Rice Price Hike: ಅಕ್ಕಿ ಬೆಲೆ 10 ರೂಪಾಯಿ ಹೆಚ್ಚಳ ಸಾಧ್ಯತೆ, ಇದಕ್ಕೆ ಕಾರಣ ಇಲ್ಲಿದೆ
ರಾಜ್ಯದ ಜನತೆಗೆ ಆತಂಕಕಾರಿ ಸುದ್ದಿಯೊಂದು ಇಲ್ಲಿದೆ. ಈಗಾಗಲೇ ಎಲ್ಲ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ದುಬಾರಿ ಜೀವನ ನಡೆಸುವುದು ಕಷ್ಟ ಎಂದು ಜನಸಾಮಾನ್ಯರು ಒದ್ದಾಡುತ್ತಿದ್ದಾರೆ. ಈಗ ರಾಜ್ಯದಲ್ಲಿ ಅಕ್ಕಿ ಬೆಲೆ ದಿಢೀರ್ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಅಕ್ಕಿ ಪ್ರತಿ ಕೆ.ಜಿ.ಗೆ 10 ರೂಪಾಯಿವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ದಿಢೀರ್ ಬೆಲೆ ಏರಿಕೆಗೆ ಕಾರಣವೇನು? ಎನ್ನುವ ಮಾಹಿತಿ ಇಲ್ಲಿದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಈ ಬಾರಿ ಎರಡನೇ ಬೆಳೆಗೆ ನೀರು ಹರಿಸದೆ ಇರುವ ಕಾರಣದಿಂದ 20 ಲಕ್ಷ ಟನ್ ಅಕ್ಕಿ ಉತ್ಪಾದನೆ ಖೋತಾ ಆಗಲಿದೆ. ಇದರಿಂದ ಅಕ್ಕಿ ಗಿರಣಿ ಉದ್ಯಮವು ನೆಲಕಚ್ಚಲಿದೆ. ಅಲ್ಲದೆ, ರೈತರಿಗೂ ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಕಳವಳ ವ್ಯಕ್ತಪಡಿಸಿದ್ದಾರೆ.

ಗಿರಣಿಯನ್ನೇ ನಂಬಿಕೊಂಡಿರುವ ಕಾರ್ಮಿಕರು ಗುಳೆ ಹೋಗುವ ಸಂದರ್ಭ ಎದುರಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ತಜ್ಞ ಅಭಿಯಂತರರು, ವಿಷಯ ಪರಿಣಿತರ ಸಲಹೆ ಪಡೆದು, ಸಕಾಲದಲ್ಲಿ ಗೇಟ್ ದುರಸ್ತಿ ಮಾಡಬೇಕಾಗಿದ್ದ ಸರ್ಕಾರವು ಈ ವಿಷಯದಲ್ಲಿ ಸಂಪೂರ್ಣವಾಗಿ ಎಡವಿದೆ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ನೀರಾವರಿ ಸಚಿವರ ಅಸಮರ್ಥತೆ, ರೈತ ವಿರೋಧಿ ಧೋರಣೆಯಿಂದ ಈ ಸಮಸ್ಯೆಯು ಉಲ್ಬಣವಾಗಿದೆ. ಬೇಸಿಗೆ ಬೆಳೆಗೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸದೆ ಇರುವುದರಿಂದ ಅಕ್ಕಿಯ ಬೆಲೆ 10 ರೂಪಾಯಿವರೆವಗೆ ಹೆಚ್ಚಾಗಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಚ್ಚರಿಕೆ ನೀಡಿದ್ದಾರೆ.
ಅಕ್ಕಿ ದರ ಏರಿಕೆಗೆ ರಾಜ್ಯ ಸರ್ಕಾರ ಹೊಣೆ?
ರಾಜ್ಯಕ್ಕೆ ಇಪ್ಪತ್ತು ಲಕ್ಷ ಟನ್ ಅಕ್ಕಿ ಉತ್ಪಾದನೆ ಖೋತಾ ಆಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಈ ಬಾರಿ ಅಕ್ಕಿ ಉತ್ಪಾದನೆ ಖೋತಾ ಆಗಲಿದ್ದು, ಭತ್ತವನ್ನೇ ನಂಬಿಕೊಂಡಿದ್ದ ಬಳ್ಳಾರಿ, ರಾಯಚೂರು ಸೇರಿ 60ಕ್ಕೂ ಹೆಚ್ಚು ಅಕ್ಕಿ ಗಿರಣಿಗಳ ಉದ್ಯಮಕ್ಕೆ ಪೆಟ್ಟು ನೀಡಿದೆ. ತುಂಗಭದ್ರಾ ಜಲಾಶಯ ಅವಲಂಬಿಸುವ ಕೃಷಿ ಭೂಮಿಯು ರಾಜ್ಯದ ಅನ್ನದ ಬಟ್ಟಲು ಎಂದೇ ಖ್ಯಾತಿ ಪಡೆದಿದೆ. ರಾಜ್ಯದಲ್ಲಿ ಪ್ರತಿ ವರ್ಷ ಉತ್ಪಾದನೆಯಾಗುವ ಅಕ್ಕಿಯು ವಿಜಯನಗರ, ರಾಯಚೂರು ಅಚ್ಚುಕಟ್ಟು ಪ್ರದೇಶದಿಂದಲೇ ಉತ್ಪಾದನೆಯಾಗುತ್ತದೆ. ಇಲ್ಲಿನ ಸೋನಾ ಮಸೂರಿ ಅಕ್ಕಿಗೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶದಲ್ಲೂ ಬೇಡಿಕೆ ಇದೆ. ಹೀಗಾಗಿ ಪ್ರತಿವರ್ಷವೂ ಇಲ್ಲಿನ ಅಚ್ಚುಕಟ್ಟು ಪ್ರದೇಶ ನಿಗದಿಗಿಂತಲೂ ಹೆಚ್ಚಾಗುತ್ತಲೇ ಇದೆ ಎಂದು ವರದಿಯಾಗಿದೆ.
ಪ್ರಸಕ್ತ ವರ್ಷ ಎರಡನೆ ಬೆಳೆಗೆ ನೀರು ಹರಿಸಲಾಗದು ಎನ್ನುವುದನ್ನು ಸರ್ಕಾರ ಘೋಷಣೆ ಮಾಡಿದೆ. ನೀರಿನ ಅಭಾವ, ಗೇಟುಗಳ ದುರಸ್ತಿ ಹಿನ್ನೆಲೆಯಲ್ಲಿ ನೀರು ಬಂದ್ ಮಾಡುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಹೋರಾಟಗಳು ಕೂಡ ಶುರುವಾಗಿವೆ. ಸರ್ಕಾರ ದುರಸ್ತಿ ಕೈಗೆತ್ತಿಕೊಂಡು ನೀರು ಹರಿಸಬೇಕಿತ್ತು. ನೀರು ಹರಿಸದೇ ಇರುವ ಕಾರಣದಿಂದ ರೈತರು ಬಹಳ ಸಂಕಷ್ಟಕ್ಕೆ ಸಿಲುಕುತ್ತಾರೆ. ಅಲ್ಲೆ ಭತ್ತದ ಉದ್ಯಮ, ಅಕ್ಕಿ ಗಿರಣಿ ಉದ್ಯಮವೂ ನೆಲಕಚ್ಚಿ ಅಕ್ಕಿ ದರವೂ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅಕ್ಕಿಯು ಪ್ರತಿ ಕೆ.ಜಿಗೆ ಕನಿಷ್ಠ 5-10 ರೂಪಾಯಿವರೆಗೆ ಏರಲಿದೆ.












Click it and Unblock the Notifications