ಗೋಹತ್ಯೆ ನಿಷೇಧ ಮಸೂದೆ ಹಿಂಪಡೆದು, ಮುಸ್ಲಿಂ ಮೀಸಲಾತಿ ಮರುಸ್ಥಾಪಿಸಿ; ಕಾಂಗ್ರೆಸ್ ಸರ್ಕಾರಕ್ಕೆ ಚೇತನ್ ಅಹಿಂಸಾ ಮನವಿ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳೊಂದಿಗೆ ಪೂರ್ಣ ಬಹುಮತ ಗಳಿಸಿದ ಕಾಂಗ್ರೆಸ್ ಪಕ್ಷ ಭಾನುವಾರ, ಮೇ 20ರಂದು ನೂತನ ಸರ್ಕಾರ ರಚಿಸಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಗಿ ಡಿ.ಕೆ. ಶಿವಕುಮಾರ್ ಮತ್ತು 28 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆದ ತೀವ್ರ ಸ್ಪರ್ಧೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ವರಿಷ್ಠರು ಅನುಭವಿ ಸಿದ್ದರಾಮಯ್ಯಗೆ ಮಣೆ ಹಾಕಿತು. ಇದು 30:30 ಫಾರ್ಮುಲಾ ಆಗಿದ್ದು, ಮೊದಲ 30 ತಿಂಗಳು ಸಿದ್ದರಾಮಯ್ಯ ಸಿಎಂ ಆಗಲಿದ್ದರೆ, ನಂತರದ ಅವಧಿಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ.

ಇದೇ ವೇಳೆ ಹೊಸ ಸರ್ಕಾರದ ಮುಂದೆ ನಟ, ಹೋರಾಟಗಾರ ಚೇತನ್ ಅಹಿಂಸಾ ಬೇಡಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಅವರು ತಕ್ಷಣ ಮಾಡಬೇಕಾದ ಕಾರ್ಯಗಳು ಇಲ್ಲವೆ ಎಂದು ತಿಳಿಸಿದ್ದಾರೆ.
ಚುನಾವಣೆಗೂ ಮುನ್ನ ಘೋಷಿಸಿದ ಎಲ್ಲಾ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ನಟ ಚೇತನ್ ಅಹಿಂಸಾ ಅಸ್ತಿತ್ವಕ್ಕೆ ಬರಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) May 18, 2023
ಇನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ವಿರೋಧಿ ಮಸೂದೆ, ಮತಾಂತರ ವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು. ಅಲ್ಲದೆ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರದ್ದು ಮಾಡಿದ್ದ ಶೇ.4 ಮುಸ್ಲಿಮರ ಮೀಸಲಾತಿಯನ್ನು ಪುನಃ ಸ್ಥಾಪಿಸಬೇಕು ಎಂದು ಸಿದ್ದರಾಮಯ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಜಾತಿ ಗಣತಿಯನ್ನು ಬಹಿರಂಗಪಡಿಸಬೇಕು ಎಂದು ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.
ಪರಿಶಿಷ್ಟ ಪಂಗಡ (ಎಸ್‌ಟಿ) ಒಳ ಮೀಸಲಾತಿ ಮತ್ತು ಖಾಸಗಿ ವಲಯದ ಮೀಸಲಾತಿಯನ್ನು (ಜಾತಿ-ಪ್ರದೇಶ-ಇತ್ಯಾದಿ) ಜಾರಿಗೊಳಿಸಬೇಕು ಎಂದು ಚೇತನ್ ಅಹಿಂಸಾ ಒತ್ತಾಯ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಚರ್ಚೆಯ ಬಳಿಕ ಗೋಹತ್ಯೆ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಚೇತನ್ ಅಹಿಂಸಾ ಈ ಕಾಯ್ದೆಯನ್ನು ವಿರೋಧಿಸಿದ್ದರು. ಅಲ್ಲದೆ ಮತಾಂತರ ನಿಷೇಧ ಕಾಯ್ದೆಯೂ ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು.
ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದರಿಂದ ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಚೇತನ್ ಅಹಿಂಸಾ ಹೋರಾಟ ಮಾಡಿದ್ದರು. ಆಗ ಸರ್ಕಾರವು ಮತಾಂತರಕ್ಕೆ ಒಪ್ಪಿಗೆ ಇದ್ದು, ಬಲವಂತದ ಮತಾಂತರ ಮಾಡುವುದರ ವಿರುದ್ಧ ಕಠಿಣ ಕ್ರಮ ಎಂದು ಸಮರ್ಥಿಸಿಕೊಂಡಿತ್ತು.
ಸಿದ್ದರಾಮಯ್ಯ ಅವರ ಆಡಳಿತದ ಕಾಲದಲ್ಲಿಯೇ ಜಾತಿ ಗಣತಿ ಮಾಡಲಾಗಿತ್ತು. ಆದರೆ ಅದನ್ನು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ, ಬಿಜೆಪಿ ಸರ್ಕಾರ ಈವರೆಗೂ ಬಹಿರಂಗಪಡಿಸಿರಲಿಲ್ಲ. ಇದೀಗ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದರಿಂದ ಜಾತಿ ಗಣತಿಯನ್ನು ಬಹಿರಂಗಪಡಿಸಬೇಕೆಂದು ಚೇತನ್ ಅಹಿಂಸಾ ಒತ್ತಾಯಿಸಿದ್ದಾರೆ.












Click it and Unblock the Notifications