ರಾಜ್ಯಸಭೆಗೆ ಖರ್ಗೆ: ಸೋನಿಯಾ ಪ್ರಬುದ್ದ ನಡೆಯ ಹಿಂದಿನ ಕಾರಣ 'ಪ್ರಧಾನಿ ಮೋದಿ'
ನಾಲ್ಕು ದಶಕಗಳಿಂದ ಸೋಲಿಲ್ಲದ ಸರದಾರನಂತೆ ಜನಪ್ರತಿನಿಧಿಯಾಗಿ ಆಯ್ಕೆಯಾಗುತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ಮಲ್ಲಿಕಾರ್ಜುನ ಖರ್ಗೆ, ಕಳೆದ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿಯ 'ವಿಶೇಷ ಮುತುವರ್ಜಿ'ಯಿಂದ ಪರಾಭವಗೊಂಡಿದ್ದರು.
Recommended Video
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಕ್ಷವನ್ನು ಮುನ್ನಡೆಸುವ ನಾಯಕನ ಕೊರತೆಯಲ್ಲಿದ್ದ ಸೋನಿಯಾ ಗಾಂಧಿ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದು ಅಧೀರ್ ರಂಜನ್ ಚೌಧಿರಿಯವರನ್ನು. ಆದರೆ, ಅವರಿಂದ ಎಡವಟ್ಟಾಗಿದ್ದೇ ಹೆಚ್ಚು.
ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ ಎನ್ನುವ ಸುದ್ದಿ, ಹಿಂದೆಯೂ ಹರಿದಾಡುತ್ತಿತ್ತು. ಯಾಕೆಂದರೆ, ಸಂಸತ್ತಿನಲ್ಲಿ, ಕಾಂಗ್ರೆಸ್ಸಿಗೆ ಕಾಡುತ್ತಿದ್ದ ಸಮರ್ಥ ನಾಯಕನ ಕೊರತೆ. ಅದರ ಭಾಗವೇ, ಖರ್ಗೆ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು.
ಇಲ್ಲಿ ಗಮನಿಸಬೇಕಾದ ವಿಚಾರವೇನಂದರೆ, ಬೆಂಗಳೂರಿನಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆ ನಡೆಯುತ್ತಿದ್ದರೆ, ಅತ್ತ, ಸೋನಿಯಾ ಗಾಂಧಿ, ಖರ್ಗೆ ಅಭ್ಯರ್ಥಿ ಎಂದು ಪ್ರಕಟಿಸಿಯಾಗಿತ್ತು. ಸೋನಿಯಾ ಪ್ರಬುದ್ದ ನಡೆಯ ಹಿಂದೆ, ಒಂದರ್ಥದಲ್ಲಿ ಪ್ರಧಾನಿ ಮೋದಿಯೇ ಕಾರಣ:

ಸೋನಿಯಾ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಖರ್ಗೆ
ಪಕ್ಷ ನಿಷ್ಠೆಗೆ ಹೆಸರಾಗಿರುವ ಮತ್ತು ಸೋನಿಯಾ ಗಾಂಧಿ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವುದರಲ್ಲಿ ಯಾವುದೇ ಸಂದೇಹ ಇರಲಿಲ್ಲ. ಕೆಪಿಸಿಸಿ ಘಟಕದ ಶಿಫಾರಸಿಗೆ ಕಾಯದೇ, ಸೋನಿಯಾ ಗಾಂಧಿ ನೇರವಾಗಿ, ಖರ್ಗೆಯವರನ್ನು ಅಭ್ಯರ್ಥಿಯಾಗಿ ಘೋಷಿಸಿ ಬಿಟ್ಟರು.

ಹಿಂದಿ ಮತ್ತು ಉರ್ದುವಿನಲ್ಲಿ ಲೀಲಾಜಾಲವಾಗಿ ಮಾತನಾಡುವ ಖರ್ಗೆ
ಹಿಂದಿ ಮತ್ತು ಉರ್ದುವಿನಲ್ಲಿ ಲೀಲಾಜಾಲವಾಗಿ ಮಾತನಾಡುವ ಮಲ್ಲಿಕಾರ್ಜುನ ಖರ್ಗೆ, ಹಲವು ಬಾರಿ ಸಂಸತ್ತಿನಲ್ಲಿ ಪ್ರಧಾನಿ ಮೋದಿಯನ್ನು ಮಾತಿನಲ್ಲಿ ಕಟ್ಟಿ ಹಾಕಿದ್ದರು. ಸಹನೆ ಕಳೆದುಕೊಳ್ಲದೇ, ಪಕ್ಷದ ಸಂಖ್ಯಾಬಲದ ಕೊರತೆಯಿದ್ದರೂ, ಎನ್ಡಿಎ ಸರಕಾರವನ್ನು ಕಳೆದ ಬಾರಿ ಲೋಕಸಭೆಯಲ್ಲಿ ತಿರುಗೇಟು ನೀಡಿದ್ದರು.

ಮೋದಿಯವರನ್ನು ಎದುರಿಸಲು ಖರ್ಗೆಯೇ ಸೂಕ್ತ
ರಾಜಕೀಯವಾಗಿ ಬಿಜೆಪಿ ಮತ್ತು ಅದರಲ್ಲೂ ಪ್ರಮುಖವಾಗಿ ಮೋದಿಯವರನ್ನು ಎದುರಿಸಲು ಖರ್ಗೆಯೇ ಸೂಕ್ತ ಆಯ್ಕೆಯೆಂದು ಯಾವುದೇ ತಡಮಾಡದೇ ಸೋನಿಯಾ ಗಾಂಧಿ, ಖರ್ಗೆಯ ಹೆಸರನ್ನು ಪ್ರಕಟಿಸಿಬಿಟ್ಟರು. ಆ ಮೂಲಕ, ಪಕ್ಷ ನಿಷ್ಠೆಗೂ ಬೆಲೆ ಕೊಟ್ಟಂತಾಯಿತು ಮತ್ತು ಮೋದಿಯನ್ನು ಎದುರಿಸುವ ನಾಯಕನನ್ನೂ ಆರಿಸಿದಂತಾಯಿತು, ಇದು ಸೋನಿಯಾ ಇಟ್ಟ ತೂಕದ ಹೆಜ್ಜೆಯೆಂದೇ ವ್ಯಾಖ್ಯಾನಿಸಲಾಗುತ್ತಿದೆ.

ರಾಜ್ಯಸಭೆಗೆ ಬಹುತೇಕ ಖರ್ಗೆ ಆಯ್ಕೆ
ಕಳೆದ ಅಂದರೆ ಹದಿನಾರನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಖರ್ಗೆ, ಅತ್ಯಂತ ಸಮರ್ಥವಾಗಿ ತಮ್ಮ ಹುದ್ದೆಯನ್ನು ನಿಭಾಯಿಸಿದ್ದರು. ಹತ್ತು ಹಲವು ಬಾರಿ ಮೋದಿ ಸೇರಿದಂತೆ, ಆಡಳಿತ ಪಕ್ಷದ ಸಚಿವರ/ಸಂಸದರ ಬಾಯಿ ಮುಚ್ಚಿಸಿದ್ದರು. ಖರ್ಗೆಯವರೇ ಹೇಳುವಂತೆ, "ಬಿಜೆಪಿಯವರು ವಿಶೇಷ ಕಾಳಜಿವಹಿಸಿ ನನ್ನನ್ನು ಸೋಲಿಸಿದರೆಂದು". ಈಗ, ರಾಜ್ಯಸಭೆಗೆ ಅವರನ್ನು ಕರೆಸಿಕೊಳ್ಳುವ ಮೂಲಕ, ಸೋನಿಯಾ ಸರಿಯಾದ ಹೆಜ್ಜೆಯನ್ನು ಇಟ್ಟಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.












Click it and Unblock the Notifications