Government Employee: ಸರ್ಕಾರಿ ನೌಕರರ ಒಪಿಎಸ್ ಬೇಡಿಕೆ, ಇನ್ನೂ ವರದಿ ನಿರೀಕ್ಷೆಯಲ್ಲಿರುವ ಸರ್ಕಾರ
ಬೆಂಗಳೂರು, ಜುಲೈ 20: ಕರ್ನಾಟಕದ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆ (ಹೊಸ ಪಿಂಚಣಿ)ಯನ್ನು ರದ್ದುಪಡಿಸಿ ಹಳೇ ಪಿಂಚಣೆ ಯೋಜನೆ ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್‌ನಲ್ಲಿ ಉತ್ತರವನ್ನು ನೀಡಿದ್ದಾರೆ.
ಎಸ್. ವೈ. ಸಂಕನೂರ (ಪದವೀಧರರ ಕ್ಷೇತ್ರದಿಂದ ಚುನಾಯಿತರಾದವರು), ಶಶೀಲ್ ಜಿ. ನಮೋಶಿ (ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾದವರು), ನಿರಾಣಿ ಹಣಮಂತ ರುದ್ರಪ್ಪ (ಪದವೀಧರರ ಕ್ಷೇತ್ರದಿಂದ ಚುನಾಯಿತರಾದವರು), ಸುನಿಲ್ ವಲ್ಯಾಪುರ್ (ವಿಧಾನ ಸಭೆಯಿಂದ ಚುನಾಯಿತರಾದವರು) ಹಾಗೂ ಪ್ರತಾಪ್ ಸಿಂಹ ನಾಯಕ್ (ವಿಧಾನ ಸಭೆಯಿಂದ ಚುನಾಯಿತರಾದವರು) ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸಿದ್ದಾರೆ.

ವಿವಿಧ ಸದಸ್ಯರು ರಾಜ್ಯ ಸರ್ಕಾರಿ ನೌಕರರಿಗೆ 7ನೇ ಪರಿಷ್ಕೃತ ವೇತನ ಶ್ರೇಣಿಗಳನ್ನು ನೀಡುವ ಕುರಿತಂತೆ ಕುರಿತಂತೆ ಸರ್ಕಾರ ಯಾವ ದಿನಾಂಕ/ ವರ್ಷದಂದು ವೇತನ ಆಯೋಗವನ್ನು ರಚನೆ ಮಾಡಿದೆ ಮತ್ತು ವರದಿಯನ್ನು ಸಲ್ಲಿಸಲು ನಿಗದಿಪಡಿಸಿದ ಅವಧಿ ಎಷ್ಟು? ಎಂದು ಪ್ರಶ್ನಿಸಿದ್ದರು.
ಉತ್ತರದಲ್ಲಿ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಯ ಕುರಿತಂತೆ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ 6 ತಿಂಗಳೊಳಗೆ ರಾಜ್ಯ ಸರ್ಕಾರಕ್ಕೆ ಸೂಕ್ತ ವರದಿಯನ್ನು ಸಲ್ಲಿಸಲು ದಿನಾಂಕ 19/11/2022ರ ಸರ್ಕಾರಿ ಆದೇಶದಲ್ಲಿ ತ್ರಿಸದಸ್ಯರ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶ ಹೊರಡಿಸಲಾಗಿರುತ್ತದೆ. ನಂತರ ದಿನಾಂಕ 6/11/2023 ಅದೇಶದಲ್ಲಿ ಆಯೋಗದ ಕಾಲಾವಧಿಯನ್ನು ದಿನಾಂಕ15/3/2024ರವರೆಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘ ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಮತ್ತು ಇನ್ನುಳಿದ ಎರಡು ಬೇಡಿಕೆಗಳನ್ನು ಇದೇ ಜುಲೈ ಕೊನೆಯ ವಾರದೊಳಗೆ ಈಡೇರಿಸದಿದ್ದಲ್ಲಿ ಆಗಸ್ಟ್ ತಿಂಗಳಿನಿಂದ ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಅಸಹಕಾರ ಚಳವಳಿ ಆರಂಭಿಸುವ ಬಗ್ಗೆ ನಿರ್ಣಯ ಕೈಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂದು ಪ್ರಶ್ನಿಸಲಾಗಿತ್ತು.
ಉತ್ತರ ನೀಡುವಾಗ ಸರ್ಕಾರ ಹೌದು, ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯಗಳು ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ, 7ನೇ ರಾಜ್ಯ ವೇತನ ಆಯೋಗವು ಸಲ್ಲಿಸಿರುವ ವರದಿಯಲ್ಲಿನ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆಗಳು ಮತ್ತು ಪಿಂಚಣಿಯನ್ನು ದಿನಾಂಕ 01/07/2022ರಿಂದ ಪರಿಷ್ಕರಿಸಿ ದಿನಾಂಕ 1/6/2024ರಿಂದ ಅನುಷ್ಠಾನಗೊಳಿಸಲು ದಿನಾಂಕ 15/07/2024ರ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ಎನ್‌ಪಿಎಸ್ ರದ್ದುಗೊಳಿಸುವುದು: 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲು ಮತ್ತು ಇನ್ನುಳಿದ ಎರಡು ಬೇಡಿಕೆಗಳಾದ ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿ ಹಾಗೂ ನೌಕರರ ಕುಟುಂಬಕ್ಕೆ ಉಚಿತ ಆರೋಗ್ಯ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಯಾವ ರೀತಿಯ ನಿರ್ಧಾರ ಕೈಗೊಂಡಿದೆ (ವಿವರವಾದ ಮಾಹಿತಿ ನೀಡುವುದು) ಎಂದು ಪ್ರಶ್ನಿಸಲಾಗಿತ್ತು.
ಉತ್ತರದಲ್ಲಿ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ, ಈಗಾಗಲೇ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯ ಅನುಷ್ಠಾನ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ಸಮಿತಿಯನ್ನು ರಚಿಸಿ ದಿನಾಂಕ 1/3/2023ರಂದು ಆದೇಶಿಸಲಾಗಿರುತ್ತದೆ. ಸರ್ಕಾರವು ಸಮಿತಿಯ ವರದಿಯ ನಿರೀಕ್ಷೆಯಲ್ಲಿರುತ್ತದೆ ಎಂದು ಹೇಳಿದ್ದಾರೆ.
ಮುಂದುವರೆದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವಲಂಭಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ಕರ್ನಾಟಕ ಅರೋಗ್ಯ ಸಂಜೀವಿ ಯೋಜನೆಯನ್ನು ಅನುಷ್ಠಾನಗೊಳಿಸಲು ಈಗಾಗಲೇ ಆದೇಶಗಳನ್ನು ಹೊರಡಿಸಲಾಗಿರುತ್ತದೆ.
ರಾಜ್ಯ ಸರ್ಕಾರದ ಆರೋಗ್ಯ ಯೋಜನೆಯು ಅನುಷ್ಠಾನದ ಹಂತದಲ್ಲಿದ್ದು, ವಿವಿಧ ಆಸ್ಪತ್ರೆಗಳೊಂದಿಗಿನ ಓಡಂಬಡಿಕೆ ಕಾರ್ಯಗಳು ಹಾಗೂ ದತ್ತಾಂಶ ಕ್ರೋಢೀಕರಣೆ ಮತ್ತು ನಿರ್ವಹಣೆಯ ತಂತ್ರಾಂಶ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿರುತ್ತವೆ ಎಂದು ಉತ್ತರದಲ್ಲಿ ವಿವರಣೆ ನೀಡಲಾಗಿದೆ.












Click it and Unblock the Notifications