ಶಿವಮೊಗ್ಗ ಫಲಿತಾಂಶ ಬಗ್ಗೆ ಏನೂ ಹೇಳೋಲ್ಲ : ಗೀತಾ

Posted By:
Subscribe to Oneindia Kannada

ಬೆಂಗಳೂರು, ಏ. 17 : ಹದಿನಾರನೇ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಮತದಾನ ಆರಂಭಗೊಂಡಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾನಕ್ಕಾಗಿ ಒಟ್ಟು 54,264 ಮತಗಟ್ಟೆಗಳನ್ನು ತೆರೆಯಲಾಗಿದೆ.

ಜನರ ಬೆಂಬಲವಿದೆ, ಫಲಿತಾಂಶದ ಬಗ್ಗೆ ಗೊತ್ತಿಲ್ಲ : ಶಿವಮೊಗ್ಗ ಕ್ಷೇತ್ರದಲ್ಲಿ ಜನರು ಉತ್ತಮ ಬೆಂಬಲ ನೀಡಿದ್ದಾರೆ. ಆದರೆ, ಫಲಿತಾಂಶದ ಬಗ್ಗೆ ಏನೂ ಹೇಳಲಾರೆ ಎಂದು ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪತಿ ಶಿವರಾಜ್ ಕುಮಾರ್ ಅವರ ಜೊತೆ ಮತದಾನ ಮಾಡಿದ ನಂತರ ಮಾತನಾಡಿದ ಅವರು, ಪ್ರಚಾರಕ್ಕೆ ತೆರಳಿದಾಗ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಫಲಿತಾಂಶದ ಬಗ್ಗೆ ನಾವು ಆಲೋಚಿಸಿಲ್ಲ, ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲಿದೆ : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗುರುವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮೈಸೂರು ತಾಲೂಕು ಸಿದ್ದರಾಮಯ್ಯನಹುಂಡಿಯಲ್ಲಿ ಸಿದ್ದರಾಮಯ್ಯ ಮತಚಲಾಯಿಸಿದರು. ನಂತರ ಮಾತನಾಡಿದ ಅವರು, ಮತದಾನ ಮಾಡುವುದು ಎಲ್ಲರ ಕರ್ತವ್ಯ, ಎಲ್ಲರೂ ಮತದಾನ ಮಾಡಬೇಕೆಂದು ಕರೆ ನೀಡಿದರು.

ಹಾಸನದಲ್ಲಿ ಗೆಲುವು ನನ್ನದು : ಹಾಸನದಲ್ಲಿ ಗೆಲುವು ನನ್ನದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಹೊಳೆ ನರಸೀಪುರದ ತಾಲೂಕಿನ ಪಡುವಲಹಿಪ್ಪೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿ ಎಚ್.ಡಿ.ದೇವೇಗೌಡ, ಬೇರೆ ರಾಜ್ಯಗಳಲ್ಲಿ ಪ್ರಚಾರ ನಡೆಸಲು ತಾವು ತೆರಳುವುದಿಲ್ಲ. ಹಾಸನದಲ್ಲಿಯೇ 1 ತಿಂಗಳು ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನನ್ನ ಕ್ಷೇತ್ರದ ಜನರೊಂದಿಗೆ ನಾನು ಸಮಯ ಕಳೆಯಬೇಕಾಗಿದೆ ಎಂದರು.

hd devegowda

ಗೆಲುವು ನಮ್ಮದು : ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಬೆಂಗಳೂರಿನ ಗಿರಿನಗರದ ಆಡ್ಸನ್ ಶಾಲೆಯ ಅವರಣದಲ್ಲಿ ಮತ ಚಲಾಯಿಸಿದರು. ನಂತರ ಮಾತನಾಡಿದ ಅವರು, ದೇಶದ ಜನರು ಬದಲಾವಣೆ ಬಯಸುತ್ತಿದ್ದಾರೆ. ಆದ್ದರಿಂದ ಬಿಜೆಪಿಗೆ ಮತ ನೀಡಲಿದ್ದಾರೆ. ಮೈಸೂರಿನಲ್ಲಿ ನಮ್ಮ ಗೆಲುವು ಖಚಿತ ಅದರ ಅಂತರ ಎಷ್ಟು ಎಂದು ನಾವು ಆಲೋಚಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. [ಯಾರು ಮತದಾನ ಮಾಡಿದರು ಚಿತ್ರ ನೋಡಿ]

ಪರಮೇಶ್ವರ್ ಮತದಾನ : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತುಮಕೂರಿನ ಸಿದ್ಧಾರ್ಥ ನಗರದ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಿಯೂ ಮೋದಿ ಅಲೆ ಇಲ್ಲ. ಇದು ಬಿಜೆಪಿ ಸೃಷ್ಠಿ ಮಾಡಿರುವ ನಾಟಕ. ಯುಪಿಎ 1 ಮತ್ತು 2 ದೇಶಕ್ಕೆ ಉತ್ತಮ ಸರ್ಕಾರ ನೀಡಿದೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿದ್ದು, ಯುಪಿಎ 3ನೇ ಬಾರಿ ಅಧಿಕಾರ ಪಡೆಯುವುದು ಖಚಿತ ಎಂದು ಹೇಳಿದರು.

ನನ್ನ ಮತ ನಾನೇ ಹಾಕಿಕೊಂಡಿದ್ದು ಖುಷಿ : ನನ್ನ ಮತವನ್ನು ನಾನೇ ಹಾಕಿಕೊಂಡಿದ್ದು ಖುಷಿ ನೀಡಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಹೇಳಿದ್ದಾರೆ. ಮೈಸೂರಿನ ಶ್ರೀರಾಮಪುರದ ಸೆಂಟ್ ಮೇರಿಸ್ ಶಾಲೆಯಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಅವರು, ಶಾಂತಿಯುತ ಮತದಾನಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸುತ್ತೂರು ಶ್ರೀಗಳಿಂದ ಮತದಾನ : ಸುತ್ತೂರು ಮಠದ ಶಿವಮೂರ್ತಿ ದೇಶೀಕೇಂದ್ರ ಸ್ವಾಮೀಜಿಯವರು ಜೆಎಸ್ಎಸ್ ವಾಕ್ ಶ್ರಮಣ ಸಂಸ್ಥೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿದ ಅವರು ಉತ್ತಮ ಮತ್ತು ಸುಭದ್ರ ದೇಶ ನಿರ್ಮಾಣಕ್ಕಾಗಿ ಎಲ್ಲರೂ ಮತದಾನ ಮಾಡಬೇಕು, ದೇಶದ ಪ್ರತಿಯೊಬ್ಬ ನಾಗರೀಕರು ತನ್ನ ಹಕ್ಕು ಚಲಾಯಿಸಬೇಕು ಎಂದು ಕರೆ ನೀಡಿದರು.

ರಮ್ಯಾ ಮತದಾನ : ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಡ್ಯದ ವಿದ್ಯಾನಗರದ ಮತಗಟ್ಟೆ ಸಂಖ್ಯೆ 168ರಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿದ ಅವರು, ನಿವು ಮತ ನೀಡುವ ಅಭ್ಯರ್ಥಿ ಎಷ್ಟು ಕೆಲಸ ಮಾಡಿದ್ದಾರೆ, ಮಾಡುತ್ತಾರೆ ಎಂಬುದನ್ನು ತಿಳಿದು ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಹೇಳಿದರು. ಉಪ ಚುನಾವಣೆಯಲ್ಲಿ ಜಯಗಳಿಸಿದ ನಂತರ ಕ್ಷೇತ್ರದಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಆದ್ದರಿಂದ ಜನರು ನನಗೆ ಮತ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಯಡಿಯೂರಪ್ಪ ಮತದಾನ : ಬೆಳಗ್ಗೆ 7 ಗಂಟೆಗೆ ಶಿಕಾರಿಪುರದ ಆಡಳತ ಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಮತದಾನ ಮಾಡಿದರು. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಯಡಿಯೂರಪ್ಪ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಅವರ ಜೊತೆಗಿದ್ದರು. [28 ಕ್ಷೇತ್ರದ ಹಣೆಬರಹ ನೀವು ನಿರ್ಧರಿಸಿ]

ಮತದಾನದ ನಂತರ ಮಾತನಾಡಿದ ಯಡಿಯೂರಪ್ಪ, ದೇಶದ ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ತಪ್ಪದೇ ಮತ ಮತದಾನ ಮಾಡಿ ಎಂದು ಕರೆ ನೀಡಿದರು. ದೇಶದಲ್ಲಿ ನರೇಂದ್ರ ಮೋದಿ ಅವರ ಅಲೆ ಇದೆ. ಯುಪಿಎ ಸರ್ಕಾರದ ದುರಾಡಳಿತವನ್ನು ನೋಡಿದ ಜನತೆ ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. [ಯಡಿಯೂರಪ್ಪ ಮತದಾನದ ಚಿತ್ರಗಳು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2014 : Voting for the lok sabha election in Karnataka began on Thursday, April 17 7 am. Voting is taking place in 28 seats in Karnataka. here is Reactions of Political Leaders after voting.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ