ರಿ ಉಪಹಾರ ಯೋಜನೆ", ಗುಜರಾತಿನ "ನ್ಯೂಟ್ರಿಷಿಯಸ್ ಬ್ರೇಕ್‌ಫಾಸ್ಟ್ ಪ್ರೋಗ್ರಾಂ"ಗಳಿಗೂ ಈ ಸೇವೆಯು ಪ್ರೇರಣೆ ನೀಡಿದೆ.

ಮಕ್ಕಳಲ್ಲಿ ಪೌಷ್ಟಿಕತೆ ವೃದ್ಧಿಗೆ ರೈತರ ಸಹಕಾರ

ಈ ಮಿಶ್ರಣಕ್ಕೆ ಬಳಸುವ ರಾಗಿಯ ಬಹುಪಾಲನ್ನು ಕರ್ನಾಟಕದ ತಿಪಟೂರು ಭಾಗದ ರೈತರಿಂದ ಖರೀದಿಸಲಾಗುತ್ತದೆ. ಸುಮಾರು 3,000 ರೈತರು ನೈಸರ್ಗಿಕ ಕೃಷಿ ಮೂಲಕ ರಾಗಿ ಉತ್ಪಾದಿಸುತ್ತಿದ್ದಾರೆ. ಕನಿಷ್ಠ ಬೆಂಬಲ ದರಕ್ಕಿಂತ ಹೆಚ್ಚು ಮೊತ್ತ ಪಾವತಿಸಿ ರಾಗಿ ಖರೀದಿಸುವುದು ಈ ಯೋಜನೆಯ ಮತ್ತೊಂದು ವೈಶಿಷ್ಟ್ಯ.

2024-25ರ ಅಧ್ಯಯನ ವರದಿ ಪ್ರಕಾರ, ನಿಯಮಿತವಾಗಿ ಸಾಯಿ ಶ್ಯೂರ್ ಪೌಷ್ಟಿಕ ಉಪಹಾರ ಪಡೆಯುತ್ತಿರುವ ಮಕ್ಕಳ ಪೈಕಿ ಶೇ 95 ರಷ್ಟು ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶ ಕೊರತೆ ಲಕ್ಷಣಗಳು ಕಂಡುಬಂದಿಲ್ಲ. ಶೇ 68 ರಷ್ಟು ಮಕ್ಕಳಲ್ಲಿ ಜೀರ್ಣಕ್ರಿಯೆ ಸುಧಾರಣೆ ಕಂಡು ಬಂದಿದ್ದು, ಶೇ 99 ರಷ್ಟು ಮಕ್ಕಳು ಶಾಲೆಗೆ ಉತ್ಸಾಹದಿಂದ ಹಾಜರಾಗುತ್ತಿದ್ದಾರೆ. ಶೇ 92 ರಷ್ಟು ಮಕ್ಕಳು ಓದಿನಲ್ಲಿ ಹೆಚ್ಚಿನ ಏಕಾಗ್ರತೆ ತೋರುತ್ತಿದ್ದಾರೆ.

ಮುಂದಿನ ಗುರಿ

14 ವರ್ಷಗಳ ಹಿಂದೆ 50 ಮಕ್ಕಳಿಂದ ಆರಂಭವಾದ ಈ ಪ್ರಯಾಣ ಇಂದು ಕೋಟ್ಯಂತರ ಮಕ್ಕಳ ಪೌಷ್ಟಿಕಾಂಶ ಕೊರತೆಯನ್ನು ನೀಗಿಸುವ ಮೂಲಕ ಅವರ ಜೀವನದಲ್ಲಿ ಬೆಳಕು ಮೂಡಿಸಿದೆ. ಇನ್ನೂ ಪೋಷಕಾಂಶ ಕೊರತೆಯಿಂದ ಬಳಲುತ್ತಿರುವ ಉಳಿದ 7 ಕೋಟಿ ಮಕ್ಕಳಿಗೂ ಸಾಯಿ ಶ್ಯೂರ್ ತಲುಪಿಸುವುದೇ ಅನ್ನಪೂರ್ಣ ಟ್ರಸ್ಟ್‌ನ ಮುಂದಿನ ಮಹತ್ತರ ಗುರಿಯಾಗಿದೆ.
ಇದು ಕೇವಲ ಪೌಷ್ಟಿಕಾಂಶ ಉಪಹಾರ ವಿತರಿಸುವ ಕಾರ್ಯಕ್ರಮವಲ್ಲ; ಇದು ಮಕ್ಕಳ ಭವಿಷ್ಯದ ಭರವಸೆಯಾಗಿದೆ. ಸದೃಢ ದೇಶ ನಿರ್ಮಾಣದ ಹೆಜ್ಜೆಯಾಗಿದೆ. ಸಮಾಜ, ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವದಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ದೀರ್ಘಕಾಲಿಕ ಬದಲಾವಣೆ ಸಾಧ್ಯವೆಂಬುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ.

ಕರ್ನಾಟಕ ಬಜೆಟ್ ಮಾರ್ಚ್ 6ಕ್ಕೆ: ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಮಂಡನೆ
ಗಮನಿಸಿ: ಈ ಲೇಖನದಲ್ಲಿ ಬಳಸಿರುವ ಅಂಕಿಅಂಶ ಮತ್ತು ಮಾಹಿತಿಗೆ ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆ (ಎನ್‌ಐಎಂಆರ್) ಮತ್ತು ರಾಷ್ಟ್ರೀಯ ಕಿರುಧಾನ್ಯಗಳ ಸಂಶೋಧನಾ ಸಂಸ್ಥೆ (ಐಐಎಂಆರ್‌) ವರದಿಗಳನ್ನು ಆಧರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ:
https://annapoorna.org.in/sri-sathya-sai-annapoorna-trust/ ಜಾಲತಾಣ ನೋಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+