ರಾಜಕಾರಣಿಗಳಿಗೆ ‘ಮತಾಸ್ತ್ರ’ವಾಯಿತಾ ರಷ್ಯಾ-ಉಕ್ರೇನ್ ಸಮರ?

ಬೆಂಗಳೂರು, ಮಾರ್ಚ್ 02; ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಲ ಸನ್ನಿಹಿತವಾಗಿರುವ ಕಾಲಘಟ್ಟದಲ್ಲಿ ಹಿಜಾಬ್, ಕೇಸರಿ ವಿವಾದ, ರಷ್ಯಾ ಉಕ್ರೇನ್ ಯುದ್ಧ ಹೀಗೆ ಹಲವು ವಿಚಾರಗಳು ರಾಜಕೀಯ ನಾಯಕರ ಪಾಲಿಗೆ ಮತ ತಂದುಕೊಡುವ ಅಸ್ತ್ರಗಳಾಗುತ್ತಿದ್ದು, ಸಮಸ್ಯೆಗೆ ಪರಿಹಾರ ಹುಡುಕುವ ಬದಲಿಗೆ ಯಾವ ವಿಚಾರವನ್ನು ಹೇಗೆ ಬಳಸಿಕೊಂಡರೆ ತಮಗೆ ಲಾಭ ತಂದುಕೊಡಬಹುದು? ಎಂಬ ಲೆಕ್ಕಾಚಾರದಲ್ಲಿರುವುದು ಮಾತ್ರ ಬೇಸರದ ಸಂಗತಿಯಾಗಿದೆ.

ಯಾವುದೇ ಘಟನೆ ಇರಲಿ ಅದು ದೇಶ ಅಥವಾ ವಿದೇಶದಲ್ಲಿ ನಡೆಯಲಿ ಅದರಲ್ಲಿ ರಾಜಕೀಯವಾಗಿ ಲಾಭ ಕಾಣಿಸಿದರೆ ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದರಲ್ಲಿ ನಮ್ಮ ರಾಜಕಾರಣಿಗಳು ಹಿಂದೆ ಬಿದ್ದಿಲ್ಲ. ಸಮಸ್ಯೆಗಳು ಬಂದಾಗ ರಾಜಕೀಯ ಮರೆತು ಒಂದಾಗಿ ಬಗೆಹರಿಸುವ ಪ್ರಯತ್ನವನ್ನು ನಮ್ಮ ರಾಜಕೀಯ ನಾಯಕರು ಮಾಡಿಲ್ಲ. ಸಮಸ್ಯೆಗಳನ್ನು ಎದುರಿಸಲು ಬೇಕಾದ ಸಲಹೆಗಳನ್ನು ನೀಡುವ ಬದಲಿಗೆ ಆರೋಪ ಪ್ರತ್ಯಾರೋಪಗಳನ್ನು ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ.

ಬಹುಶಃ ನಮ್ಮ ದೇಶದಲ್ಲಿ ರಾಜಕೀಯ ನಾಯಕರು ರಾಜಕೀಯ ಮರೆತು ಒಟ್ಟಾಗಿ ನಡೆದಿದ್ದರೆ ಹತ್ತು ಹಲವು ಸಮಸ್ಯೆಗಳನ್ನು ಸುಸೂತ್ರವಾಗಿ ಬಗೆಹರಿಸಬಹುದಿತ್ತು. ಆದರೆ ಆ ರೀತಿಯ ಮನೋಭಾವ ಇಲ್ಲಿಯವರೆಗೆ ಬಾರದಿರುವುದು ಈ ದೇಶದ ದೌರ್ಭಾಗ್ಯ ಎಂದರೆ ತಪ್ಪಾಗಲಾರದು. ಕೆಟ್ಟದಾದರೆ ಅದರ ಹೊಣೆಗಾರಿಕೆಯನ್ನು ಬೇರೆಯವರ ಹೆಗಲಿಗೆ ಹಾಕಿ, ಒಳ್ಳೆದಾದರೆ ತಮ್ಮ ಬೆನ್ನು ತಟ್ಟಿಕೊಳ್ಳುವ ನಾಯಕರು ಬೆಂಕಿಗೆ ತುಪ್ಪ ಸುರಿಯುವುದರಲ್ಲಿಯೂ ನಿಸ್ಸೀಮರು ಎನ್ನುವುದು ಈಗಾಗಲೇ ನಡೆದ ಹಲವು ಘಟನೆಗಳಲ್ಲಿ ಸಾಬೀತಾಗಿದೆ.

ಮಾತುಗಳೇ ಘಟನೆಗಳಿಗೆ ಪ್ರಚೋದನೆ

ಮಾತುಗಳೇ ಘಟನೆಗಳಿಗೆ ಪ್ರಚೋದನೆ

ಬಹಳಷ್ಟು ಘಟನೆಗಳು ಬಿಗುವಾಗಲು ನಮ್ಮ ನಾಯಕರ ಪ್ರಚೋದಿತ, ವಿವಾದಾತ್ಮಕ ಮಾತುಗಳು ಕಾರಣವಾಗಿವೆ. ಅವರ ಮಾತುಗಳೇ ಹಲವು ಘಟನೆಗಳಿಗೆ ಪ್ರಚೋದನೆಯಾಗಿದೆ. ಕೆಲವು ಪ್ರಕ್ಷುಬ್ಧ ಪರಿಸ್ಥಿತಿಗಳು ನಿರ್ಮಾಣವಾದಾಗ ಆಡಳಿತ ಮತ್ತು ವಿಪಕ್ಷಗಳ ನಾಯಕರು ಒಂದೆಡೆ ಸೇರಿ ಪರಿಸ್ಥಿತಿಯನ್ನು ನಿಭಾಯಿಸುವ ಚಿಂತನೆ ಮಾಡಬೇಕು. ಆದರೆ ಅದು ಇದುವರೆಗೆ ಆಗಲೇ ಇಲ್ಲ. ಆಡಳಿತ ಪಕ್ಷದವರಿಗೆ ವಿಪಕ್ಷದವರ ಸಲಹೆ ನಾವ್ಯಾಕೆ ಕೇಳಬೇಕು ಎಂಬ ಅಹಂ ಒಂದೆಡೆಯಾದರೆ, ವಿಪಕ್ಷದವರಿಗೆ ಆಡಳಿತ ಪಕ್ಷದವರು ಮಾಡಿದ್ದನ್ನು ನಾವು ಏಕೆ ಒಪ್ಪಿಕೊಳ್ಳಬೇಕೆನ್ನುವ ಹಠ. ಹೀಗಾಗಿಯೇ ಪ್ರತಿ ವಿಚಾರದಲ್ಲಿ ಒಳಿತು, ಕೆಡಕಿನ ಬಗ್ಗೆ ಅವಲೋಕನ ನಡೆಯದೆ ಬರೀ ವಿರೋಧವನ್ನಷ್ಟೆ ಮಾಡಲಾಗುತ್ತಿದೆ. ಅಧಿಕಾರ ಪಡೆಯಲು ಬೇಕಾದ ಮತಗಳ ದೃಷ್ಟಿಯನ್ನಿಟ್ಟುಕೊಂಡು ನಮ್ಮ ರಾಜಕೀಯ ನಾಯಕರು ಸ್ವಾರ್ಥ ಪರ ಹೇಳಿಕೆ ಮತ್ತು ಮತದಾರರನ್ನು ಓಲೈಸುವ ಕೆಲಸ ಕಾರ್ಯಗಳನ್ನು ಮಾಡುತ್ತಾ ಹೋದರೆ ಭವ್ಯ ಭಾರತದ ಕನಸು ನನಸಾಗುವುದು ಕಷ್ಟವೇ.

ನಾಯಕರ ರಾಜಕೀಯ ತಂತ್ರಗಳು ಶುರು

ನಾಯಕರ ರಾಜಕೀಯ ತಂತ್ರಗಳು ಶುರು

ದೇಶದಲ್ಲಿ ಈಗಾಗಲೇ ಪಂಚ (ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ, ಉತ್ತರ ಪ್ರದೇಶ) ರಾಜ್ಯಗಳಲ್ಲಿ ಫೆಬ್ರವರಿಯಿಂದಲೇ ಚುನಾವಣೆಯ ಪ್ರಕ್ರಿಯೆ ಆರಂಭವಾಗಿ ಮುಗಿಯುವ ಹಂತ ತಲುಪಿದ್ದು, ಮಾ. 3 ಮತ್ತು ಮಾ.7ರಂದು ಕೊನೆಯ ಹಂತದ ಚುನಾವಣೆಯೊಂದಿಗೆ ಮಾ.10ಕ್ಕೆ ಫಲಿತಾಂಶವೂ ಬರಲಿದೆ. ಈ ನಡುವೆ ರಾಜಕೀಯ ನಾಯಕರು ಮತಕ್ಕಾಗಿ ಎಂತಹ ಹೇಳಿಕೆಗಳನ್ನು ನೀಡುತ್ತಿದ್ದರು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ.

ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬರಲಿದೆ. ಈ ಚುನಾವಣೆಗೆ ಬೇಕಾದ ತಯಾರಿಯನ್ನು ಕಾಂಗ್ರೆಸ್ ಈಗಿನಿಂದಲೇ ಮಾಡಿಕೊಂಡಿದೆ. ಆಡಳಿತ ಪಕ್ಷ ಬಿಜೆಪಿಯನ್ನು ಮಣಿಸಲು ಸರ್ವ ರೀತಿಯ ರಾಜಕೀಯ ತಂತ್ರವನ್ನು ಆರಂಭಿಸಿದೆ. ಮೊದಲ ಭಾಗವಾಗಿ ಮೇಕೆದಾಟು ಪಾದಯಾತ್ರೆ ಎರಡು ಹಂತದಲ್ಲಿ ನಡೆಯುತ್ತಿದೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೊರಟಿದ್ದಾರೆ.

ರಾಜಕೀಯಕ್ಕೆ ಉಕ್ರೇನ್ ವಿಚಾರ ಬಳಕೆ

ರಾಜಕೀಯಕ್ಕೆ ಉಕ್ರೇನ್ ವಿಚಾರ ಬಳಕೆ

ಇಲ್ಲಿ ಹೋರಾಟ ನೀರಿಗಾಗಿ ಆದರೂ ಉದ್ದೇಶ ಮಾತ್ರ ರಾಜಕೀಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಪಾದಯಾತ್ರೆಯೊಂದಿಗೆ ಶಕ್ತಿ ಪ್ರದರ್ಶನಕ್ಕೆ ಇಳಿದಿರುವ ಕಾಂಗ್ರೆಸ್ ನಾಯಕರು ಆ ಮೂಲಕ ಬಿಜೆಪಿ ಮತ್ತು ಜೆಡಿಎಸ್‌ಗೆ ಸಂದೇಶ ರವಾನಿಸುತ್ತಿದ್ದಾರೆ. ಇನ್ನು ವಿಧಾನಸಭಾ ಅಧಿವೇಶನ ಈಶ್ವರಪ್ಪರವರ ವಿಚಾರಕ್ಕೆ ವ್ಯರ್ಥವಾಗಿದೆ. ಸದ್ಯ ಆರೋಪ ಪ್ರತ್ಯಾರೋಪಗಳಲ್ಲಿ ಕಾಲ ಕಳೆದು ಹೋಗಿದೆ.

ವಿದ್ಯಾರ್ಥಿಗಳ ರಕ್ಷಣೆ ವಿಚಾರ

ವಿದ್ಯಾರ್ಥಿಗಳ ರಕ್ಷಣೆ ವಿಚಾರ

ಇದೀಗ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವ ವಿಚಾರ ಕೂಡ ಆಡಳಿತ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ. ಉಕ್ರೇನ್‌ನಲ್ಲಿ ಸಿಲುಕಿದ್ದವರನ್ನು ತಾಯ್ನಾಡಿಗೆ ಕರೆತಂದಿರುವುದಾಗಿ ಬೀಗುತ್ತಿದ್ದ ಆಡಳಿತ ಪಕ್ಷದವರಿಗೆ ಕನ್ನಡಿಗ ಹಾವೇರಿಯ ನವೀನ್ ಉಕ್ರೇನ್‌ನಲ್ಲಿ ಮೃತಪಟ್ಟ ಬಳಿಕ ಎಲ್ಲೆಡೆ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ. ನವೀನ್ ಸಾವಿಗೆ ಆಡಳಿತ ಪಕ್ಷ ಬಿಜೆಪಿಯೇ ನೇರ ಹೊಣೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಎಲ್ಲ ವಿಚಾರಗಳು ರಾಜಕೀಯ ಸ್ವರೂಪ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಂತು ಅಲ್ಲವೇ ಅಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+