'ಗೃಹ ಲಕ್ಷ್ಮೀ' ಯೋಜನೆ 2000 ರೂಪಾಯಿ ಜಮೆ ಬೆನ್ನಲ್ಲೆ ಭಾರೀ ಗೊಂದಲ..!
ಬೆಂಗಳೂರು, ಮೇ 20: ಕರ್ನಾಟಕದಾದ್ಯಂತ ಪಂಚ ಗ್ಯಾರಂಟಿ ಪೈಕಿ ಯೋಜನೆ ಜಾರಿಗೆ ತಂದ ಕಾಂಗ್ರೆಸ್ ಸರ್ಕಾರ ಯೋಜನೆಗಳ ವಿಚಾರದಲ್ಲಿ ಆಗಾಗ ನೀಡುತ್ತಿರುವ ಹೇಳಿಕೆ ಜನರಲ್ಲಿ ಗೊಂದಲ ಉಂಟು ಮಾಡುತ್ತಿದೆ. ಸರ್ಕಾರದ ಬಳಿ ಯೋಜನೆಗಳಿಗೆ ಭರಿಸಲು ಹಣವಿಲ್ಲ ಅಂತಲೂ ದೂರಲಾಗುತ್ತಿದೆ. ಈ ಮಧ್ಯೆ ಸರ್ಕಾರ ಬೆಲೆ ಏರಿಕೆ ಮಾಡುವ ಕಾಯಕ ಮುಂದುವರಿಸಿದೆ. ಒಟ್ಟು ಸುಮಾರು ಮೂರು ತಿಂಗಳು ಗೃಹ ಲಕ್ಷ್ಮೀ ಹಣ ಬಾಕಿ ಉಳಿಸಿಕೊಂಡಿರುವ ಸರ್ಕಾರ ಒಂದು ಕಂತನ್ನು ಪಾವತಿಸಿದರೂ ಗೊಂದಲ ತಪ್ಪುತ್ತಿಲ್ಲ ಎಂಬುದು ಫಲಾನುಭವಿಗಳ ಅಳಲು.
ಹೌದು, ನೆನ್ನೆ ಸೋಮವಾರ (ಮೇ 19) ರಾಜ್ಯದ ಕೋಟ್ಯಾಂತರ ಮಹಿಳೆಯರಿಗೆ 'ಗೃಹ ಲಕ್ಷ್ಮೀ' ಯೋಜನೆ 2000 ರೂಪಾಯಿ ಒಂದು ಕಂತಿನ ಹಣ ಬಂದಿದೆ. ಬಾಕಿ ಇರುವ ಇತರ ಕಂತುಗಳ ಹಣಕ್ಕೆ ಕಾಯುತ್ತಿದ್ದಾರೆ. ಸರಿಯಾದ ಸಮಯಕ್ಕೆ ಸರ್ಕಾರ ಹಣ ಜಮೆ ಮಾಡಿ ನುಡಿದಂತೆ ನಡೆದುಕೊಳ್ಳುತ್ತಿಲ್ಲ ಎಂದು ಫಲಾನುಭವ ಮಹಿಳೆಯರು ದೂರುತ್ತಿದ್ದಾರೆ. ಇನ್ನೂ ಕೆಲವರು ಹಣ ಬಂದಾಗ ಬರಲಿ, ಒಟ್ಟಿನಲ್ಲಿ ಜಮೆ ಆದರೆ ಸಾಕು ಎಂದು ಹೇಳುತ್ತಿದ್ದಾರೆ.

ಕರ್ನಾಟಕದಾದ್ಯಂತ ಒಟ್ಟು 1.25 ಕೋಟಿ ಮಹಿಳಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮಾಸಿಕ 2000 ರೂಪಾಯಿ ಹಣ ವಿತರಿಸುತ್ತಿದೆ. ಈ ಹಣವನ್ನು ಮಹಿಳೆಯರು ಮಕ್ಕಳ ಶಿಕ್ಷಣಕ್ಕೆ, ಹಬ್ಬಕ್ಕೆ, ಪತಿಗೆ ಉಡುಗೊರೆ ಸೇರಿದಂತೆ ಮನೆ ಖರ್ಚು ನಿರ್ವಹಿಸಲು ಬಳಸುತ್ತಿದ್ದಾರೆ. ಹಣಕಾಸಿನ ಅಗತ್ಯತೆ ಮಹಿಳೆಗೆ ತಿಳಿದಿರುತ್ತದೆ. ಮನೆ ನಿರ್ವಹಣೆ ಜವಾಬ್ದಾರಿಯೇ ಆಕೆಯದ್ದಾಗಿರುತ್ತದೆ. ಹೀಗಾಗಿಯೇ ಈ ಗೃಹ ಲಕ್ಷ್ಮೀ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿದೆ.
ಫಲಾನುಭವಿಗಳಲ್ಲಿ ಗೊಂದಲವೇನು?
ಕೆಲವು ತಿಂಗಳ ಬಾಕಿ ಹಣಕ್ಕಾಗಿ ಕಾಯುತ್ತಿದ್ದವರಿಗೆ ನೆನ್ನೆ ಸೋಮವಾರ ಸರ್ಕಾರ 2000 ರೂಪಾಯಿ ಜಮೆ ಮಾಡಿ ಗುಡ್ ನ್ಯೂಸ್ ನೀಡಿದೆ. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಾವು ತಿಂಗಳು ತಿಂಗಳು ಹಣ ಹಾಕುತ್ತೇವೆ ಎಂದು ಹೇಳಿಲ್ಲ. ಆದಾಗ ಕೊಡುತ್ತೇವೆ. ಹಣ ಬಿಡುಗಡೆ ಆದಾಗ ಖಾತೆ ಜಮೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಫಲಾನುಭವಿ ಮಹಿಳೆಯರ ಗೊಂದಲಕ್ಕೆ ಕಾರಣವಾಗಿದೆ.
ಇದು ವಿಪಕ್ಷ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲು ಹೇಳುವುದು ಒಂದು ಅಧಿಕಾರಕ್ಕೆ ಬಂದ ಮೇಲೆ ಮಾಡುವುದು ಒಂದು ಎಂದು ದೂರುತ್ತಿದ್ದಾರೆ. ಅಲ್ಲದೇ ಡಿಸಿಂ ಡಿಕೆ ಶಿವಕುಮಾರ್ ಅವರ ಹೇಳಿಕೆ ಕಂಡು ಒಂದು ಕೋಟಿಗೂ ಹೆಚ್ಚು ಮಹಿಳೆಯರು ಗೊಂದಲಕ್ಕೀಡಾಗಿದ್ದಾರೆ. ಮುಂದೆ ನಮಗೆ ಹಣ ಸಿಗುವುದಿಲ್ಲವಾ? ಎಂದು ಆಲೋಚಿಸುತ್ತಿದ್ದಾರೆ. ಸರ್ಕಾರ ಹೀಗೆ ಹೇಳುತ್ತಲೇ ಯೋಜನೆ ನಿಲ್ಲಿಸುತ್ತದಾ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಉಳಿದ ಕಂತು ಆಗುವುದು ಯಾವಾಗ?
ಈ ಹಿಂದೆ ತಾಂತ್ರಿಕ ಸಮಸ್ಯೆ ಕಾರಣವೊಡ್ಡಿ ಮಹಿಳೆಯರಿಗೆ ಮಾಸಿಕ ಹಣ ಹಾಕುವುದು ತಡವಾಗಿತ್ತು. ಅಲ್ಲಿಂದ ಎರಡು, ಮೂರು ತಿಂಗಳ ಕಂತು ಬಾಕಿ ಉಳಿಯುತ್ತಲೇ ಬಂತು. ಸರ್ಕಾರ ಆ ಕಂತುಗಳನ್ನು ಒಮ್ಮೆ ಹಾಕುವುದಾಗಿ ತಿಳಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಒಮ್ಮೆಲೆ ಹಣ ಜಮೆ ಆಗುತ್ತದೆ ಎಂದಿದ್ದರು. ಆದರೆ ಒಂದೊಂದೆ ತಿಂಗಳು ಹಣ ಜಮೆ ಆಗುತ್ತಿರುವುದಕ್ಕೆ ಫಲಾನುಭವಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಉಳಿದ ಕಂತು ಜಮೆ ಆಗುವ ನಿರೀಕ್ಷೆ ಇದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications