ಆರ್ಟಿಇ ಅಡಿ ದಾಖಲಾದ SC/ST ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: 9, 10ನೇ ತರಗತಿಗೂ ಉಚಿತ ಶಿಕ್ಷಣ ವಿಸ್ತರಣೆ
ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ (ಆರ್ಟಿಇ) ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಸಿಹಿಸುದ್ದಿಯೊಂದನ್ನ ನೀಡಿದೆ. ಈ ಹಿಂದೆ ಆರ್ಟಿಇ ಅಡಿಯಲ್ಲಿ ಕೇವಲ 8ನೇ ತರಗತಿಯವರೆಗೆ ಮಾತ್ರ ಉಚಿತ ಶಿಕ್ಷಣ ಪಡೆಯಲು ಅವಕಾಶವಿತ್ತು. ಆದರೆ ಇದೀಗ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಹೌದು, 2025-26ನೇ ಸಾಲಿನಲ್ಲಿ 8ನೇ ತರಗತಿವರೆಗೆ ವ್ಯಾಸಂಗ ಮಾಡಿದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಅದೇ ಶಾಲೆಯಲ್ಲಿ 9 ಮತ್ತು 10ನೇ ತರಗತಿಯಲ್ಲೂ ತಮ್ಮ ವ್ಯಾಸಂಗವನ್ನು ಮುಂದುವರಿಸಲು ಅವಕಾಶ ಕಲ್ಪಿಸಿ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಅವರು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರಿಗೆ (ಡಿಡಿಪಿಐ) ಕಟ್ಟುನಿಟ್ಟಿನ ಸೂಚನೆಗಳನ್ನು ರವಾನಿಸಿದ್ದಾರೆ. ಆರ್ಟಿಇ ಅಡಿಯಲ್ಲಿ ದಾಖಲಾದ ಮಕ್ಕಳ ವಿದ್ಯಾಭ್ಯಾಸವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುವಂತೆ ಕ್ರಮ ವಹಿಸಲು ಹಾಗೂ ಈ ಸಂಬಂಧ ಶಾಲಾ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡುವಂತೆ ಸೂಚಿಸಲಾಗಿದೆ.

ಶುಲ್ಕ ಮರುಪಾವತಿಗೆ ಆದೇಶ
ಒಂದು ವೇಳೆ ಆರ್ಟಿಇ ಅಡಿ ಪ್ರವೇಶ ಪಡೆದು 2025-26ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು, ಈಗಾಗಲೇ ಅದೇ ಶಾಲೆಯಲ್ಲಿ 9ನೇ ತರಗತಿಗೆ ಪ್ರವೇಶ ಪಡೆದು ಶುಲ್ಕವನ್ನು ಪಾವತಿಸಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಆ ಶುಲ್ಕವನ್ನು ತಕ್ಷಣವೇ ಹಿಂದಿರುಗಿಸುವಂತೆ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಶುಲ್ಕ ಮರುಪಾವತಿ ಪ್ರಕ್ರಿಯೆಯಲ್ಲಿ ಆಯಾ ಜಿಲ್ಲಾ ಉಪನಿರ್ದೇಶಕರು ಖುದ್ದಾಗಿ ಗಮನಹರಿಸಿ, ವಿದ್ಯಾರ್ಥಿಗಳಿಗೆ ಶುಲ್ಕ ವಾಪಸ್ ಸಿಗುವಂತೆ ಸಹಾಯ ಮಾಡಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಟಿಸಿ ಪಡೆದವರಿಗೂ ಮುಂದುವರಿಯಲು ಅವಕಾಶ
ಕೆಲವು ಶಾಲೆಗಳಲ್ಲಿ 9 ಹಾಗೂ 10ನೇ ತರಗತಿ ಲಭ್ಯವಿದ್ದರೂ ಸಹ, ಆರ್ಟಿಇ ಅವಧಿ ಮುಗಿಯಿತು ಎಂಬ ಕಾರಣಕ್ಕೆ ಬೇರೆ ಶಾಲೆಗೆ ದಾಖಲಾತಿ ಬಯಸಿ ವರ್ಗಾವಣೆ ಪತ್ರ ಸಲ್ಲಿಸಿದ್ದಲ್ಲಿ ಅಥವಾ ಪಡೆದುಕೊಂಡಿದ್ದಲ್ಲಿ, ಅಂತಹ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಮೇರೆಗೆ ಅದೇ ಶಾಲೆಯಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಪೋಷಕರು ಒಪ್ಪಿಗೆ ಸೂಚಿಸಿದರೆ, ಅದೇ ಶಾಲೆಯಲ್ಲಿ ಉಚಿತವಾಗಿ 9 ಮತ್ತು 10ನೇ ತರಗತಿ ಓದಬಹುದಾಗಿದೆ.
ಶಿಕ್ಷಣ ಇಲಾಖೆಯ ಈ ದಿಟ್ಟ ನಿರ್ಧಾರದಿಂದಾಗಿ ಸಾವಿರಾರು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಯಾವುದೇ ಆರ್ಥಿಕ ಹೊರೆಯಿಲ್ಲದೆ ಪೂರ್ಣಗೊಳಿಸಲು ಅತ್ಯುತ್ತಮ ಅವಕಾಶ ಲಭಿಸಿದಂತಾಗಿದೆ.












Click it and Unblock the Notifications