ಕರಾವಳಿಯಲ್ಲಿ ವಿಧಾನಸಭೆ ಚುನಾವಣೆ ಅಖಾಡಕ್ಕಿಳಿಯಲಿದೆ 'ಸಹ್ಯಾದ್ರಿ ಸಂಚಯ'
ಮಂಗಳೂರು, ಜನವರಿ 25: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಎತ್ತಿನಹೊಳೆ ಯೋಜನೆ ಸದ್ದು ಮಾಡಲಿದೆ. ಯೋಜನೆ ಜಾರಿ ವಿರುದ್ಧ ಚುನಾವಣೆಯಲ್ಲಿ ನೋಟಾ ಮತ ಚಲಾವಣೆ ಅಭಿಯಾನ ಆರಂಭಿಸಲು 'ಸಹ್ಯಾದ್ರಿ ಸಂಚಯ' ಸಂಘಟನೆ ಮುಂದಾಗಿದೆ. ಜತೆಗೆ 2-3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.
ಈ ಕುರಿತು ಮಾಹಿತಿ ನೀಡಿರುವ ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ, "ಜಿಲ್ಲೆಯ ಮನೆಗಳ ಗೇಟ್‌ಗೆ 'ನೇತ್ರಾವತಿಯನ್ನು ರಕ್ಷಿಸಲಾಗದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಯಾವುದೇ ರಾಜಕಾರಣಿಗಳು ಮತ ಕೇಳಲು ಬರಬೇಡಿ. ನಿಮಗೆ ನಮ್ಮ ಮತ ಬಹಿಷ್ಕಾರ ಮತ್ತು ಧಿಕ್ಕಾರ' ಎಂಬ ಒಕ್ಕಣೆಯುಳ್ಳ ಬೋರ್ಡ್ ಅಳವಡಿಸಲಾಗುವುದು. ಸಾರ್ವಜನಿಕರಿಗೆ ಇದನ್ನು ಉಚಿತವಾಗಿ ನೀಡಲಾಗುವುದಾಗಿ," ಎಂದು ಹೇಳಿದ್ದಾರೆ.
ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 'ನೋಟಾ ಅಭಿಯಾನ'ವನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಸಂಘಟನೆ ನಿರ್ಧರಿಸಿದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೋಟಾ ಅಭಿಯಾನ ನಡೆಸಲಾಗಿತ್ತು. ಅದರ ಫಲವಾಗಿ ಚುನಾವಣೆಯಲ್ಲಿ 7.5 ಸಾವಿರ ನೋಟಾ ಮತಗಳು ಬಿದ್ದಿದ್ದವು.

ನೋಟಾಗೆ ಬಿದ್ದಿತ್ತು 28ಸಾವಿರ ಮತ
ಕಳೆದ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿಯೂ ಅಭಿಯಾನಕ್ಕೆ ಭಾರೀ ನೆಂಬಲ ದೊರೆತು 28 ಸಾವಿರ ನೋಟಾ ಮತಗಳು ಚಲಾವಣೆಯಾಗಿದ್ದವು. ಈ ಬಾರಿ ಇನ್ನೂ ಅಧಿಕ ನೋಟಾ ಮತಗಳು ದೊರೆಯುವ ನಿರೀಕ್ಷೆಯಿದೆ ಎಂದು ದಿನೇಶ್ ಹೊಳ್ಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2-3 ಕ್ಷೇತ್ರದಲ್ಲಿ ಕಣಕ್ಕೆ?
ಒಂದು ವೇಳೆ ಉತ್ತಮ ಅಭ್ಯರ್ಥಿ ದೊರೆತರೆ ಜಿಲ್ಲೆಯ 2 ಅಥವಾ 3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸುವ ಚಿಂತನೆಯೂ ಇದೆ. ಇದು ಕೂಡ ಎತ್ತಿನಹೊಳೆ ವಿರೋಧಿ ಹೋರಾಟದ ಭಾಗವಾಗಿಯೇ ನಡೆಯಲಿದೆ ಎಂದು ದಿನೇಶ್ ಹೊಳ್ಳ ಸ್ಪಷ್ಟಪಡಿಸಿದ್ದಾರೆ.

ಗಾಂಜಾ ಮಾಫಿಯಾ
ಪಶ್ಚಿಮ ಘಟ್ಟದಲ್ಲಿ ರೆಸಾರ್ಟ್ ಮಾಫಿಯಾದಂತೆಯೇ ಗಾಂಜಾ ಮಾಫಿಯಾ ಕೂಡ ಬೇರೂರಿದೆ. ನೂರಾರು ಎಕರೆ ಪ್ರದೇಶಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸಲಾಗುತ್ತಿದೆ. ಅಲ್ಲದೆ ಕಾಡುಕೋಣ ಬೇಟೆ ಅವ್ಯಾಹತವಾಗಿದೆ. ಅಲ್ಲಿಗೆ ಜನರು, ಹೊರಗಿನ ಚಾರಣಿಗರು ಹೋಗದಂತೆ ಭಯ ಹುಟ್ಟಿಸುವ ಕೆಲಸವನ್ನು ಮಾಫಿಯಾಗಳು ನಡೆಸುತ್ತಿವೆ. ಇತ್ತೀಚೆಗೆ ಅಡ್ಡಹೊಳೆಗೆ ನಕ್ಸಲೀಯರು ಬಂದಿದ್ದರು ಎನ್ನುವ ಸುದ್ದಿಯಾಗಿತ್ತು. ಆದರೆ ವಾಸ್ತವದಲ್ಲಿ ಯಾವ ನಕ್ಸಲರೂ ಅಲ್ಲಿಗೆ ಬರಲಿಲ್ಲ. ಇದೆಲ್ಲ ಗಾಂಜಾ ಮಾಫಿಯಾಗಳ ತಂತ್ರ ಎಂದು ಹೊಳ್ಳ ಆರೋಪಿಸಿದ್ದಾರೆ.

ಕಾನನ ರೋದನ
ಎತ್ತಿನಹೊಳೆ ಮತ್ತಿತರ ಯೋಜನೆಗಳ ಮೂಲಕ ಕರಾವಳಿಯ ಹಸಿರನ್ನು ಬರಿದುಗೊಳಿಸಲಾಗುತ್ತಿದೆ. ಸರ್ಕಾರದಿಂದಲೇ ಕಾಡು ನಾಶ ನಡೆಸುತ್ತಿದೆ. ಪಶ್ಚಿಮ ಘಟ್ಟಕ್ಕೆ ಬೆಂಕಿ ಹಾಕುತ್ತಿರುವ ಮಾಫಿಯಾಗಳ ವಿರುದ್ಧ ಜನವರಿ 26 ರ ಗಣರಾಜ್ಯೋತ್ಸವ ದಿನದಂದು ಸಹ್ಯಾದ್ರಿ ಸಂಚಯ 'ಕಾನನ ರೋದನ' ಎಂಬ ವಿಭಿನ್ನ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ ಎಂದು ಅವರು ತಿಳಿಸಿದರು.












Click it and Unblock the Notifications