ಬಿಹಾರ ಫಲಿತಾಂಶದ ನಂತರ ಅಚಲ ವಿಶ್ವಾಸದಲ್ಲಿ ಕುಮಾರಸ್ವಾಮಿ
ಹುಬ್ಬಳ್ಳಿ, ನ 10: ಬಿಹಾರದ ಚುನಾವಣಾ ಫಲಿತಾಂಶ ರಾಷ್ಟ್ರೀಯ ಪಕ್ಷಗಳಿಗೆ ಎಚ್ಚರಿಕೆಯ ಗಂಟೆ. ಪ್ರಾದೇಶಿಕ ಪಕ್ಷಗಳ ತಾಕತ್ತು ಏನು ಎನ್ನುವುದನ್ನು ಬಿಹಾರದ ಜನತೆ ತೋರಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮವರೊಂದಿಗೆ ಸೋಮವಾರ (ನ 9) ಮಾತನಾಡುತ್ತಿದ್ದ ಕುಮಾರಸ್ವಾಮಿ, ಬಿಹಾರದಲ್ಲಿ ನಿತೀಶ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರ ಪ್ರಾದೇಶಿಕ ಪಕ್ಷಗಳು ಬಿಜೆಪಿ ಮೈತ್ರಿಕೂಟಕ್ಕೆ ಸರಿಯಾದ ಪಾಠ ಕಲಿಸಿದೆ ಎಂದಿದ್ದಾರೆ.
ಬಿಹಾರದಲ್ಲಿ ಬಂದಂತಹ ಫಲಿತಾಂಶ ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಮರುಕಳಿಸಲಿದೆ. ಪ್ರಧಾನಿ ಮೋದಿಯವರು ಬರೀ ಮಾತನಾಡುವುದನ್ನು ಬಿಟ್ಟು ಮೊದಲು ದೇಶದ ಅಭಿವೃದ್ದಿಯತ್ತ ಗಮನ ಹರಿಸಲಿ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. (ಕುಮಾರಸ್ವಾಮಿಯ 5 ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಕಾಂಗ್ರೆಸ್)
ಬಿಹಾರ ಚುನಾವಣೆಯಲ್ಲಿ ಮೋದಿಯ ಮೋಡಿ ನಡೆಯಲಿಲ್ಲ. ಬರೀ ಭಾಷಣದಿಂದ ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು ಲೇವಡಿ ಮಾಡಿರುವ ಕುಮಾರಸ್ವಾಮಿ, ಕೇಂದ್ರ ಮತ್ತು ರಾಜ್ಯ ಸರಕಾರ ಎರಡೂ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ರೈತರ ಆತ್ಮಹತ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಘುವಾಗಿ ಪರಿಗಣಿಸಿದೆ. ಪರಿಸ್ಥಿತಿಯ ತೀವ್ರತೆಯನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಚ್ಚಾಡುವುದನ್ನು ಬಿಟ್ಟು ಕೆಲಸ ಮಾಡಿ, ಕುಮಾರಸ್ವಾಮಿ ಸಲಹೆ. ಮುಂದೆ ಓದಿ..

ಕಚ್ಚಾಡುವುದನ್ನು ಮೊದಲು ಬಿಡಿ
ಕಚ್ಚಾಡುವುದನ್ನು ಬಿಟ್ಟು, ಒಬ್ಬರ ಮೇಲೆ ಇನ್ನೊಬ್ಬರು ಗೂಬೆ ಕೂರಿಸುವುದನ್ನು ಬಿಟ್ಟು ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡದೇ ನಮಗೆ ಬೇರೆ ದಾರಿಯಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಎಚ್ಡಿಕೆ ಎಚ್ಚರಿಕೆ ನೀಡಿದ್ದಾರೆ.

ಕಳಸಾ - ಬಂಡೂರಿ ಹೋರಾಟ
ಕಳಸಾ - ಬಂಡೂರಿ ಹೋರಾಟ ಇಷ್ಟು ದಿನದಿಂದ ನಡೆಯುತ್ತಿದ್ದರೂ, ಬಿಜೆಪಿ ಅಥವಾ ಕಾಂಗ್ರೆಸ್ಸಿಗೆ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಮನಸ್ಸಿಲ್ಲ. ಈ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ - ಕುಮಾರಸ್ವಾಮಿ.

ಬಿಜೆಪಿಯ ಹದಿನೇಳು ಸಂಸದರು
ರಾಜ್ಯದ ಜನತೆ ಬಿಜೆಪಿಯ ಹದಿನೇಳು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದೆ. ಪ್ರಧಾನಿ ಮೋದಿಯವರಿಗೆ ಇದು ಅರ್ಥವಾಗಬೇಕು. ಬಿಜೆಪಿಯ ಸಂಸದರು, ರಾಜ್ಯವನ್ನು ಪ್ರತಿನಿಧಿಸುವ ಸಚಿವರು ಪ್ರಧಾನಿಗೆ ಒತ್ತಡ ಹೇರಬೇಕು, ಸರ್ವಪಕ್ಷಗಳ ನಿಯೋಗ ಮತ್ತೆ ದೆಹಲಿಗೆ ಹೋಗಬೇಕು - ಕುಮಾರಸ್ವಾಮಿ.

ಮೋದಿ ಮನಸ್ಸು ಮಾಡಿದರೆ ಆಗುತ್ತೆ
ಪ್ರಧಾನಿ ನರೇಂದ್ರ ಮೋದಿ ಮೂರು ರಾಜ್ಯಗಳ (ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ) ಮುಖ್ಯಮಂತ್ರಿಗಳ ಸಭೆ ಕರೆದು ವಿವಾದಕ್ಕೆ ನಾಂದಿ ಹಾಡಬೇಕು. ಮೋದಿಗೆ ಈ ಸಮಸ್ಯೆಯನ್ನು ಬಗೆಹರಿಸಲು ಮೊದಲು ಆಸಕ್ತಿ ಇರಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

24ಗಂಟೆಯನ್ನು ಸಾಲ ಮನ್ನಾ
ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು. ಇದು ನಾವು ನೀಡುತ್ತಿರುವ ಸುಳ್ಳು ಭರವಸೆಯಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications