ಸುಮಲತಾ ಜೊತೆ ಬಿಜೆಪಿ ಸೇರಿದ ರಾಕ್‌ಲೈನ್ ವೆಂಕಟೇಶ್?: ಸಭೆಗೆ ಪುತ್ರ ಅಭಿಷೇಕ್ ಅಂಬರೀಷ್ ಗೈರು
ಬೆಂಗಳೂರು, ಏಪ್ರಿಲ್ 06: 2023 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ವ್ಯಕ್ತಪಡಿಸಿದ್ದ ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು (ಶುಕ್ರವಾರ) ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸುಮಲತಾ ಜೊತೆಗೆ ಕ್ರಿಕೆಟಿಗ ದೊಡ್ಡ ಗಣೇಶ ಮತ್ತು ಕೊಪ್ಪಳ ಮಾಜಿ ಸಂಸದ ಶಿವರಾಮಗೌಡ ಕಮಲ ಹಿಡಿದಿದ್ದಾರೆ.
ಹೌದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಸುಮಲತಾ ಅಂಬರೀಶ್ ಸೇರಿದಂತೆ ಹಲವು ನಾಯಕರು ಬಿಜೆಪಿ ಸೇರಿದರು. ಇನ್ನೂ ಈ ಕಾರ್ಯಕ್ರಮದ ವೇದಿಕೆಯಲ್ಲಿ ಸುಮಲತಾ ಅವರ ಆಪ್ತರಾದ ರಾಕ್‌ಲೈನ್ ವೆಂಕಟೇಶ್ ಅವರಿಗೂ ಸಹ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಬಿಜೆಪಿ ಪಕ್ಷದ ಶಾಲು ಹಾಕಿದ್ದು, ರಾಕ್ ಲೈನ್ ವೆಂಕಟೇಶ್ ಅವರು ಸಹ ಬಿಜೆಪಿ ಸೇರ್ಪಡೆಯಾದ್ರಾ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ರಾಕ್ ಲೈನ್ ವೆಂಕಟೇಶ್ ಅವರು ಬಿಜೆಪಿ ಸೇರ್ಪಡೆ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ, ಆದರೆ, ಪಕ್ಷ ಸೇರ್ಪಡೆ ಕಾರ್ಯಕ್ರಮದ ವೇದಿಕೆಯಲ್ಲಿ ರಾಕ್ ಲೈನ್ ವೆಂಕಟೇಶ್ ಅವರು ಕಂಡು ಬಂದಿದ್ದು, ಈ ವೇಳೆ ವಿಜಯೇಂದ್ರ ಅವರು ಶಾಲು ಹಾಕಿದ್ದು, ಬಿಜೆಪಿ ಸೇರ್ಪಡೆಯಾದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಇತ್ತ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಪುತ್ರ ಅಭಿಷೇಕ್ ಗೈರಾಗಿದ್ದಾರೆ.
ಇನ್ನೂ ಬಿಜೆಪಿ ಸೇರ್ಪಡೆ ಕುರಿತು ಸುಮಲತಾ ಅಂಬರೀಶ್ ಅವರು ಮಾತನಾಡಿ, ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಆಶಯದಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಮಂಡ್ಯದ ನನ್ನ ಅಭಿಮಾನಿಗಳು, ನಟ ದಿ.ಅಂಬರೀಶ್ ಅಭಿಮಾನಿಗಳು ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದವಿರಲಿ ಎಂದು ಮಂಡ್ಯ ಸೊಸೆ ಸುಮಲತಾ ಅಂಬರೀಶ್ ಮನವಿ ಮಾಡಿದ್ದಾರೆ.
ಬಿಜೆಪಿಯ ಹಿರಿಯರಿಂದ ಮಾರ್ಗದರ್ಶನ ಲಭಿಸಿದೆ. ಅದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದರು. ಅದೇ ನನಗೆ ಸ್ಫೂರ್ತಿ ಎಂದ ಅವರು, ಪ್ರಧಾನಿ ಮೋದಿಜೀ ಅವರ ನಾಯಕತ್ವ, ಪರಿಕಲ್ಪನೆ, ಅವರ ಕನಸುಗಳು, ಸಂಕಲ್ಪವು ಹೊಸ ಸ್ಫೂರ್ತಿ, ತಿಳುವಳಿಕೆಗೆ ಕಾರಣವಾಗಿದೆ. ಬಿಜೆಪಿ ಸೇರುವುದು ಉತ್ತಮ ಆಯ್ಕೆ ಅನಿಸಿದೆ. ಇಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಸಹಕಾರವನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಒತ್ತು ಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಮುಂದಾದರು ಎಂದು ತಿಳಿಸಿದರು. ಇವತ್ತು ಅದರ ಪುನರ್ ಉದ್ಘಾಟನೆ ಆಗಿದೆ. ಇದಕ್ಕೆ ಜನರೇ ತಕ್ಕ ಉತ್ತರ ಕೊಡಬೇಕು ಎಂದು ಆಶಿಸಿದರು.
ನುಡಿದಂತೆ ನಡೆಯುವ ನಾಯಕತ್ವ ಮೋದಿಜೀ ಅವರದು. 2047ರವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾಡಲು ಸಹಕರಿಸಬೇಕಿದೆ. ನನಗೆ ನನ್ನ ಭವಿಷ್ಯಕ್ಕಿಂತ ನನ್ನ ದೇಶ, ಜಿಲ್ಲೆ, ರಾಜ್ಯ ಪ್ರಮುಖ. ಬಿಜೆಪಿ ಸೇರುವುದು ಅತ್ಯಂತ ಹೆಮ್ಮೆ- ಸಂಸಸ ತಂದಿದೆ ಎಂದು ತಿಳಿಸಿದರು.












Click it and Unblock the Notifications