Government Employee: OPS ಹೋರಾಟ, ಸರ್ಕಾರಿ ನೌಕರರ ಮುಂದಿನ ನಡೆ ಏನು?
ಬೆಂಗಳೂರು, ಜುಲೈ 27: ರಾಷ್ಟ್ರೀಯ ಪಿಂಚಣಿ ಯೋಜನೆ (ಹೊಸ ಪಿಂಚಣಿ) ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂಬುದು ಕರ್ನಾಟಕದ ಸರ್ಕಾರಿ ನೌಕರರ ಬೇಡಿಕೆಯಾಗಿದೆ. ಈ ಕುರಿತು ಆದೇಶ ಹೊರಡಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ವೃಂದ ಸಂಘಗಳ ಪದಾಧಿಕಾರಿಗಳ ಸಭೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ನೇತೃತ್ವದಲ್ಲಿ ನಡೆಯಿತು.

ಈ ಸಭೆಯಲ್ಲಿ ಹಳೇ ಪಿಂಚಣಿ ಯೋಜನೆಗಾಗಿ ಸರ್ಕಾರಿ ನೌಕರರ ಮುಂದಿನ ಹೋರಾಟವೇನು? ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಪ್ರಕಟಣೆ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಾಹಿತಿಯನ್ನು ನೀಡಿದೆ.
ನೌಕರರ ಮುಂದಿನ ನಡೆ ಏನು?: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ವೃಂದ ಸಂಘಗಳ ಪದಾಧಿಕಾರಿಗಳ ಆದ್ಯ ಗಮನಕ್ಕೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.
ರಾಜ್ಯ 7ನೇ ವೇತನ ಆಯೋಗದ ವರದಿ ಅನುಷ್ಠಾನ ಹಾಗೂ NPS to OPS ಕುರಿತಂತೆ ದಿನಾಂಕ 23/7/2024ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ವೃಂದ ಸಂಘಗಳ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಎಂದು ಸಭೆಯ ವಿವರ ನೀಡಲಾಗಿದೆ.
* ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ದಿನಾಂಕ 22/07/2024ರಂದು ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲು ನಿರ್ಣಯಿಸಲಾಯಿತು.
* ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಭಾಗವಾಗಿ ಸರ್ಕಾರದ ಉನ್ನತ ಅಧಿಕಾರಿಗಳ ತಂಡ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ಈಗಾಗಲೇ ಕ್ರಮವಹಿಸುತ್ತಿದೆ. ಶೀಘ್ರದಲ್ಲೇ ವರದಿ ಪಡೆದು ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿರುತ್ತಾರೆ.
* ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನದಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಆಗಸ್ಟ್ ತಿಂಗಳಲ್ಲಿ ಯೋಜನೆಯನ್ನು ಜಾರಿಗೊಳಿಸುವ ಭರವಸೆಯನ್ನು ಸರ್ಕಾರ ನೀಡಿರುತ್ತದೆ.
ನಮ್ಮ ಸಂಘದ ಹೋರಾಟದ ನಿರ್ಣಯದ ಭಾಗವಾಗಿ ಈಗಾಗಲೇ ಸನ್ಮಾನ್ಯ ಮುಖ್ಯಮಂತ್ರಿಗಳು 7ನೇ ವೇತನ ಆಯೋಗದ ಜಾರಿ ಆದೇಶ ಹೊರಡಿಸಿರುವುದರಿಂದ ಹಾಗೂ ಉಳಿದ ಎರಡು ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟ ಭರವಸೆಯನ್ನು ನೀಡಿರುವ ಹಿನ್ನೆಲೆಯಲ್ಲಿ ದಿನಾಂಕ 29/7/2024ರಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಮುಂದುವರೆದು, ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ಆದೇಶ ಹೊರಡಿಸಿರುವುದರಿಂದ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನಮ್ಮಭಿಮಾನದ ಅಭಿನಂದನಾ ಕಾರ್ಯಕ್ರಮವನ್ನು ಆಗಸ್ಟ್ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲು ಸಭೆ ನಿರ್ಣಯಿಸಿರುತ್ತದೆ.
ಎನ್. ಪಿ. ಎಸ್. ರದ್ದುಪಡಿಸಿ ಓ. ಪಿ. ಎಸ್ ಮರುಸ್ಥಾಪಿಸುವುದು ಹಾಗೂ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಸಮಸ್ಯೆಗಳ ಕುರಿತಂತೆ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ 'ಕಾರ್ಯಾಗಾರ' ಆಯೋಜಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಓ. ಪಿ. ಎಸ್. ಮರುಸ್ಥಾಪನೆ ಹಾಗೂ ಪದವೀಧರ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಬೇಡಿಕೆಗಳ ಬಗ್ಗೆ ಕಾರ್ಯಾಗಾರದಲ್ಲಿ ಕಂಡುಕೊಂಡ ಪರಿಹಾರೋಪಾಯಗಳನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬೇಡಿಕೆ ಈಡೇರಿಸಲು ಹಕ್ಕೊತ್ತಾಯ ಮಂಡಿಸಲು ತೀರ್ಮಾನಿಸಲಾಯಿತು ಎಂದು ಸಂಘ ತಿಳಿಸಿದೆ.












Click it and Unblock the Notifications