ಪಂಚಮಸಾಲಿ ಹೋರಾಟ ತೀವ್ರ: ವಿಭೂತಿ, ಲಿಂಗ ಧರಿಸಿದವರ ಸಮಸ್ಯೆ ಕುಂಕುಮ ಇಟ್ಟುಕೊಂಡ ಸಿಎಂಗೆ ತಿಳಿಯುತ್ತಿಲ್ಲ
ಬೆಂಗಳೂರು, ಫೆ 17: ಮೀಸಲಾತಿಗಾಗಿ ಕುರುಬ ಸಮುದಾಯದ ಪಾದಯಾತ್ರೆ ಮತ್ತು ಬೃಹತ್ ಸಮಾವೇಶ ಮುಗಿಯುತ್ತಿದ್ದಂತೆಯೇ, ಪಂಚಮಶಾಲಿ ಹೋರಾಟ ಕಾವನ್ನು ಪಡೆಯುತ್ತಿದೆ.
ಇದೇ ಬರುವ ಭಾನುವಾರ (ಫೆ 21) ರಾಜಧಾನಿಯಲ್ಲಿ ಬೃಹತ್ ರ‍್ಯಾಲಿ ಮತ್ತು ಸಮಾವೇಶ ನಡೆಯಲಿದೆ. ಸುಮಾರು ಹತ್ತು ಲಕ್ಷ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಒಂದು ತಪ್ಪು ಹೆಜ್ಜೆ ಪಕ್ಷಕ್ಕೆ ಮುಳುವಾದೀತು: ಬಿಎಸ್ವೈಗೆ ಹೈಅಲರ್ಟ್ ಆಗಿರುವಂತೆ ಬಿಜೆಪಿ ವರಿಷ್ಠರ ಸೂಚನೆ
ಸಮುದಾಯಕ್ಕೆ 2A ಮೀಸಲಾತಿಗಾಗಿ ನಡೆಯುತ್ತಿರುವ ಈ ಹೋರಾಟದ ಸಮಾವೇಶ ನಂದಿ ಗ್ರೌಂಡ್ಸ್ ನಲ್ಲಿ ನಡೆಸಬೇಕೋ ಅಥವಾ ಅರಮನೆ ಮೈದಾನದಲ್ಲಿ ನಡೆಸಬೇಕೋ ಎನ್ನುವ ಗೊಂದಲಕ್ಕೆ ತೆರೆಬಿದ್ದಿದೆ. ಈ ಸಮಾವೇಶ ಅರಮನೆ ಮೈದಾನದಲ್ಲಿ ನಡೆಯಲಿದೆ.
ಶಾಂತಿಯುತವಾಗಿ ಪಾದಯಾತ್ರೆ ಮೂಲಕ ಬಂದು ಸರಕಾರಕ್ಕೆ ಮನವಿ ಸಲ್ಲಿಸಿದರೂ, ನಮ್ಮ ಮನವಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎನ್ನುವ ಸಮುದಾಯದ ಪೀಠಾಧಿಪತಿಗಳ ಅಸಮಾಧಾನದಿಂದಾಗಿ, ಈ ಹೋರಾಟ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯಿದೆ. ವಿಭೂತಿ, ರುದ್ರಾಕ್ಷಿ ಹಾಕಿಕೊಂಡವರ ಸಮಸ್ಯೆ ಸಿಎಂಗೆ ತಿಳಿಯುತ್ತಿಲ್ಲ ಎಂದು ಸಮುದಾಯದ ಪೀಠಾಧಿಪತಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮೀಸಲಾತಿಗಾಗಿ ಮಠಾಧೀಶರ ಸಭೆಯ ಮಾಸ್ಟರ್ ಮೈಂಡ್ ವಿಜಯೇಂದ್ರ?

ವಿಧಾನಸೌಧದ ವರೆಗೆ ಪಾದಯಾತ್ರೆ
"ಫೆಬ್ರವರಿ 21ರಂದು ಅರಮನೆ ಮೈದಾನದಲ್ಲಿ ಸಮಾವೇಶದ ನಂತರ ವಿಧಾನಸೌಧದ ವರೆಗೆ ಪಾದಯಾತ್ರೆಯೂ ನಡೆಯಲಿದೆ. ಸರಕಾರ ವಿಳಂಬ ಧೋರಣೆ ತೋರುತ್ತಿರುವುದು ಸರಿಯಲ್ಲ. ನಾವು ಶಾಂತಿಯುತವಾಗಿ ಪಾದಯಾತ್ರೆ ಮಾಡಿಕೊಂಡು ಬಂದಿದ್ದೇವೆ"ಎಂದು ಈ ಹೋರಾಟದ ನೇತೃತ್ವ ವಹಿಸಿಕೊಂಡಿರುವ ಬಸವ ಶ್ರೀಜಯ ಮೃತ್ಯುಂಜಯಸ್ವಾಮಿ ಹೇಳಿದ್ದಾರೆ.

ಕುಂಕುಮ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳಿಗೆ ತಿಳಿಯುತ್ತಿಲ್ಲ
"ವಿಭೂತಿ, ರುದ್ರಾಕ್ಷಿ, ಲಿಂಗ ಧರಿಸಿರುವವರ ಸಮಸ್ಯೆಗಳು ಏನೆಂಬುದು ಹಣೆಯಲ್ಲಿ ಕುಂಕುಮ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳಿಗೆ ತಿಳಿಯುತ್ತಿಲ್ಲ. ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಶಾಂತಿಯುತವಾಗಿ ಮಾಡಿಕೊಂಡು ಬಂದಿದ್ದೇವೆ"ಎಂದು ಬಸವಶ್ರೀಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

ನಮ್ಮ ವಿವಿಧ ಬೇಡಿಕೆಗಳು
ನಮ್ಮ ವಿವಿಧ ಬೇಡಿಕೆಗಳು ಸಮುದಾಯಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ಸರಕಾರದ ಪ್ರತಿನಿಧಿಗಳಿಗೆ ಹಲವು ಬಾರಿ ಅರ್ಥ ಮಾಡಿಸಿದ್ದೇವೆ. ಆದರೂ, ಸರಕಾರ ಉದಾಸೀನತೆಯನ್ನು ತೋರಿಸುತ್ತಿದೆ. ಮುಖ್ಯಮಂತ್ರಿಗಳು ನಮ್ಮವರು ಎನ್ನುವ ಕಾರಣಕ್ಕಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ"ಎಂದು ಶ್ರೀಗಳು ಹೇಳಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ
"ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಚಾರವನ್ನು ಸಮುದಾಯದ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲೇ ನಮ್ಮ ಬೇಡಿಕೆ ಈಡೇರಬೇಕು. ಫೆಬ್ರವರಿ 21ಕ್ಕೆ ಮುನ್ನ ಮೀಸಲಾತಿಯ ವಿಚಾರದಲ್ಲಿ ಸಕಾರಾತ್ಮಕ ನಿರ್ಧಾರವನ್ನು ತೆಗೆದುಕೊಂಡರೆ, ಸಿಎಂಗೆ ಕರದಂಟು ತಿನ್ನಿಸಲಾಗುವುದು"ಎಂದು ಶ್ರೀಗಳು ಹೇಳಿದ್ದಾರೆ.