ಬಿಜೆಪಿಗೆ ಬಂಡಾಯದ ಬಿಸಿ; ಜ.26ರ ಡೆಡ್‌ಲೈನ್ ಕೊಟ್ಟ ಮಾಜಿ ಶಾಸಕ!
ಬೆಂಗಳೂರು, ಜನವರಿ 17; ಕರ್ನಾಟಕ ಬಿಜೆಪಿಗೆ 2023ರ ಚುನಾವಣೆಯ ಹೊತ್ತಿನಲ್ಲಿಯೇ ಬಂಡಾಯದ ಬಿಸಿ ತಟ್ಟುವ ನಿರೀಕ್ಷೆ ಇದೆ. ಮಾಜಿ ಶಾಸಕರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡು ಸಿಡೆದೆದ್ದು ಡೆಡ್‌ಲೈನ್ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿತಟ್ಟಲಿದೆ. ಹಾಲಿ ಬಿಜೆಪಿ ಶಾಸಕರು ಇರುವ ಕ್ಷೇತ್ರದಲ್ಲಿಯೇ ಮಾಜಿ ಶಾಸಕರು ಅಸಮಾಧಾನಗೊಂಡಿದ್ದಾರೆ. ಪಕ್ಷದ ನಾಯಕರು ಇದನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕೆ. ಆರ್. ಪುರ ಕ್ಷೇತ್ರದ ಮಾಜಿ ಶಾಸಕ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ತಮ್ಮ ನಿಲುವು ತಿಳಿಸಿ ಎಂದು ಜನವರಿ 26ರ ತನಕ ಡೆಡ್‌ಲೈನ್ ನೀಡಿದ್ದಾರೆ. ಅವರ ಮುಂದಿನ ರಾಜಕೀಯ ತೀರ್ಮಾನ ಏನು?.
ಕ್ಷೇತ್ರದ ಹಾಲಿ ಶಾಸಕರು ಬೈರತಿ ಬಸವರಾಜ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರು. ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕೆ. ಆರ್. ಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ? ಎಂಬುದು ಈಗ ಗೊಂದಲಕ್ಕೆ ಕಾರಣವಾಗಿವೆ.

ಬೈರತಿ, ನಂದೀಶ್ ರೆಡ್ಡಿ ಜಟಾಪಟಿ
2018ರ ಚುನಾವಣೆಯಲ್ಲಿ ಬೈರತಿ ಬಸವರಾಜ ಕೆ. ಆರ್. ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 1,35,404 ಮತಗಳನ್ನು ಪಡೆದು ಜಯಗಳಿಸಿದ್ದರು. ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಎನ್. ಎಸ್. ನಂದೀಶ್ ರೆಡ್ಡಿ 102,675 ಮತಗಳನ್ನು ಪಡೆದು ಸೋಲು ಕಂಡಿದ್ದರು. ಆದರೆ ಈಗ ಬೈರತಿ ಬಸವರಾಜ ಬಿಜೆಪಿಯಲ್ಲಿದ್ದಾರೆ. ಹಾಲಿ ಸಚಿವರು ಟಿಕೆಟ್ ನಿರಾಕರಣೆ ಮಾಡುವುದು ಕಷ್ಟ. ಆದ್ದರಿಂದ ನಂದೀಶ್ ರೆಡ್ಡಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ಹೀಗಾಗಿ ಪಕ್ಷದ ನಾಯಕರ ನಿಲುವು ತಿಳಿಯಲು ಅವರು ಬಯಸಿದ್ದಾರೆ.

ಪಕ್ಷದಲ್ಲಿ ನಿರ್ಲಕ್ಷ್ಯ ಆರೋಪ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿದ ಬೈರತಿ ಬಸವರಾಜ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ನಂದೀಶ್ ರೆಡ್ಡಿ ಅನಿವಾರ್ಯವಾಗಿ ಕ್ಷೇತ್ರವನ್ನು ಅವರಿಗೆ ಬಿಟ್ಟುಕೊಟ್ಟರು. ಆದರೆ ಈಗ ಚುನಾವಣೆ ಎದುರಾಗಿದೆ. ಪಕ್ಷದಲ್ಲಿನ ನಿರ್ಲಕ್ಷ್ಯ, ಕಾರ್ಯಕರ್ತರ ಕಡೆಗಣನೆಯಿಂದ ನಂದೀಶ್ ರೆಡ್ಡಿ ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ನಿಮ್ಮ ತೀರ್ಮಾನ ತಿಳಿಸಿ ಎಂದು ಪಕ್ಷದ ನಾಯಕರಿಗೆ ಜನವರಿ 26ರ ತನಕ ಗುಡುವು ನೀಡಿದ್ದಾರೆ.

ಬಿಜೆಪಿಯಿಂದ ಮನವೊಲಿಕೆ
ನಂದೀಶ್ ರೆಡ್ಡಿ ಅಸಮಾಧಾನವನ್ನು ತಣ್ಣಗಾಗಿಸಲು ಬಿಜೆಪಿ ಪ್ರಯತ್ನ ನಡೆಸಿದೆ. ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ನಂದೀಶ್ ರೆಡ್ಡಿ ಭೇಟಿಯಾಗಲು ಬಂದಿದ್ದರು. ಈ ಸಂದರ್ಭದಲ್ಲಿ ನಂದೀಶ್ ರೆಡ್ಡಿ ಬೆಂಬಲಿಗರು ಸತೀಶ್ ರೆಡ್ಡಿಗೆ ಘೇರಾವ್ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಕ್ಷೇತ್ರ ಶಾಸಕ ಬೈರತಿ ಬಸವರಾಜ ವಿರುದ್ಧ ಸಹ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಕೆ. ಆರ್. ಪುರ ಕ್ಷೇತ್ರದ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ರೆಡ್ಡಿ?
ಕೆ. ಆರ್. ಪುರ ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಕಾಂಗ್ರೆಸ್‌ಗೆ ವರವಾಗುವ ನಿರೀಕ್ಷೆ ಇದೆ. ಕ್ಷೇತ್ರದಲ್ಲಿ ಜೆಡಿಎಸ್ ಅಷ್ಟು ಪ್ರಭಾವ ಹೊಂದಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಡಿ. ಎ. ಗೋಪಾಲ್ 6,578 ಮತಗಳನ್ನು ಮಾತ್ರ ಪಡೆದಿದ್ದರು. 2019ರ ಉಪ ಚುನಾವಣೆಯಲ್ಲಿ ಬಿಜೆಪಿಯ ಬೈರತಿ ಬಸವರಾಜ 63,405 ಮತ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ. ನಾರಾಯಣಸ್ವಾಮಿ 76,428 ಮತಗಳನ್ನು ಪಡೆದು ಸೋಲು ಕಂಡಿದ್ದರು.
ನಂದೀಶ್ ರೆಡ್ಡಿ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಇದೆ. ಒಂದು ವೇಳೆ ಬಿಜೆಪಿ ನಾಯಕರು ತಮ್ಮ ನಿರ್ಧಾರ ಪ್ರಕಟಿಸದಿದ್ದರೆ ಅವರು ಕಾಂಗ್ರೆಸ್ ಸೇರಲಿದ್ದಾರೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.












Click it and Unblock the Notifications