Bank Robbery: ದರೋಡೆ, ಬ್ಯಾಂಕ್‌ಗಳಿಗೆ ಪೊಲೀಸರ ಸೂಚನೆಗಳು
ಬೆಂಗಳೂರು, ಜನವರಿ 22: ಕರ್ನಾಟಕದಲ್ಲಿ ಬ್ಯಾಂಕ್‌ಗಳ ದರೋಡೆ ಪ್ರಕರಣಗಳ ಬಳಿಕ ಪೊಲೀಸರು ಎಚ್ಚರವಹಿಸಿದ್ದಾರೆ. ವಿವಿಧ ಜಿಲ್ಲೆಗಳ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಗಳಲ್ಲಿರುವ ಬ್ಯಾಂಕ್ ಹಾಗೂ ಸಹಕಾರಿ ಸೊಸೈಟಿಗಳ ಮುಖ್ಯಸ್ಥರು/ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಭದ್ರತೆಯ ಕುರಿತು ಸೂಕ್ತ ಕಾನೂನು ತಿಳುವಳಿಕೆಯನ್ನು ನೀಡಿರುತ್ತಾರೆ. ಬ್ಯಾಂಕ್‌ಗಳಲ್ಲಿ ಇರುವ ಭದ್ರತೆಗಳ ಕುರಿತು ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಬ್ಯಾಂಕುಗಳ ದರೋಡೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಭದ್ರತಾ ಮಾನದಂಡದ ಜೊತೆಗೆ ಸಿಬ್ಬಂದಿಗಳ ಮಾಹಿತಿ ಸಂಗ್ರಹವನ್ನು ಮಾಡಬೇಕು ಎಂಧು ಸೂಚನೆ ನೀಡಲಾಗಿದೆ. ಬ್ಯಾಂಕಿನ ವ್ಯವಸ್ಥಾಪಕರುಗಳು ಬ್ಯಾಂಕ್‍ಗೆ ಬೇಕಾದ ಹೈಸೆಕ್ಯೂರಿಟಿ ಸಿಸಿ ಕ್ಯಾಮೆರಾಗಳ ಜೊತೆಗೆ ಅಲರಾಮ್‍ಗಳನ್ನು ಅಳವಡಿಸಿಕೊಳ್ಳಬೇಕು. ಬ್ಯಾಂಕ್‍ನ ಸೆಕ್ಯುರಿಟಿ ಸಿಬ್ಬಂದಿಯ ಮಾಹಿತಿ ಸಂಗ್ರಹದ ಜೊತೆಗೆ ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸೆಕ್ಯುರಿಟಿ ಕುರಿತು ಚರ್ಚಿಸಬೇಕು ಎಂದು ತಿಳಿಸಲಾಗಿದೆ.

ಪೊಲೀಸರ ಸೂಚನೆಗಳು: ಬ್ಯಾಂಕ್‍ನ ಒಳಗೆ ಸ್ಟ್ರಾಂಗ್ ರೂಂ, ಡಿಜಿಲಾಕರ್, ಹೀಟ್ ಡಿಟೆಕ್ಟರ್‌ಗಳು, ಬ್ಯಾಂಕುಗಳ ಬಳಿ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಬಂದಲ್ಲಿ ಅಂತಹವರ ಮಾಹಿತಿಯನ್ನು ಪೊಲೀಸ್ ಠಾಣೆಗಳಿಗೆ ನೀಡುವಂತೆ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಿಳಿಸಲಾಗಿದೆ.
ಸ್ಟ್ರಾಂಗ್ ರೂಮ್‍ಗೆ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿದಿನ ಭೇಟಿ ನೀಡುವಾಗ ನಮೂನೆಯಲ್ಲಿ ದಾಖಲು ಮಾಡಬೇಕು. ಬ್ಯಾಂಕ್‍ಗಳಿಗೆ ಪ್ರತಿದಿನ ಬೀಟ್ ಪೊಲೀಸರು ಭೇಟಿ ನೀಡುವ ಬಗ್ಗೆ ಇ-ಬೀಟ್ ವ್ಯವಸ್ಥೆ ಮಾಡಬೇಕು. ಪ್ರತಿ ಬೀಟ್ ಸಿಬ್ಬಂದಿಗಳು ಭೇಟಿ ನೀಡುತ್ತಿರುವ ಬಗ್ಗೆ ರಾತ್ರಿ ಗಸ್ತಿನ ಉಸ್ತುವಾರಿ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲನೆ ಮಾಡಲು ಸೂಚಿಸಲಾಗಿದೆ.
ಜಿಲ್ಲಾ ಕಂಟ್ರೋಲ್ ರೂಂನವರು ಪ್ರತಿದಿನ ಬ್ಯಾಂಕ್‍ಗಳಿಗೆ ಬೀಟ್ ಸಿಬ್ಬಂದಿಗಳು ಹಾಗೂ ರಾತ್ರಿ ಗಸ್ತಿನ ಅಧಿಕಾರಿಗಳು ಭೇಟಿ ನೀಡುತ್ತಿರುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ಪಡೆದು ದಾಖಲಿಸಬೇಖು. ಹೊರವಲಯಗಳಲ್ಲಿರುವ ಬ್ಯಾಂಕ್‍ಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕೆಂದು ಪೊಲೀಸರಿಗೆ ಸೂಚನೆ ಕೊಡಲಾಗಿದೆ.
ಠಾಣಾ ವ್ಯಾಪ್ತಿಯ ಪಿಐ ಮತ್ತು ಪಿಎಸ್‍ಐಗಳು ಸೆಕ್ಯೂರಿಟಿ ಆಡಿಟ್ ವರದಿಯನ್ನು ಕಡ್ಡಾಯವಾಗಿ ಪಡೆದು ಜಿಲ್ಲಾ ಪೊಲೀಸ್ ಕಚೇರಿಗೆ ಕಳುಹಿಸಿಕೊಡಬೇಕು. ಬ್ಯಾಂಕುಗಳ ಒಳಭಾಗ ಮತ್ತು ಹೊರಭಾಗದಲ್ಲಿ, ಎಟಿಎಂ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ಮೋಷನ್ ಸಿಸಿಟಿವಿಗಳನ್ನು ಅಳವಡಿಸಿ ಛಾಯಾಚಿತ್ರ ಮತ್ತು ರೆಕಾರ್ಡ್ ಆದ ದೃಶ್ಯಗಳನ್ನು ಸೇವ್ ಮಾಡುವಂತೆಯೂ ಸೂಚಿಸಲಾಗಿದೆ.
ಬೀದರ್‌ನಲ್ಲಿ ಎಸ್‌ಬಿಐ ಬ್ಯಾಂಕ್ ಎಟಿಎಂಗೆ ಹಣ ತುಂಬುವ ವಾಹನ, ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ಹಣ ದೋಚಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲ್ಲೂಕಿನ ಕೋಟೇಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ. ಸಿ. ರೋಡ್ ಶಾಖೆಗೆ ನುಗ್ಗಿದ ಗುಂಪು ಚಿನ್ನಾಭರಣ, ನಗದು ದರೋಡೆ ಮಾಡಿತ್ತು.
ಈ ಪ್ರಕರಣಗಳ ಬಳಿಕ ಪೊಲೀಸರು ಬ್ಯಾಂಕ್‌ಗಳ, ವ್ಯವಸಾಯ ಸೇವಾ ಸಹಕಾರ ಸಂಘಗಳ ಭದ್ರತೆಯ ಕುರಿತು ಹೆಚ್ಚಿನ ನಿಗಾವಹಿಸಿದ್ದಾರೆ. ಭದ್ರತಾ ವ್ಯವಸ್ಥೆಯ ಬ್ಯಾಂಕ್ ಸಿಬ್ಬಂದಿಗಳಿಗೆ ಮಾಹಿತಿಗಳನ್ನು ನೀಡುತ್ತಿದ್ದಾರೆ.
ಈ ದರೋಡೆ ಪ್ರಕರಣಗಳ ಬಳಿಕ ಪ್ರತಿಪಕ್ಷಗಳು ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಟೀಕಿಸಿದ್ದವು. ಬಿಜೆಪಿ, 'ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಕರ್ನಾಟಕದಲ್ಲಿ ಕ್ರೈಂ ಹೆಚ್ಚಿದೆ. ಬೀದರ್‌ನಿಂದ ಚಾಮರಾಜನಗರವರೆಗೂ ಕರ್ನಾಟಕ ಫುಲ್ ಕ್ರೈಂಮಯಂ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅರಾಜಕತೆಯ ಆಡಳಿತದ ಪರಿಣಾಮದಿಂದ ರಾಜ್ಯದೆಲ್ಲೆಡೆ ಕೊಲೆ-ಸುಲಿಗೆ-ದರೋಡೆ-ಅತ್ಯಾಚಾರಗಳು ನಡೆಯುತ್ತಿವೆ.ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರೇ, ಇದೇನಾ ನಿಮ್ಮ ಅಸಲಿ ಕರ್ನಾಟಕ ಮಾಡೆಲ್?' ಎಂದು ಪ್ರಶ್ನೆ ಮಾಡಿದ್ದವು.












Click it and Unblock the Notifications