ಆರ್‌ವಿ ದೇಶಪಾಂಡೆಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿ
ಬೆಂಗಳೂರು, ಡಿಸೆಂಬರ್ 28: 2022ರ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಶಾಸಕ ಆರ್‌ವಿ ದೇಶಪಾಂಡೆ ಅವರು ಭಾಜನರಾಗಿದ್ದಾರೆ. ಕಳೆದ ವರ್ಷ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಯ್ಕೆಯಾಗಿದ್ದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಕಾಂಗ್ರೆಸ್ ನ ಹಿರಿಯ ನಾಯಕ ಆರ್ ವಿ ದೇಶಪಾಂಡೆಯವರಿಗೆ ನೀಡಲಾಯಿತು. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಅವರು ಕಾಂಗ್ರೆಸ್‌ನ ಹಿರಿಯ ರಾಜಕಾರಣಿಯಾಗಿದ್ದಾರೆ.
75 ವರ್ಷ ವಯಸ್ಸಿನ ಆರ್‌ವಿ ದೇಶಪಾಂಡೆ ಅವರು ಬರೋಬ್ಬರಿ 9 ಬಾರಿ ವಿಧಾನಸಭೆ ಚುನಾವಣೆಗೆ ಸ್ಫರ್ಧಿಸಿದ್ದಾರೆ. ದೇಶಪಾಂಡೆ ಅವರು ತಮ್ಮ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ವತಿಯಿಂದ ಪ್ರತಿನಿಧಿಸುತ್ತಾ ಬಂದಿದ್ದಾರೆ. ಅವರು 2018 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಾಗಿ ಮತ್ತೊಮ್ಮೆ ಜಯಶಾಲಿಯಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ.

ಒಟ್ಟು ಹತ್ತು ವರ್ಷಗಳ ಕಾಲ ಈ ಖಾತೆಗಳ ಸಚಿವರಾಗಿದ್ದ ದೇಶಪಾಂಡೆ ಅವರು ಮೂಲತಃ ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿದವರು. 1999 ರಲ್ಲಿ ಕಾಂಗ್ರೆಸ್ ಸೇರಿದ ಇವರು ಇವರು ತಮ್ಮ ಪ್ರಭಾವಿ ನಾಯಕತ್ವ ಹಾಗೂ ಪರಿಣಾಮಕಾರಿ ಆಡಳಿತಕ್ಕೆ ಹೆಸರುವಾಸಿಯಾಗಿದ್ದಾರೆ. 1947 ಮಾರ್ಚ್ 16ರಂದು ಜನಿಸಿದ ದೇಶಪಾಂಡೆ ಅವರು ಬಿಎ, ಎಲ್ಎಲ್ಬಿ ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ವಜನಿಕ ಸೇವೆಗೆ ತೊಡಗಿಸಿಕೊಂಡಿದ್ದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯ ಸಮಿತಿ ದೇಶಪಾಂಡೆ ಅವರನ್ನು ಆಯ್ಕೆ ಮಾಡಿದೆ. ಈ ಸಮಿತಿಯಲ್ಲಿ ಸಭಾನಾಯಕ, ವಿರೋಧ ಪಕ್ಷದ ನಾಯಕರು ಇದ್ದಾರೆ.
ಪ್ರಶಸ್ತಿ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ದೇಶಪಾಂಡೆ ಅವರನ್ನು ಗೋರಕ್ಷಕ ಎಂದು ಬಣ್ಣಿಸಿದರು. ಟೊಯೊಟಾವನ್ನು ಕರ್ನಾಟಕಕ್ಕೆ ತರುವಲ್ಲಿ ಕಾಂಗ್ರೆಸ್ ಶಾಸಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಆ ಸಮಯದಲ್ಲಿ, ನಾನು ಅದನ್ನು ವಿರೋಧಿಸಿದ್ದೆ ಏಕೆಂದರೆ ದೀರ್ಘಕಾಲದವರೆಗೆ ದೊಡ್ಡ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಆದರೆ, ಆಗ ತಮಿಳುನಾಡಿನಿಂದ ತೀವ್ರ ಪೈಪೋಟಿ ಏರ್ಪಟ್ಟಿತ್ತು. ದೇಶಪಾಂಡೆ ಅವರಿಗೆ ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ದೇಶಪಾಂಡೆ ಅವರಿಗೆ ಕೈಗಾರಿಕೆಗಳ ಚಟ ಇತ್ತು. ರಾಜ್ಯದ ಜಿಡಿಪಿ ಬೆಳೆಯಲು ಉದ್ಯೋಗಗಳನ್ನು ಸೃಷ್ಟಿಸಲು ಹೆಚ್ಚಿನ ಹೂಡಿಕೆಗಳು ಕರ್ನಾಟಕಕ್ಕೆ ಬರಬೇಕೆಂದು ಅವರು ಯಾವಾಗಲೂ ಬಯಸಿದ್ದರು. 2023ರ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ದೇಶಪಾಂಡೆ ಅವರನ್ನು ಒತ್ತಾಯಿಸಿದ್ದರು. ನಾವಿಬ್ಬರೂ ಇನ್ನೊಂದು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ನಾನು ಅವರಿಗೆ ಹೇಳಿದ್ದೇನೆ ಎಂದರು.












Click it and Unblock the Notifications