ಭಾಷೆಗೆ ಆತಂಕ ತಂದಿರುವ ಆಂಗ್ಲ ಶಾಲೆಗಳು: ಸಿದ್ದಲಿಂಗಯ್ಯ
ಹಾಸನ, ಫೆ. 1: ಕನ್ನಡ ಶಾಲೆಗಳು ಒಂದೊಂದೆ ಮಾಯವಾಗುತ್ತಿರುವ ಜತೆಗೆ ಆಂಗ್ಲ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವುದು ಭಾಷೆಗೆ ಆತಂಕ ತಂದಿದೆ ಎಂದು 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಹೇಳಿದರು.
ಹಿಂದಿನಂತೆ ಹತ್ತಾರು ನಿರ್ಣಯಗಳನ್ನು ತೆಗೆದುಕೊಳ್ಳುವುದು ಬೇಡ. ಒಂದೇ ಒಂದು ನಿರ್ಣಯ ತೆಗೆದುಕೊಂಡು ಅದನ್ನು ಸರಿಯಾಗಿ ಅನುಷ್ಠಾನ ಮಾಡುವುದು ಒಳಿತು ಎಂದು ಅವರು ಹೇಳಿದರು.[ಕನ್ನಡ ಸಾಹಿತ್ಯ ಸಮ್ಮೇಳನ: ಸಿದ್ದರಾಮಯ್ಯ ಉದ್ಘಾಟನಾ ಭಾಷಣ]

ಪ್ರಾಥಮಿಕ ಶಾಲೆಗಳಲ್ಲಿ ಕನ್ನಡವನ್ನು ಭಾಷಾ ಮಾಧ್ಯಮವನ್ನಾಗಿಸಬೇಕು. ಶಿಕ್ಷಣದ ವ್ಯಾಪಾರೀಕರಣ ಸಮಾಜದ ಅಧೋಗತಿಗೆ ಸಾಕ್ಷಿ. ಎಲ್ಲರೂ ಶಿಕ್ಷಣ ಪಡೆಯುವಂತಾಗಲೂ ಶಿಕ್ಷಣ ರಾಷ್ಟ್ರೀಕರಣವೊಂದೇ ಪರಿಹಾರ ಎಂದು ಹೇಳಿದರು.
ಕನ್ನಡ ಮಾಧ್ಯಮದ ನಿರ್ಣಯ ಅನುಷ್ಠಾನಕ್ಕೆ ಜನಾಂದೋಲನವಾಗಬೇಕು. ಸಾಹಿತಿಗಳು, ಕಲಾವಿದರು ಸೇರಿದಂತೆ ಎಲ್ಲ ಸ್ತರದ ಜನರು ಆಂದೋಲನಕ್ಕೆ ಕೈ ಜೋಡಿಸಬೇಕು. ರಾಜ್ಯ ಸರ್ಕಾರ 1 ರಿಂದ 5 ನೇ ತರಗತಿಯವರೆಗೆ ಕನ್ನಡದಲ್ಲಿ ಶಿಕ್ಷಣ ನೀಡುವ ಬಗ್ಗೆ ಕಾನೂನಿಗೆ ತಿದ್ದುಪಡಿ ತರಲು ಹೊರಟಿದೆ. ಇದೇ ಕಾಲಕ್ಕೆ ಅದರ ಸಾಧಕ- ಬಾಧಕಗಳ ಬಗ್ಗೆ ಸಮಗ್ರ ಅಧ್ಯಯನವಾಗಬೇಕು ಎಂದು ಹೇಳಿದರು.[ಕನ್ನಡ ಭಾಷಾ ಮಾಧ್ಯಮ ಕಡ್ಡಾಯ: ಸಿಎಂ ಸಿದ್ದರಾಮಯ್ಯ]
ಭಾಷಾ ಮಾಧ್ಯಮ ವಿಚಾರ ಸದ್ಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬಾರದು. ಹೊಸ ಭಾಷಾ ನೀತಿ ರೂಪಿಸಿ ಮಾತೃಬಾಭಾಷೆ ಕಡ್ಡಾಯಗೊಳಿಸಬೇಕು ಎಂದು ಸಿದ್ದಲಿಂಗಯ್ಯ ಒತ್ತಾಯಿಸಿದರು.
ಭಾಷೆ ವಿಷಯದಲ್ಲಿ ಮೌಢ್ಯ ಆಚರಣೆ ಬೇಡ. ಬೇರೆ ಭಾಷೆಗಳ ಜತೆ ಸಮನ್ವಯ ಮತ್ತು ಹೊಂದಾಣಿಕೆ ಇಟ್ಟುಕೊಳ್ಳುವುದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ ಅದನ್ನೇ ಆರಾಧಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.












Click it and Unblock the Notifications