RSS: ಆರ್‌ಎಸ್‌ಎಸ್ ನಿರ್ಬಂಧಕ್ಕೆ ಹೈಕೋರ್ಟ್ ತಡೆ: ಬಿ.ವೈ.ವಿಜಯೇಂದ್ರ ಹೇಳಿದ್ದೇನು?
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿ ಆದೇಶಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಕಾಂಗ್ರೆಸ್ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಹತ್ತಿಕ್ಕುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ರಾಜ್ಯ ಉಚ್ಛ ನ್ಯಾಯಾಲಯದ ಆದೇಶವು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಘನತೆಗೆ ಸಂದ ಗೌರವ ಎಂದಿದ್ದಾರೆ.
ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಎಂದು ಬೊಗಳೆ ಬಿಡುವ ನಕಲಿ ಕಾಂಗ್ರೆಸ್, ಸ್ವಾತಂತ್ರ್ಯಾ ನಂತರ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. 70ರ ದಶಕದ ತುರ್ತು ಪರಿಸ್ಥಿತಿ ದೇಶದ ಇತಿಹಾಸದ ಪುಟಗಳಲ್ಲಿ ಕರಾಳ ದಿನಗಳನ್ನು ಹಚ್ಚೊತ್ತಿದೆ. ತುರ್ತು ಪರಿಸ್ಥಿತಿಯ ನೆರಳಿನಲ್ಲನ್ನು ಈಗಲೂ ಹಿಂಬಾಲಿಸುವ ಕಾಂಗ್ರೆಸ್ಸಿಗರು ತಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲೆಲ್ಲ ಪ್ರಜಾಪ್ರಭುತ್ವದ ಮೇಲೆ ದೌರ್ಜನ್ಯ ನಡೆಸುವುದು, ಸಂವಿಧಾನಕ್ಕೆ ಅಪಚಾರ ಎಸಗುವುದು, ಸರ್ವಾಧಿಕಾರಿ ಧೋರಣೆ ವಿಜೃಂಭಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅದರ ಮುಂದುವರಿದ ಭಾಗವಾಗಿ ಶತಮಾನ ಪೂರೈಸಿರುವ ಆರ್‌ಎಸ್‌ಎಸ್ ಈವರೆವಿಗೂ ಒಂದು ಸಣ್ಣ ಅಹಿತಕರ ಘಟನೆಗೂ ಅವಕಾಶ ಕೊಡದೆ ಸಂಘಟಿಸುತ್ತಿರುವ ಶತಮಾನದ ಸಂಭ್ರಮಾಚರಣೆಯ ಯಶಸ್ಸನ್ನು ನೋಡಿ ವಿಪರೀತ ಕಾಂಗ್ರೆಸ್ ಹತಾಶೆಗೊಂಡಿದೆ. ಕಾಂಗ್ರೆಸ್ಸಿಗರು ಪಥಸಂಚಲನ ಹಾಗೂ ಚಟುವಟಿಕೆಗಳನ್ನು ನಿರ್ಬಂಧಿಸುವ ದುರುದ್ದೇಶದಿಂದ ಹೊರಡಿಸಿದ ಸರ್ಕಾರದ ಆದೇಶಕ್ಕೆ ಘನ ನ್ಯಾಯಾಲಯದಲ್ಲಿ ಹಿನ್ನಡೆಯಾಗುವ ಮೂಲಕ ಮುಖಭಂಗವುಂಟಾಗಿದೆ ಎಂದಿದ್ದಾರೆ.
ಆರ್‌ಎಸ್‌ಎಸ್‌ನಿಂದ ಗಲಭೆಗಳು ನಡೆದಿಲ್ಲ
ಇನ್ನಾದರೂ ಈ ಸರ್ಕಾರ ಬುದ್ಧಿ ಕಲಿಯಲಿ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸುವ ಪ್ರಯತ್ನಗಳಿಗೆ ಕೈ ಹಾಕುವ ವ್ಯರ್ಥ ಪ್ರಯತ್ನವನ್ನು ನಿಲ್ಲಿಸಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಆರ್‌ಎಸ್‌ಎಸ್ ಕುರಿತು ನ್ಯಾಯಾಲಯ ನೀಡಿರುವ ಆದೇಶ ಸಂವಿಧಾನದ ಆಶಯಕ್ಕೆ ಪೂರವಾಗಿದೆ. ಸಂಘದ ಶಾಖೆಯಿಂದ ಇದುವರೆಗೆ ಯಾವುದೇ ದೊಂಬಿ, ಗಲಭೆಗಳು ನಡೆದಿಲ್ಲ. ಸಂಘದ ಚಟುವಟಿಕೆಗಳನ್ನು ನಿಯಂತ್ರಿಸಲು ಹೊರಟ ಸರ್ಕಾರಕ್ಕೆ ನ್ಯಾಯಾಲಯದ ತೀರ್ಪಿನಿಂದ ಮುಖಭಂಗವಾಗಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ರಾಜ್ಯ ಸರ್ಕಾರದ ಪಿತೂರಿ ಸಂವಿಧಾನದ ವಿರುದ್ಧವಾಗಿದೆ. ಸರ್ಕಾರಿ ಆವರಣದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ತಡೆ ನೀಡಿದೆ. ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡು ಹೊರಡಿಸಿದ ರಾಜ್ಯ ಸರ್ಕಾರದ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದೆ. ಸಂವಿಧಾನ ವಿರೋಧಿ ನೀತಿಯನ್ನು ಪಾಲಿಸುವ ಕಾಂಗ್ರೆಸ್ ಸರ್ಕಾರಕ್ಕೆ ಇದು ಎಚ್ಚರಿಕೆಯ ಪಾಠವಾಗಿದೆ. ಸಂವಿಧಾನದ ಮೂಲ ಆಶಯಗಳನ್ನು ಗೌರವಿಸುವುದನ್ನು ಕಾಂಗ್ರೆಸ್ ಸರ್ಕಾರ ಪಾಲಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.












Click it and Unblock the Notifications