R Ashok vs DK Suresh ಅಶೋಕ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅಥವಾ ರಘುನಾಥ ನಾಯ್ಡು?
ಬೆಂಗಳೂರು, ಏಪ್ರಿಲ್. 19: ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜಧಾನಿಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಕ್ಷೇತ್ರ ಪದ್ಮನಾಭನಗರ. ಏಕೆಂದರೇ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಲ್ಲಿಂದ ಸ್ಪರ್ಧಿಸುತ್ತಿರುವ ಆರ್.ಅಶೋಕ್ ಅವರು ಕನಕಪುರದಿಂದಲೂ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಡಿಕೆ ಸಹೋದರರು ಅಶೋಕ್ ಅವರನ್ನು ಕಟ್ಟಿಹಾಕಲು ರಣತಂತ್ರ ಹೂಡುತ್ತಿದ್ದಾರೆ.
ಪದ್ಮನಾಭನಗರಕ್ಕೆ ಕಾಂಗ್ರೆಸ್ ಈ ಮೊದಲೇ ಅಭ್ಯರ್ಥಿಯನ್ನು ಘೋಷಿಸಿತ್ತು. ಆದರೆ, ಯಾವಾಗ ಬಿಜೆಪಿ ಆರ್.ಅಶೋಕ್ ಅವರನ್ನು ಪದ್ಮನಾಭನಗರ ಮತ್ತು ಕನಕಪುರ ಎರಡು ಕಡೆ ಘೋಷಿಸಿತೋ ಆಗ ಕಾಂಗ್ರೆಸ್‌ನಲ್ಲಿ ಬದಲಾವಣೆಗಳು ಆರಂಭವಾದವು. ಪದ್ಮನಾಭನಗರದ ಅಭ್ಯರ್ಥಿಗೆ ಬಿ ಫಾರಂ ನೀಡದೇ ಡಿಕೆ ಶಿವಕುಮಾರ್ ಹೊಸ ಪ್ರಯೋಗಕ್ಕೆ ಮುಂದಾಗಿದ್ದರು. ಈಗ ಬಿ ಫಾರಂ ನೀಡಲಾಗಿದ್ದು, ಅವರು ನಾಮಪತ್ರ ಸಲ್ಲಿಸಿದ್ದಾರೆ.

ಆದರೂ, ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಮಾತ್ರ ಇನ್ನು ಕಗ್ಗಂಟಾಗಿ ಉಳಿದಿದೆ. ಆರ್.ಅಶೋಕ್ ತನ್ನ ಕ್ಷೇತ್ರದತ್ತ ಗಮನ ಹರಿಸುವಂತೆ ಮಾಡಲು ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸುವ ಮಾತುಗಳು ಗಟ್ಟಿಯಾಗಿ ಕೇಳಿ ಬಂದಿವೆ. ಡಿಕೆ. ಶಿವಕುಮಾರ್ ಕೂಡ ತಮ್ಮ ಸಹೋದರ ಇಲ್ಲಿಂದ ಕಣಕ್ಕಿಳಿಯುತ್ತಾರೆ ಎಂಬ ಮುನ್ಸೂಚನೆ ನೀಡಿದ್ದಾರೆ.
ಪದ್ಮನಾಭನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಘುನಾಥ ನಾಯ್ಡು, ಡಿಕೆ ಸುರೇಶ್ ಪರವಾಗಿ ಬ್ಯಾಟ್ ಬಾರಿಸಿದ್ದಾರೆ. "ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧಿಸಲು ಬಂದರೆ ಕ್ಷೇತ್ರ ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ. ಆರ್.ಅಶೋಕ್ರನ್ನು ಎರಡೂ ಕಡೆ ಸೋಲಿಸುವುದೇ ನಮ್ಮ ಗುರಿ. 25 ರಿಂದ 30 ಸಾವಿರ ಮಗಳ ಅಂತರದಲ್ಲಿ ಆರ್.ಅಶೋಕ್ ಅವರನ್ನು ಸೋಲಿಸುತ್ತೇವೆ " ಎಂದು ಹೇಳಿಕೆ ನೀಡಿದ್ದಾರೆ.
"ಡಿ.ಕೆ.ಸುರೇಶ್ ಬಂದರೆ ಕ್ಷೇತ್ರ ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ. ನಾಳೆ ಮಧ್ಯಾಹ್ನ 2.30ರ ವರೆಗೂ ಇನ್ನೂ ಕಾಲಾವಕಾಶ ಇದೆ. ಅವರು ನಾಮಪತ್ರ ಸಲ್ಲಿಸುತ್ತಾರೆ ಎಂದು ನನಗೆ ತಿಳಿಸಿದ್ದಾರೆ. ಹೈಕಮಾಂಡ್ ಆದೇಶದಂತೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ನಮ್ಮ ಆಸ್ತಿ ಇದ್ದಂತೆ. ಅವರ ವಿರುದ್ಧವಾಗಿ ಏನು ನಡೆಯುವುದಿಲ್ಲ. ಅವರು ಹೇಳಿದಂತೆ ನಡೆಯುತ್ತೇವೆ. ನಂದು ಯಾವಾಗಲು ಒಂದೇ ಮಾತು" ಎಂದು ಪದ್ಮನಾಭನಗರ ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, "ಪದ್ಮನಾಭನಗರ ಕ್ಷೇತ್ರದಿಂದ ಸಂಸದ ಡಿಕೆ ಸುರೇಶ್ ಮತ್ತು ರಘುನಾಥ ನಾಯ್ಡು ಕೂಡ ನಾಮಪತ್ರ ಸಲ್ಲಿಸುತ್ತಾರೆ. ನಾನೂ ಕೂಡ ನಾಮಪತ್ರ ಸಲ್ಲಿಸುವ ವೇಳೆ ಜೊತೆಯಲ್ಲಿ ಇರುತ್ತೇನೆ, ರಘುನಾಥ ನಾಯ್ಡು ಇಲ್ಲಿ ಗೆಲ್ಲುವ ವಾತಾವರಣ ಇದೆ. ಇಬ್ಬರು ನಾಮಪತ್ರ ಸಲ್ಲಿಸಿದ್ದರೂ ಅಂತಿಮವಾಗಿ ಯಾರು ಕಣದಲ್ಲಿ ಉಳಿಯುತ್ತಾರೆ ಎನ್ನುವುದು ಹೈಕಮಾಂಡ್ ನಿರ್ಧಾರದ ಬಳಿಕ ತಿಳಿಯಲಿದೆ" ಎಂದಿದ್ದಾರೆ.
ಇನ್ನು, ಸಂಸದ ಡಿಕೆ ಸುರೇಶ್ ಕೂಡ, "ಪದ್ಮನಾಭನಗರ ಮತಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಸೂಚನೆಗಾಗಿ ಕಾಯುತ್ತಿದ್ದೇನೆ. ಸ್ವತಃ ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಅವರೇ ನನಗೆ ಆಹ್ವಾನ ನೀಡಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ. ಸದ್ಯ ರಘುನಾಥ ನಾಯ್ಡು ನಾಮಪತ್ರ ಸಲ್ಲಿಸಿದ್ದು, ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವ ಕಾರಣ ಡಿಕೆ ಸುರೇಶ್ ಏನು ಮಾಡುತ್ತಾರೆ ಎಂಬುದನ್ನು ಕಾದು ನೊಡಬೇಕಿದೆ.












Click it and Unblock the Notifications