ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಆಗುವುದಿಲ್ಲ
ಮಹಾದಾಯಿಯಲ್ಲಿ ವಾರ್ಷಿಕ ಹರಿವು ಹೆಚ್ಚುವರಿಯಾಗಿಯೇ ಇದೆ ಎಂದು ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ (ಎನ್ಡಬ್ಲ್ಯೂಡಿಎ) ವರದಿ ಸಲ್ಲಿಸಿದ್ದರೂ, ಮಹಾರಾಷ್ಟ್ರದ ನಾಗಪುರದಲ್ಲಿರುವ ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್ಸ್ಟಿಟ್ಯೂಟ್ ನೀರಿ' ಅಧ್ಯಯನ ನಡೆಸಿ ಮಹದಾಯಿ ತಿರುವು ಯೋಜನೆಯಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲವೆಂದೂ ಮತ್ತು ಮಹದಾಯಿ ಕಣಿವೆ ನೀರಿನ ಕೊರತೆ ಇರುವ ಪ್ರದೇಶ ಅಲ್ಲವೇ ಅಲ್ಲವೆಂದೂ ತಿಳಿಸಿವೆ.
ಕೇಂದ್ರ ಜಲ ಆಯೋಗವೂ ಇದನ್ನು ಒಪ್ಪಿಕೊಂಡಿದೆ. ಹೀಗಿದ್ದರೂ ಹೆಚ್ಚುವರಿ ನೀರು ಲಭ್ಯವಿದೆ ಎಂದು ಸಾಬೀತುಪಡಿಸಲು ಈ ಹಂತದಲ್ಲಿ ಕರ್ನಾಟಕ ರಾಜ್ಯ ವಿಫಲವಾಗಿದೆ ಎಂದು ನ್ಯಾಯಾದೀಕರಣ ಹೇಳಲು ಕಾರಣವೇನು.? ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಆ ಸಂಸ್ಥೆಗಳ ವರದಿ ಪರಿಗಣಿಸಲು ಯೋಗ್ಯವಲ್ಲವೇ.? ಈಗ ಕಾಣದ ಹೆಚ್ಚುವರಿ ನೀರು, ಈಗ ಪರಿಗಣನೆಗೆ ಬಾರದ ಅದ್ಯಯನ ವರದಿಗಳು ಮತ್ತು ಕರ್ನಾಟಕದ ವಾದಗಳು ಅಂತಿಮ ತೀರ್ಪಿನಲ್ಲಿ ಗಣನೆಗೆ ಬರಲು ಸಾದ್ಯವೇ.?
ಗೋವಾ ಪರ ವಾದ ಮಂಡಿಸಿರುವ ಗೋವಾ ಅಡ್ವೊಕೇಟ್ ಜನರಲ್ ಆಗಿರುವ ಆತ್ಮಾರಾಮ್ ನಾಡಕರ್ಣಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಹ ಆಗಿರುವುದರಿಂದ ಕೇಂದ್ರ ಸರ್ಕಾರದ ವಾದವೂ ಅದೇ ಎನ್ನಬಹುದೇ.? ಹಾಗಿದ್ದಲ್ಲಿ ಈಗ ಬಂದಿರುವ ಮದ್ಯಂತರ ತೀರ್ಪಿನಲ್ಲಿ ಕೇಂದ್ರದ ಪಾತ್ರವಿದೆ ಎನ್ನಬಹುದೇ.? ಗೋವಾ ಒಪ್ಪದ ಅದ್ಯಯನ ವರದಿಗಳನ್ನು ನ್ಯಾಯಾದೀಕರಣವೂ ಒಪ್ಪದಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ನದಿಗಳು ಸಮುದ್ರ ಸೇರುವ ಮುನ್ನ ಸಂಬಂಧಪಟ್ಟ ರಾಜ್ಯಗಳಿಗೆ ಬಳಕೆಗೆ ಸಿಗುತ್ತದೆ. ಆದ್ದರಿಂದ ಮಹದಾಯಿ ನದಿ (ಅದರ ಬಳಕೆಗಳ ಹೊರತಾಗಿಯೂ) ಅರಬ್ಬಿ ಸಮುದ್ರ ಸೇರುವುದರಿಂದ ನೀರು ವ್ಯರ್ಥವಾಗುತ್ತಿದೆ ಎಂದು ಹೇಳಲು ಬರುವುದಿಲ್ಲ ಎಂದು ನ್ಯಾಯಾದೀಕರಣ ಹೇಳಿದೆ. ಮಹದಾಯಿ/ಮಾಂಡೋವಿ ಒಟ್ಟು ನದಿ ಪಾತ್ರದಲ್ಲಿ ಲಬ್ಯವಿರುವ ನೀರಿನ ಬಹುತೇಕ ಪ್ರಮಾಣದ ನೀರು ಸಮುದ್ರಕ್ಕೆ ಸೇರುವುದು ವ್ಯರ್ಥವಲ್ಲವೇ.? ಕೃಷ್ಣಾ, ಕಾವೇರಿ ನದಿ ಹರಿಯುವ ಪಾತ್ರಗಳಲ್ಲಿ ಕೂಡ ಬೃಹತ್ ಯೋಜನೆಗಳ ಮೂಲಕ ನೀರು ವರ್ಗಾಯಿಸಿ ಜನರ ಅಗತ್ಯ ಬಳಕೆಗೆ ಬಳಸಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಸರಕಾರ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ ಎಂದು ನ್ಯಾಯಾದೀಕರಣ ಹೇಳಿದೆ. ನೀರು ಹಂಚಿಕೆ ಆದ ಮೇಲೆ ಅರಣ್ಯ ಇಲಾಖೆ ಅನುಮತಿ ನೀಡಲಿದೆ ಎಂಬುದು ರಾಜ್ಯದ ವಾದ. ಹಾಗಿದ್ದಲ್ಲಿ ಯೋಜನೆಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಲು ಇರುವ ಮಾನದಂಡವೇನು.? ನೀರಿನ ಹಂಚಿಕೆಯೋ ಅಥವಾ ಯೋಜನೆಯಿಂದ ಪರಿಸರದಲ್ಲಾಗುವ ಪರಿಣಾಮಗಳೋ.? ಯೋಜನಾ ವರದಿ ಮತ್ತು ನೀಲಿ ನಕ್ಷೆ ಆಧಾರದ ಮೇಲೆ ಅರಣ್ಯ ಇಲಾಖೆ ಅನುಮತಿ ನಿರ್ದಾರ ಆಗುವುದಲ್ಲವೇ.? ಇನ್ನು, ಕುಡಿಯುವ ನೀರಿನ ಯೋಜನೆ ಆದರೂ ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೇ ಯೋಜನೆಯ ಅನುಮತಿ ಹೇಗೆ ಸಾದ್ಯ. ಕರ್ನಾಟಕ ಸರಕಾರದ ಅರಿವಿಗೆ ಇದು ಬಂದಿಲ್ಲವೇ.?












Click it and Unblock the Notifications